

ಸೌಂದರ್ಯ ಹೆಣ್ಮಕ್ಕಳಿಗೆ ಸರ್ವಸ್ವ. ಅದೆಷ್ಟೇ ನೋವಿರಲಿ, ಮನದಲ್ಲಿ ಚಿಂತೆ ಇರಲಿ, ಒಮ್ಮೆ ಕನ್ನಡಿ ಮುಂದೆ ನಿಂತರೆ ಸಮಾಧಾನ. ಕೆಲವರಂತೂ ಬ್ಯೂಟಿ ಸಲೂನ್ನಲ್ಲೇ ದಿನ ಕಳೆಯುತ್ತಾರೆ. ಅಂದ, ಚೆಂದ ಹೆಚ್ಚಿಸಿಕೊಂಡು ಖುಷಿ ಪಡುತ್ತಾರೆ. ಅಂಥವರಿಗೊಂದು ಸಣ್ಣ ಸಲಹೆ. ಬ್ಯೂಟಿಷಿಯನ್ಗಳಿಗೆ ನಿಮ್ಮ ತಲೆ ಕೊಡುವ ಮುನ್ನ ಕೊಂಚ ಎಚ್ಚರವಿರಲಿ. ಇಲ್ಲವಾದರೆ ನೀವು ಸ್ಟ್ರೋಕ್ಗೆ ಒಳಗಾಗಬಹುದು!
ಮುಖದ ಅಂದದ ಜತೆಗೆ ಕೈ, ಕಾಲುಗಳ ಉಗುರು, ಪಾದ ಸ್ವಚ್ಛಗೊಳಿಸುವುದು ಹಾಗೂ ಹೆಡ್ ಮಸಾಜ್ ಮಾಡಿಸಿಕೊಳ್ಳುವುದು ಈಗ ಟ್ರೆಂಡ್ ಆಗಿದೆ. ಅದೇನು ತಪ್ಪಲ್ಲ. ಆದರೆ ನಿಮ್ಮ ಅಂದ ಹೆಚ್ಚಿಸುವಾಗ ಬ್ಯೂಟಿಷಿಯನ್ಗಳು ಒಂದು ಸಣ್ಣ ತಪ್ಪು ಮಾಡಿದರೂ ನೀವು ಜೀವನವೆಲ್ಲ ಬೆಡ್ ಮೇಲೆ ಕೊಳೆಯಬೇಕಾಗಬಹುದು! ಹೌದು. ಬ್ಯೂಟಿ ಪಾರ್ಲರ್ ಸ್ಟ್ರೋಕಸಿಂಡ್ರೋಮ್ ಎಂಬ ಗುಮ್ಮ ಬ್ಯೂಟಿ. ಬಯಸುವ ಹೆಣ್ಮಕ್ಕಳ ಬೆನ್ನತ್ತಿ ಕಾಡುತ್ತಿದೆ. ಭಾರತದಲ್ಲಷ್ಟೇ ಎಲ್ಲ ಹಲವು ವಿಶ್ವ ರಾಷ್ಟ್ರಗಳಲ್ಲೂ ದಿನೇ ದಿನೆ ಸಮಸ್ಯೆ ಹೆಚ್ಚುತ್ತಿದೆ.
1993ರಲ್ಲಿ ಜರ್ನಲ್ ಆಫ್ ದಿ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ನಲ್ಲಿ ಮೊದಲ ಬಾರಿಗೆ ‘ಬ್ಯೂಟಿ ಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್ ಎಂಬ ಪದ ಉಲ್ಲೇಖಗೊಂಡಿತು. ಇದು ವಿರಳ ಹಾಗೂ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದಾದ ಒಂದು ಸ್ಥಿತಿ. ಬಹಳಷ್ಟು ಹೆಣ್ಮಕ್ಕಳು, ಮಹಿಳೆಯರು ಬ್ಯೂಟಿ ಪಾರ್ಲರ್ಗಳಲ್ಲಿ ಅಥವಾ ಸಲೂನ್ಗಳಲ್ಲಿ ತಲೆಗೆ ಮಸಾಜ್ ಮಾಡಿಸಲು ಇಲ್ಲವೇ ಕೂದಲು ತೊಳೆಸುವುದಕ್ಕೆ ಹೋಗುತ್ತಾರೆ. ಈ ವೇಳೆ ಸಲೂನ್ನ ವಾಷ್ ಬೇಸಿನ್ನಲ್ಲಿ ತಮ್ಮ ಕುತ್ತಿಗೆ ಇಟ್ಟು ಮಲಗಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಕುತ್ತಿಗೆ ಇಡುವ ಸ್ಥಳ ಸಮರ್ಪಕ ಸ್ಥಾನದಲ್ಲಿಲ್ಲದಿದ್ದಾಗ ಅಥವಾ ಮಸಾಜ್ ಮಾಡುವ ಕ್ರಮ ಸರಿಯಾಗಿಲ್ಲದಿದ್ದಲ್ಲಿ ಕುತ್ತಿಗೆಯ ರಕ್ತಪರಿಚಲನಾ ವ್ಯವಸ್ಥೆಯೇ ಸಮತೋಲನ ತಪ್ಪುತ್ತದೆ. ಕೊಂಚ ಹೆಚ್ಚು ಕಡಿಮೆ ಆದರೂ ಸ್ಟ್ರೋಕ್ಗೆ‘ ಒಳಗಾಗಬೇಕಾಗುತ್ತದೆ.
ಇಂತಹ ನೂರಾರು ಪ್ರಕರಣಗಳು ಭಾರತದಲ್ಲಿ ವರದಿಯಾಗಿವೆೆ. ಇನ್ನು ಕೆಲವೊಮ್ಮೆ ಏಕಾಏಕಿ ತಲೆಸುತ್ತು, ವಾಂತಿ, ಬಾಯಿ ತೊದಲುವಿಕೆ, ಕಣ್ಣಿನ ದೋಷ ಕಾಣಿಸಿಕೊಳ್ಳುತ್ತದೆ. ದೇಹದ ಸಮತೋಲನ ತಪ್ಪಿ, ಮುಖ, ದೇಹದ ಅರ್ಧಭಾಗದಲ್ಲಿ ಮರಗಟ್ಟುವಿಕೆ ಸಮಸ್ಯೆ ಕಾಡುತ್ತದೆ. ಬ್ಯೂಟಿಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್ ಒಳಗಾದವರು ವರ್ಷ ಕಳೆದರೂ ಚೇತರಿಸಿಕೊಳ್ಳಲಾಗದ ಸ್ಥಿತಿಯಲ್ಲಿರುವ ಹಲವು ನಿದರ್ಶನಗಳು ಬೆಳಕಿಗೆ ಬಂದಿವೆ.
ಸಾಮಾನ್ಯವಾಗಿ ಎಲ್ಲರಿಗೂ ಈ ಸಮಸ್ಯೆ ಸಂಭವಿಸುತ್ತದೆ ಎಂದಲ್ಲ. ಸಲೂನ್ಗಳಲ್ಲಿ ಅಸಮರ್ಪಕ ನಿರ್ವಹಣೆಯಿಂದಾಗಿಯೂ ಉಂಟಾಗಬಹುದು. ಅಥವಾ ವ್ಯಕ್ತಿಯಲ್ಲಿ ಕುತ್ತಿಗೆ ಅಥವಾ ತಲೆಯ ಸಮಸ್ಯೆ, ನೋವುಗಳು, ಬೆನ್ನುಮೂಳೆಯ ಅಪಧಮನಿಗಳ ಛೇದನ , ಕಾಂತಿವರ್ಧಕ ಶಸ್ತ್ರ ಚಿಕಿತ್ಸೆಗಳು, ದೀರ್ಘಕಾಲದ ಮಸಾಜ್ಗಳಿಂದಾಗಿಯೂ ಬ್ಯೂಟಿ ಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್ ಕಂಡುಬರಬಹುದು.
ಮೊದಲನೆಯದಾಗಿ ಮಸಾಜ್ ಮಾಡುವಾಗ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಕುತ್ತಿಗೆಯನ್ನು ಹಿಂಭಾಗಕ್ಕೆ ಬಾಗಿಸಿದ್ದಾಗ ವಾಕರಿಕೆ ಅಥವಾ ತಲೆ ಸುತ್ತುಗಳಂತಹ ಲಕ್ಷಣಗಳು ಕಂಡುಬಂದರೆ ಕೂಡಲೇ ಎಚ್ಚೆತ್ತು ಕೊಳ್ಳಬೇಕು. ಕೂದಲು ತೊಳೆಯುವಾಗ ಅತಿಯಾದ ಬಿಸಿ ನೀರನ್ನು ಉಪಯೋಗಿಸಬಾರದು, ಉಗುರು ಬೆಚ್ಚಗೆಯ ನೀರು ಬಳಸಬೇಕು, ತಲೆ, ಕುತ್ತಿಗೆಗೆ ಹೆಚ್ಚಿನ ಒತ್ತಡವನ್ನು ನೀಡದಂತೆ ಮುನ್ಸೂಚನೆ ನೀಡಬೇಕು. ಅನಾರೋಗ್ಯದ ಪರಿಸ್ಥಿತಿ ಇದ್ದಾಗ ಮೊದಲೇ ಈ ಕುರಿತಾಗಿ ಎಚ್ಚರ ವಹಿಸಬೇಕು.
ಕತ್ತಿನ ಭಾಗದಲ್ಲಿ ಮಿದುಳಿನ ರಕ್ತಸಂಚಾರಕ್ಕೆ ಬೇಕಾದ ರಕ್ತನಾಳ ಇರುತ್ತದೆ. ಮುಂಭಾಗದಲ್ಲಿ ಕ್ಯಾರೋಟಿಡ್ ಆರ್ಟೀಸ್ ಹಿಂಭಾಗದಲ್ಲಿ ವರ್ಟಿಬಲ್ ಆರ್ಟೀಸ್ ಇರುತ್ತದೆ. ಕತ್ತನ್ನು ಬಹಳ ಹೊತ್ತು ಬಗ್ಗಿಸಿದಾಗ ರಕ್ತನಾಳಗಳ ಮೇಲೆ ಒತ್ತಡ ಬೀಳುತ್ತದೆ. ವಯಸ್ಸಾದವರ ರಕ್ತ ನಾಳಗಳಲ್ಲಿ ಹೆಚ್ಚಿನ ಕೊಬ್ಬಿನಂಶ ಸೇರಿರುತ್ತದೆ. ಇದರ ಮೇಲೆ ಒತ್ತಡ ಬಿದ್ದಷ್ಟು ಮಿದುಳಿನ ರಕ್ತ ಸಂಚಾರದಲ್ಲಿ ವ್ಯತ್ಯಯ ಆಗುತ್ತಲೇ ಹೋಗುತ್ತದೆ. ಕತ್ತಿನ ಮೂಳೆಗಳಲ್ಲಿ ಚಿಕ್ಕ ಚಿಕ್ಕದಾಗಿ ಚೂಪಾದ ಮೂಳೆ ಬೆಳೆಯುವಿಕೆಯಿಂದಲೂ ಕುತ್ತಿಗೆಯ ಹಿಂಭಾಗದಲ್ಲಿರುವ ರಕ್ತನಾಳಗಳ ಮೇಲೆ ಒತ್ತಡ ಬೀಳುತ್ತದೆ. ಇದು ಸಹ ಅಪಾಯಕಾರಿ.
ಅಧಿಕ ರಕ್ತದ ಒತ್ತಡ, ಮಧುಮೇಹ, ರಕ್ತದಲ್ಲಿ ಕೊಬ್ಬಿನಂಶ, ಸ್ಥೂಲಕಾಯ ಸಮಸ್ಯೆ ಇರುವವರು ಮಸಾಜ್ ಮಾಡಿಸಿಕೊಳ್ಳುವ ಮುನ್ನ ಎಚ್ಚರ ವಹಿಸಬೇಕು. ವಿಶೇಷ ನಿಗಾ ಇಟ್ಟು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಮಸಾಜ್ ಮಾಡುವಂತೆ ಬ್ಯೂಟಿಷಿಯನ್ಗಳಿಗೆ ತಿಳಿಸಿ ಹೇಳಬೇಕು. ಸಾಧ್ಯವಾದರೆ ಕುತ್ತಿಗೆಯನ್ನು ಬಗ್ಗಿಸದೆ, ಚೇರ್ ಮೇಲೆ ಕುಳಿತುಕೊಂಡೇ ಹೆಡ್ ಮಸಾಜ್ ಮಾಡಿಸಿಕೊಂಡು ಮನೆಗೆ ಹೋಗಿ ತಲೆ ತೊಳದುಕೊಳ್ಳಬೇಕು. ಇದರಿಂದ ಅಪಾಯದ ಸಾಧ್ಯತೆಯೇ ಇರುವುದಿಲ್ಲ.
ತಲೆ ಮತ್ತು ಕುತ್ತಿಗೆಗೆ ಮಸಾಜ್ ಮಾಡುವುದರಿಂದ ಮೆದುಳಿಗೆ ರಕ್ತ ಸಮರ್ಪಕವಾಗಿ ಪೂರೈಕೆಯಾಗಿ ದೇಹದ ಎಲ್ಲಾ ಭಾಗಗಳಿಗೂ ಪರಿಚಲನೆಯಾಗುತ್ತದೆ. ಸ್ನಾಯುಗಳ ಒತ್ತಡವನ್ನು ಶಮನಗೊಳಿಸುತ್ತದೆ. ರಕ್ತದ ಒತ್ತಡ ಕಡಿಮೆ ಮಾಡಿ, ಒತ್ತಡದ ಹಾರ್ವೇನುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು, ನರಮಂಡಲದ ವ್ಯವಸ್ಥೆಯನ್ನು ಶಾಂತವಾಗಿ ನಿಭಾಯಿಸುತ್ತದೆ. ಇದರಿಂದ ದೇಹ ಚೈತನ್ಯದಿಂದ ಕೂಡಿರುತ್ತದೆ. ಮಸಾಜ್ ಮಾಡುವುದರಿಂದ ನೋವು ನಿವಾರಣೆ, ಮಾನಸಿಕ ಚೇತನ ಹಾಗೂ ದೈಹಿಕ ವಿಶ್ರಾಂತಿ ದೊರೆಯುತ್ತದೆ.
1. ತಲೆ ಮತ್ತು ಕುತ್ತಿಗೆ ಮೇಲೆ ಹೆಚ್ಚು ಒತ್ತಡ ಬೇಡ
2. ಮೂಳೆಗಳ ಮೇಲೆ ಹೆಚ್ಚು ಒತ್ತಡ ಹಾಕಬಾರದು
3. ಇದರಿಂದ ರಕ್ತನಾಳಗಳಿಗೆ ಆಘಾತ ಆಗುತ್ತದೆ. ಸ್ವಯಂ ಮಸಾಜ್ ವೇಳೆ ಮುನ್ನೆಚ್ಚರಿಕೆ ಅಗತ್ಯ
4. ತೀವ್ರ ನೋವು ಇದ್ದಲ್ಲಿ ಮಸಾಜ್ ಕ್ರಮ ಪಾಲಿಸಿ
5. ಮಸಾಜ್ ವೇಳೆ ಘರ್ಷಣೆಯ ಪ್ರಕಾರ ಮುಖ್ಯ. ಇದರಿಂದ ಅಂಗಾಂಶ ಸ್ಥಿತಿಸ್ಥಾಪಕತ್ವ ಸಾಧ್ಯ
6 .ಸ್ನಾಯುಗಳ ಬಿಗಿತವೂ ಕಡಿಮೆಗೊಳ್ಳುತ್ತದೆ
7 . ಕುತ್ತಿಗೆ, ಸ್ನಾಯುಗಳ ವಿಶ್ರಾಂತಿ ಅತ್ಯಗತ್ಯ. ಈ ರೀತಿಯೇ ಮಸಾಜ್ ಮಾಡಿಸಿಕೊಳ್ಳಬೇಕು
8. ವಾಕರಿಕೆ, ತಲೆ ಸುತ್ತು ಬಂದರೆ ತಕ್ಷಣ ನಿಲ್ಲಿಸಿ
9. ಕೂಡಲೇ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯಿರಿ
ಬ್ಯೂಟಿ ಪಾರ್ಲರ್ ಫ್ಯಾಷನ್ ಟ್ರೆಂಡ್ ಮಕ್ಕಳಿಗೂ ವಿಸ್ತರಿಸಿದೆ. ಡಾನ್ಸ್, ಬ್ಯೂಟಿ ಕಾಂಪಿಟೇಷನ್ಗಾಗಿ ಹೇರ್ ಸ್ಟ್ರೈಟನಿಂಗ್, ಕಟಿಂಗ್ ಎಂದು ಹೆಣ್ಮಕ್ಕಳನ್ನು ಗಂಟೆಗಟ್ಟಲೆ ಬ್ಯೂಟಿ ಪಾರ್ಲರ್ನಲ್ಲಿ ಕೂರಿಸುತ್ತಾರೆ. ಮಕ್ಕಳ ಮೂಳೆ ಎಳೆಯದಾಗಿರುವುದು ಅಪಾಯದ ಸಾಧ್ಯತೆ ಹೆಚ್ಚಿರುತ್ತದೆ. ಒಮ್ಮೆ ಮೂಳೆಗೆ ಘಾಸಿ ಆದರೆ ಅವರು ಚೇತರಿಸಿ ಕೊಳ್ಳುವುದು ಕಷ್ಟ. ಇದರ ಜತೆಗೆ ಫೇಷಿಯಲ್ನಂತಹ ಸೌಂದರ್ಯ ವರ್ಧಕ ಚಿಕಿತ್ಸೆಗಳು ಎಳೆ ಚರ್ಮವನ್ನು ಹಾಳುಗೆಡವುತ್ತವೆ. ಹೀಗಾಗಿ ಬ್ಯೂಟಿ ಪಾರ್ಲರ್ನಿಂದ ಮಕ್ಕಳನ್ನು ಸಾಧ್ಯವಾದಷ್ಟು ದೂರದಲ್ಲಿಟ್ಟರೆ ಸೂಕ್ತ ಎಂಬುದು ತಜ್ಞರ ಸಲಹೆ.