ಸಚಿವರ ವಾಹನಕ್ಕೆ ಸೈಡ್​ ಕೊಡಲಿಲ್ಲ ಅಂತ ಚಾಲಕನ ಮೇಲೆ ಹಲ್ಲೆ ಮಾಡಿ ಬಂಧಿಸಿದ ಪೊಲೀಸರು!

Kerala Minister
Published on

ಕೊಯಿಕ್ಕೋಡ್​: ಸಚಿವರ ವಾಹನಕ್ಕೆ ಸೈಡ್​ ಕೊಡಲಿಲ್ಲ ಅಂತ ಚಾಲಕನೊಬ್ಬನ ಮೇಲೆ ಪೊಲೀಸರು ದಾಳಿ ಮಾಡಿರುವ ಆಘಾತಕಾರಿ ಘಟನೆ ಕೇರಳದ ಕೊಯಿಕ್ಕೋಡ್​ನಲ್ಲಿ ನಡೆದಿದೆ.

ಸ್ಥಳೀಯರ ಪ್ರತಿಭಟನೆ 

ಚೆಲಾರಿ ಮೂಲದ ಮುಹಮ್ಮದ್​ ಸಾದಿಫ್​ ಹಲ್ಲೆಗೊಳಗಾದ ಚಾಲಕ. ಈತ ಮೀನು ಸಾಗಿಸುತ್ತಿದ್ದ ವೇಳೆ ಸಚಿವ ಅಹ್ಮದ್​ ದೇವರಕೋವಿಲ್​ ಅವರ ವಾಹನಕ್ಕೆ ಸೈಡ್​ ಕೊಡಲಿಲ್ಲ ಅಂತ ಹಲ್ಲೆ ಮಾಡಿದ್ದಾರೆ. ಇಷ್ಟೇ ಅಲ್ಲದೆ, ಬೀಚ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುಹಮ್ಮದ್​ನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಈ ಕ್ರಮದ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ.

ಪೊಲೀಸರು ಹೇಳೋದೆ ಬೇರೆ

ಪೊಲೀಸರು ಹೇಳುವ ಪ್ರಕಾರ ಚಾಲಕ ಮುಹಮ್ಮದ್​, ಸಚಿವರ ವಾಹನಕ್ಕೆ ಅಪಾಯವಾಗುವಂತೆ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ ಹಾಗೂ ಭದ್ರತಾ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣಕ್ಕೆ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಆದರೆ, ಪೊಲೀಸರ ಈ ಹೇಳಿಕೆಯನ್ನು ಸ್ಥಳೀಯರು ಒಪ್ಪಿಲ್ಲ. ಪೊಲೀಸರದ್ದೇ ತಪ್ಪು ಮತ್ತು ಅಧಿಕಾರ ದುರುಪಯೋಗಪಡಿಸಿಕೊಂಡು ದೌರ್ಜನ್ಯ ನಡೆಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಈ ಘಟನೆ ಕೊಯಿಕ್ಕೋಡ್​ನ ಸೌಥ್​ ಬೀಚ್​ನಲ್ಲಿ ನಿನ್ನೆ ಬೆಳಗ್ಗೆ ನಡೆದಿದೆ. ಸಚಿವರ ವಾಹನದ ಮುಂದೆ ಬಹಳ ಹೊತ್ತು ಅಡ್ಡಿಪಡಿಸಿದ ಮುಹಮ್ಮದ್​​ಗೆ ಸಚಿವರ ಬೆಂಗಾವಲು ವಾಹನದಲ್ಲಿದ್ದ ಭದ್ರತಾ ಸಿಬ್ಬಂದಿ ಎಚ್ಚರಿಕೆ ನೀಡಿದರೂ, ಮತ್ತೆ ಸಚಿವರ ವಾಹನಕ್ಕೆ ಅಪಾಯವಾಗುವ ರೀತಿಯಲ್ಲಿ ವಾಹನ ಚಲಾಯಿಸಿದನು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯನ್ನು ಕೆಲವರು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳಲು ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ ಎಂದು ಸಚಿವರ ಕಚೇರಿ ತಿಳಿಸಿದೆ. ಮುಹಮ್ಮದ್​ ಅವರ ಮೀನಿನ ವಾಹನವು ಚೋಂಬಳದಿಂದ ಪರಪ್ಪನಂಗಡಿ ಕಡೆಗೆ ಹೋಗುತ್ತಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net