

ಚೆನ್ನೈ: ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾ ಬಳಿಕ ನಯನತಾರಾ ಅವರ ಮುಂದಿನ ಸಿನಿಮಾ ಯಾವುದಿರಬಹುದು ಅಂತ ಅವರ ಅಭಿಮಾನಿಗಳು ಊಹೆಗೆ ಜಾರಿದ್ದಾರೆ. ಈ ವಿಚಾರವಾಗಿ ಕಾಲಿವುಡ್ ಗಲ್ಲಿಯೊಳಗೆ ಇದೀಗ ಹೊಸ ಸುದ್ದಿಯೊಂದು ಹರಿದಾಡುತ್ತಿದ್ದು, ಅದನ್ನು ಕೇಳಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ತಮಿಳುನಾಡಿನ ಪ್ರಖ್ಯಾತ ಯೂಟ್ಯೂಬರ್ ಡ್ಯೂಡ್ ವಿಕ್ಕಿ ಮೊದಲ ಬಾರಿಗೆ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದು, ಈ ಚಿತ್ರಕ್ಕೆ ನಯನತಾರಾ ಅವರೇ ನಾಯಕಿ ಎಂಬ ಸುದ್ದಿ ಹೊರಬಿದ್ದಿದೆ. ಪ್ರಿನ್ಸ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಲಕ್ಷ್ಮಣ್ ಕುಮಾರ್ ಎಂಬುವರು ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ಈ ವಿಚಾರವನ್ನು ಸ್ವತಃ ನಿರ್ಮಾಪಕರು ಕೂಡ ಖಚಿತಪಡಿಸಿದ್ದಾರೆ.
ನಯನತಾರಾ ಅವರ ಈ ಹಿಂದಿನ ಅನೇಕ ಸಿನಿಮಾಗಳಂತೆ ಈ ಸಿನಿಮಾ ಕೂಡ ಮಹಿಳಾ ಪ್ರಧಾನ ಸಿನಿಮಾ ಆಗಿರಲಿದ್ದು, ನಯನತಾರಾ ಅವರ ಸುತ್ತ ಸುತ್ತುವ ಥ್ರಿಲ್ಲರ್ ಕತೆಯಾಗಿರಲಿದೆ. ಜುಲೈ 14ರಂದಿ ಈ ಸಿನಿಮಾ ಸೆಟ್ಟೇರಲಿದೆ. ಆದರೆ, ಈವರೆಗೂ ಈ ಸಿನಿಮಾ ಕುರಿತು ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ.
ಈ ಸಿನಿಮಾದಲ್ಲಿ ಖ್ಯಾತ ಕಾಮೆಡಿಯನ್ ಯೋಗಿ ಬಾಬು ಕೂಡ ಇರಲಿದ್ದಾರೆ. ನಯನತಾರಾ ಮತ್ತು ಯೋಗಿ ಬಾಬು ಈ ಹಿಂದೆ ಕೊಲಮಾವು ಕೋಕಿಲಾ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದೊಂದು ಡಾರ್ಕ್ ಕಾಮೆಡಿ ಸಿನಿಮಾ ಆಗಿತ್ತು ಮತ್ತು ಸೂಪರ್ ಹಿಟ್ ಆಗಿತ್ತು. ಕೊಲಮಾವು ಕೋಕಿಲಾ ಸಿನಿಮಾವನ್ನು ಖ್ಯಾತ ಯುವ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ಅಂದಹಾಗೆ ನೆಲ್ಸನ್ ಅವರು ಶಿವಕಾರ್ತಿಕೇಯನ್ ಅಭಿನಯದ ಹಿಟ್ ಸಿನಿಮಾ ಡಾಕ್ಟರ್, ವಿಜಯ್ ಅಭಿನಯದ ಬೀಸ್ಟ್ ಮತ್ತು ಆಗಸ್ಟ್ 11ಕ್ಕೆ ಬಿಡುಗಡೆಯಾಗಲಿರುವ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.
ಇನ್ನು ನಯನಾತಾರಾ ಅವರು ಆಟ್ಲೀ ನಿರ್ದೇಶನದ ಮತ್ತು ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ನಯನಾತಾರಾ ಆರ್ಮಿ ಏಜೆಂಟ್ ಪಾತ್ರ ನಿರ್ವಹಿಸಿದ್ದಾರೆ ಎನ್ನಲಾಗಿದೆ. ಸಾನ್ಯಾ ಮಲ್ಹೋತ್ರ, ಸುನೀಲ್ ಗ್ರೋವರ್ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಇರಲಿದ್ದಾರೆ. ಶಾರುಖ್ ಅವರೇ ಈ ಸಿನಿಮಾವನ್ನು ತಮ್ಮ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದು, ಸೆ. 7ರಂದು ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ. (ಏಜೆನ್ಸೀಸ್)