ವಾರದ ನಂತರ ಬೋರ್‌ವೆಲ್ ಕೊರೆಸುವ ಭರವಸೆ

nrp water
ಎನ್.ಆರ್.ಪುರ ತಾಲೂಕಿನ ಚಿಬ್ಬಳ್ಳಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.
Published on

ಎನ್.ಆರ್.ಪುರ: ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ಸೀತೂರು ಗ್ರಾಪಂ ಕೊನೋಡಿ ಗ್ರಾಮದ ಬೆಮ್ಮನೆ ಹಾಗೂ ಮುತ್ತಿನಕೊಪ್ಪ ಗ್ರಾಪಂ ಚಿಬ್ಬಳ್ಳಿಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹಾಗೂ ಜಿಪಂ ಸಿಇಒ ಡಾ. ಗೋಪಾಲಕೃಷ್ಣ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಪಂ ಸದಸ್ಯ ಎಚ್.ಇ.ದಿವಾಕರ ಮಾತನಾಡಿ, ಕೊನೋಡಿ ಗ್ರಾಮದ ಸರಳಗಂಡಿ, ಜಾಲ, ಬೆಮ್ಮನೆ, ಹರಂದೂರು, ಕೊನೋಡಿಯಲ್ಲಿ ಒಟ್ಟು 68 ಮನೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ಹಿಂದೆ ಒಂದು ಬೋರ್‌ವೆಲ್ ಮೂಲಕ ಮನೆಗಳಿಗೆ ಕುಡಿಯುವ ನೀರು ಒದಗಿಸಲಾಗುತ್ತಿತ್ತು. ಈ ವರ್ಷ ಅದರಲ್ಲಿ ನೀರು ಕಡಿಮೆಯಾಗಿದ್ದರಿಂದ 3 ತಿಂಗಳ ಹಿಂದೆ ಟಾಸ್ಕ್‌ಫೋರ್ಸ್‌ನಲ್ಲಿ ಬೋರ್‌ವೆಲ್ ಕೊರೆಯಲಾಗಿತ್ತು. ಆದರೆ ಅದರಲ್ಲಿ ಕೇವಲ 1.50 ಇಂಚು ನೀರು ಬಂದಿದ್ದು, ಈ ನೀರು ಇಷ್ಟ್ಟೂ ಮನೆಗಳಿಗೆ ಸಾಕಾಗುವುದಿಲ್ಲ. ಇನ್ನೊಂದು ಬೋರ್‌ವೆಲ್ ಕೊರೆಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ಇನ್ನೊಂದು ವಾರ ಕಾಯಿರಿ. ಮಳೆ ಬಂದು ನೀರಿನ ಸಮಸ್ಯೆ ಕಡಿಮೆಯಾಗದಿದ್ದರೆ ಇನ್ನೊಂದು ಬೋರ್‌ವೆಲ್ ಕೊರೆಸಲಾಗುವುದು ಎಂದು ಭರವಸೆ ನೀಡಿದರು.
ತಾಪಂ ಇಒ ಎಚ್.ಡಿ.ನವೀನ್‌ಕುಮಾರ್, ತಹಸೀಲ್ದಾರ್ ರಮೇಶ್, ಇಂಜಿನಿಯರ್ ವೀರಪ್ಪ, ಜಿಪಂ ಕುಡಿಯುವ ನೀರಿನ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ವಿನಾಯಕ ಹುಳ್ಳೂರು, ಎನ್.ಎಲ್.ಮನೀಶ, ರೆವಿನ್ಯೂ ಇನ್ಸ್‌ಪೆಕ್ಟರ್ ಮಂಜುನಾಥ್, ಗ್ರಾಮ ಲೆಕ್ಕಾಧಿಕಾರಿ ವಿಶ್ವನಾಥ, ಪಿಡಿಒ ಶ್ರೀನಿವಾಸ್, ಕಾರ್ಯದರ್ಶಿ ನವೀನ್, ವಿಎಸ್‌ಎಸ್‌ಎನ್ ಉಪಾಧ್ಯಕ್ಷ ಬಿ.ಎಸ್.ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net