ಲಾರಿ ಮೇಲೆ ಅಣ್ಣಾವ್ರ 206 ಸಿನಿಮಾ! ಗಮನ ಸೆಳೆಯುತ್ತಿದೆ ಬುಲ್ಲಹಳ್ಳಿಯ ಅಭಿಮಾನಿಯ ಕಾರ್ಯ

ವಿಜಯವಾಣಿ (4)
Published on

ದೇವನಹಳ್ಳಿ: ತಾಲೂಕಿನ ಬುಲ್ಲಹಳ್ಳಿಯ ಟಿಪ್ಪರ್ ಚಾಲಕ ರಾಮಕೃಷ್ಣ ಕನ್ನಡ ಮೇರುನಟ ಡಾ.ರಾಜ್ ಕುಮಾರ್ ಅಪ್ಪಟ ಅಭಿಮಾನಿ. ಈ ಅಭಿಮಾನದ ದ್ಯೋತಕವಾಗಿ ಲಾರಿಯ ಮೇಲೆ ರಾಜ್ ಅಭಿನಯಿಸಿದ 206 ಚಿತ್ರಗಳ ಹೆಸರನ್ನು ಕ್ರಮವಾಗಿ ಬರೆಸಿದ್ದಾರೆ. ಇದು ಕನ್ನಡಾಭಿಮಾನಿಗಳ ಗಮನ ಸೆಳೆಯುತ್ತಿದೆ.

53 ವರ್ಷದ ಈತ ಮೂಲತಃ ರೈತರಾಗಿದ್ದಾರೆ, ಜತೆಗೆ ಟಿಪ್ಪರ್ ಚಾಲಕನಾಗಿ ಅಣ್ಣಾವ್ರ ಸಿನಿಮಾ ಗೀತೆಯಂತೆ ‘ದುಡಿಮೆಯ ನಂಬಿ ಬದುಕು, ಅದರಲೆ ದೇವರ ಹುಡುಕು...’ ಎಂಬಂತೆ ಜೀವನ ನಡೆಸುತ್ತಿದ್ದಾರೆ. 69ನೇ ಕನ್ನಡ ರಾಜ್ಯೋತ್ಸವದ ಈ ಅಪೂರ್ವಗಳಿಗೆಯಲ್ಲಿ ‘ವಿಜಯವಾಣಿ’ಯೊಂದಿಗೆ ರಾಮಕೃಷ್ಣಪ್ಪ ರಾಜ್​ಕುಮಾರ್ ಕುರಿತಾದ ಅಭಿಮಾನದ ಬಗ್ಗೆ ಮಾತನಾಡಿದ್ದಾರೆ.

ಬಾಲ್ಯದಿಂದಲೂ ಅಣ್ಣಾವ್ರ ಅಪ್ಪಟ ಅಭಿಮಾನಿ ನಾನು. ದೇವನಹಳ್ಳಿ ತಾಲೂಕಿನ ಬಿಜ್ಜವಾರ ಗ್ರಾಮದಲ್ಲಿ ಮಣ್ಣಿನಮಗ ಚಿತ್ರದ ಚಿತ್ರೀಕರಣದ ವೇಳೆ ನಾನು 8 ತಿಂಗಳ ಮಗುವಂತೆ, ಆಗ ನಮ್ಮ ತಾಯಿ ಚಿತ್ರೀಕರಣ ನೋಡಲು ಹೋಗಿದ್ದಾಗ ಭಗವಂತ ಕೈ ಕೊಟ್ಟ ಗೀತೆಯ ಸನ್ನಿವೇಶದಲ್ಲಿ ನನ್ನ ತಾಯಿ ನನ್ನನ್ನು ಅಶ್ವತ್ಥಕಟ್ಟೆ ಬಳಿ ತೊಡೆಯ ಮೇಲೆ ಮಲಗಿಸಿಕೊಂಡಿರುವುದನ್ನು ಚಿತ್ರೀಕರಿಸಿಕೊಂಡಿದ್ದರಂತೆ. ಹಾಗಾಗಿ ನಾನು ಬಾಲ್ಯದಲ್ಲಿಯೇ ಅಣ್ಣಾವ್ರ ಚಿತ್ರದಲ್ಲಿ ಅಭಿನಯಿಸಿದ್ದೆ ಎಂಬ ಹೆಮ್ಮೆಇದೆ ಎಂದು ಹೇಳುತ್ತಾರೆ. ಬಂಗಾರದ ಮನುಷ್ಯ ಸಿನಿಮಾದಿಂದ ನನ್ನ ಜೀವನದ ಹಾದಿಯೇ ಬದಲಾಯಿತು. ಅವರ ಎಲ್ಲ ಸಿನಿಮಾಗಳಿಂದ ಒಂದೊಂದು ನೀತಿ ಅಳವಡಿಸಿಕೊಂಡು ಬಂದಿದ್ದೇನೆ ಎನ್ನುತ್ತಾರೆ.

ಲಗ್ನ ಪತ್ರಿಕೆಯಲ್ಲಿ ಸಹಿ

ನಮ್ಮ ಪಕ್ಕದ ಗ್ರಾಮ ಕೋರಮಂಗಲದ ಬಯಲು ಬಂಧಿಖಾನೆ ಸಮೀಪ ದೇವತಾಮನುಷ್ಯ ಚಿತ್ರೀಕರಣಕ್ಕೆ ಬಂದ ಸಂದರ್ಭದಲ್ಲಿ ನನ್ನ ಬಳಿ ಇದ್ದ ರಾಜ್ ಕುಮಾರ್ ಅವರ ಮದುವೆಯ ಲಗ್ನಪತ್ರಿಕೆ ತೋರಿಸಿ ಅವರ ಆಶೀರ್ವಾದ ಪಡೆದು ಅದಕ್ಕೆ ಹಸ್ತಾಕ್ಷರ ಹಾಕಿಸಿಕೊಂಡಿದ್ದೇನೆ. ಅದನ್ನು ನಮ್ಮ ಮನೆಯಲ್ಲಿ ಫ್ರೇಮ್ ಹಾಕಿಸಿ ಇಟ್ಟುಕೊಂಡಿದ್ದೇನೆ. ಅಣ್ಣಾವು› ಸಿನಿಮಾ ಮಾತ್ರವಲ್ಲ ಕನ್ನಡ ನಾಡು, ನುಡಿ, ನೆಲ, ಜಲದ ರಕ್ಷಣೆ ವಿಚಾರದಲ್ಲಿ ಗಟ್ಟಿದನಿ ಎತ್ತುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರ ಚಿತ್ರಗಳ ಹೆಸರುಗಳನ್ನು ಲಾರಿಯ ಮೇಲೆ ಬರೆಸಿದ್ದಾನೆ ಎನ್ನುತ್ತಾರೆ ರಾಮಕೃಷ್ಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net