

ಸಾಗರ: ಊರನ್ನು ಕಟ್ಟಲು ಶ್ರಮಿಸಿದವರನ್ನು ಗೌರವಿಸುವುದು ಸಮಾಜದ ಕರ್ತವ್ಯ ಎಂದು ಹಿರಿಯ ಸಾಹಿತಿ ಡಾ.ನಾ.ಡಿಸೋಜ ಹೇಳಿದರು.
ಶ್ರೀ ಶೃಂಗೇರಿ ಶಂಕರ ಮಠದಲ್ಲಿ ನಾಗರಿಕ ಅಭಿನಂದನಾ ಸಮಿತಿಯಿಂದ ಫೆ. 4 ರಂದು ವಿಧಾನಸಭಾ ಮಾಜಿ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಮತ್ತು ಸಹಕಾರಿ ಧುರೀಣ ಎಂ.ಹರನಾಥರಾವ್ ಮತ್ತಿಕೊಪ್ಪ ಅವರಿಗೆ ಏರ್ಪಡಿಸಿರುವ ಅಭಿನಂದನಾ ಸಮಾರಂಭದ ಆಹ್ವಾನ ಪತ್ರಿಕೆಯನ್ನು ಶನಿವಾರ ಬಿಡುಗಡೆ ಮಾಡಿ ಮಾತನಾಡಿದರು.
ಇಂತಹ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲು ಸಂತೋಷ ವಾಗುತ್ತದೆ. ಜಾತಿ, ಮತ, ಪಕ್ಷಭೇದ ಮರೆತು ಎಲ್ಲರೂ ಒಗ್ಗಟ್ಟಾಗಿ ಇಬ್ಬರನ್ನು ಸನ್ಮಾನಿಸುವುದು ಅನುಕರಣೀಯ ನಡೆ. ಮುಂದಿನಪೀಳಿಗೆಯವರಿಗೆ ಇಂತಹ ಮಾದರಿ ಸನ್ಮಾನದ ಸಂದೇಶ ರವಾನೆಯಾಗಬೇಕು ಎಂದರು.
ಪ್ರಸ್ತುತ ಯಾರಿಗೂ ಬಿಡುವಿಲ್ಲ ಎಂಬ ಮಾತನ್ನು ಕೇಳುತ್ತೇವೆ. ಯುವಕ, ಯುವತಿಯರು ಟಿವಿ, ಮೊಬೈಲ್ ಗೀಳಿಗೆ ಸಿಲುಕಿದ್ದಾರೆ. ಈಗ ಯಾರ ಮನೆಯ ಅಜ್ಜಿಯೂ ಮಾತನಾಡುವುದಿಲ್ಲ. ಕತೆ ಹೇಳುವುದಿಲ್ಲ. ಅಜ್ಜಿ ಟಿ.ವಿ.ಯಲ್ಲಿ ಕಳೆದುಹೋಗಿದ್ದಾಳೆ. ಪರಸ್ಪರ ಮಾತುಕತೆಯೇ ನಿಂತು ಹೋಗಿರುವ ಅತ್ಯಂತ ವಿಷಾದಕರ ಕಾಲಘಟ್ಟದಲ್ಲಿದ್ದೇವೆ. ಕಳೆದುಕೊಂಡಿರುವ ಸಂಬಂಧಗಳನ್ನು ಮತ್ತೆ ನಮ್ಮ ಮನೆ ಅಂಗಳಕ್ಕೆ ಕರೆತರಬೇಕಿದೆ ಎಂದರು.
ಒಂದು ಕಾಲದಲ್ಲಿ ಸಾಹಿತ್ಯ, ಸಂಗೀತ ಕಾರ್ಯಕ್ರಮಗಳಿಗೆ ಹೋಗಿ ಕುಳಿತುಕೊಳ್ಳಲು ಜಾಗದ ಅಭಾವ ಸೃಷ್ಟಿಯಾಗುತ್ತಿತ್ತು. ಆದರೆ ಈಗ ಜನರಿಗೆ ಯಾವುದೂ ಬೇಡವಾಗಿದೆ. ಕಾಗೋಡು ತಿಮ್ಮಪ್ಪ ಮತ್ತು ಹರನಾಥರಾವ್ ಬೇರೆ ಬೇರೆ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಇಂಥವರನ್ನು ಗೌರವಿಸುತ್ತಿರುವುದು ತಡವಾಗಿದೆ. ಇಬ್ಬರನ್ನು ಸನ್ಮಾನಿಸುವುದು ಎಂದರೆ ನಮ್ಮನ್ನು ನಾವು ಗೌರವಿಸಿಕೊಂಡಂತೆ ಒಳ್ಳೆಯ ಕೆಲಸಗಳಿಗೆ ಊರು ಒಟ್ಟಾಗಿ ನಿಲ್ಲಬೇಕು. ಆಗ ಮಾತ್ರ ಹೊಸ ತಲೆಮಾರಿಗೆ ನಾವು ಆದರ್ಶಗಳನ್ನು ತಲುಪಿಸಲು ಸಾಧ್ಯ. ಇದು ಬರೆ ಕಾರ್ಯಕ್ರಮವಲ್ಲ ಊರಿಗಾಗಿ ಶ್ರಮಿಸಿದ ಹಿರಿಯರನ್ನು ಗೌರವಿಸಿ ನಮ್ಮ ಕಾಯಕವನ್ನು ನಿಸ್ವಾರ್ಥವಾಗಿ ಹೇಗೆ ಸಲ್ಲಿಸಬೇಕು ಎನ್ನುವ ಮಾದರಿಯನ್ನು ಯುವತಲೆಮಾರಿಗೆ ತಲುಪಿಸಲಾಗುತ್ತಿದೆ ಎಂದರು.
ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ಟಾಕಪ್ಪ ಮಾತನಾಡಿ, ಸನ್ಮಾನಕ್ಕೆ ಆಯ್ಕೆ ಮಾಡಿರುವ ಇಬ್ಬರು ಗಣ್ಯರು ಮಹಾನ್ ಸಾಧಕರು. ಒಬ್ಬರು ಭೂಮಿ ನೀಡಲು ಹೋರಾಟ ಮಾಡಿದ್ದರೆ, ಇನ್ನೊಬ್ಬರು ಭೂಮಿಯಿದ್ದವರ ಸಂಕಷ್ಟಗಳಿಗೆ ಹೋರಾಟ ಮಾಡಿದ್ದಾರೆ. ಇಬ್ಬರಿಗೂ ಪ್ರಶಸ್ತಿ ತಡವಾಗಿ ಬಂದಿದೆ. ಕಾಗೋಡರ ಹೆಸರು ರಾಜ್ಯಾದ್ಯಂತ ಮನೆ ಮಾತಾಗಿದೆೆ. ಅರಸು ಯೋಜನೆಯನ್ನು ಮುಂದುವರಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಹರನಾಥರಾವ್ ಅವರು ಅಪ್ಸ್‌ಕೋಸ್‌ನಂತಹ ಸಂಸ್ಥೆ ಕಟ್ಟುವಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ನಮ್ಮ ನಾಡಿನ ಹಿರಿಯ ಸಹಕಾರಿ ಬಂಧುಗಳಾದವರು ಇಂದಿಗೂ ಮಾರ್ಗದರ್ಶನ ನೀಡುತ್ತಿದ್ದಾರೆ. ಇಬ್ಬರು ಮಹನೀಯರನ್ನು ಗೌರವಿಸುವ ಭಾಗ್ಯ ನಮ್ಮದಾಗುತ್ತಿದೆ ಎಂದರು.
ಸಮಾಜದ ಪ್ರಮುಖರಾದ ಎಂ.ಜಿ.ಕೃಷ್ಣಮೂರ್ತಿ, ಮಕ್ಬುಲ್ ಅಹಮದ್, ಅಶ್ವಿನಿಕುಮಾರ್, ಟಿ.ವಿ. ಪಾಂಡುರಂಗ, ಮಹಮ್ಮದ್ ಕಾಸಿಂ, ಗಣೇಶ್ ಪ್ರಸಾದ್, ಎಚ್.ಎನ್.ದಿವಾಕರ್, ಪರಮೇಶ್ವರ್, ಇಂದೂಧರ ಗೌಡ, ಎಸ್.ಜಿ.ಶಾನಭಾಗ್, ಗುಂಡಪ್ಪ ಗೌಡ ಇತರರಿದ್ದರು.