

ಶಿಗ್ಗಾಂವಿ: ಉಪಚುನಾವಣೆಗೆ ಮತದಾನ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕರು (Congress Leaders) ಬಹಿರಂಗ ಪ್ರಚಾರದ ವೇಳೆ ನೀಡಿದಂತಹ ವಿವಾದಾತ್ಮಕ ಹೇಳಿಕೆಗಳು ಮುನ್ನೆಲೆಗೆ ಬಂದಿದ್ದು, ಈ ಹೇಳಿಕೆಗಳು ಕಾಂಗ್ರೆಸ್ಗೆ ಮುಳುವಾಗುವ ಭೀತಿ ಶುರುವಾಗಿದೆ. ಇದೀಗ ಶಿಗ್ಗಾಂವಿ ಉಪಚುನಾವಣೆಯ (Shiggaon ByElection) ಬಹಿರಂಗ ಪ್ರಚಾರದ ವೇಳೆ ಕಾಂಗ್ರೆಸ್ ಮಾಜಿ ಶಾಸಕ, ಕಾಂಗ್ರೆಸ್ ನಾಯಕ ಅಜ್ಜಂಪೀರ್ ಖಾದ್ರಿ (Ajjampir Khadri) ವಿವಾದಾತ್ಮಕ ಭಾಷಣ ಮಾಡಿದ ಘಟನೆ ಬೆಳಕಿಗೆ ಬಂದಿದ್ದು, ಚರ್ಚೆಗೆ ಗ್ರಾಸವಾಗಿದೆ.
ಡಾ ಬಿಆರ್ ಅಂಬೇಡ್ಕರ್ (DR. BR. Ambedkar) ಮುಸ್ಲಿಂ ಧರ್ಮ ಸ್ವೀಕರಿಸಲು ಸಿದ್ಧಗೊಂಡಿದ್ದರು ಎಂದು ಹೇಳುವ ಮೂಲಕ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ವಿವಾದದ ಕಿಡಿಯನ್ನು ಹೊತ್ತಿಸಿದ್ದು, ಕಾಂಗ್ರೆಸ್ ನಾಯಕರು ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ದಾರೆ.
ಶಿಗ್ಗಾಂವಿ ಉಪಚುನಾವಣೆಯ ಬಹಿರಂಗ ಪ್ರಚಾರದ ವೇಳೆ ಹನುಮಂತ್ ಪಾಟೀಲ್ ಕಲ್ಯಾಣ ಮಂಟಪದಲ್ಲಿ ನಡೆದಿದ್ದ ಆದಿಜಾಂಬವ ಜಾಗೃತಿ ಸಮಾವೇಶದಲ್ಲಿ ಮಾತನಾಡುವಾಗ, ಬಾಬಾ ಸಾಹೇಬ್ ಅಂಬೇಡ್ಕರ್ (DR. BR. Ambedkar) ಬೌದ್ದ ಧರ್ಮ ಸ್ವೀಕರಿಸುವ ಮುನ್ನ ಇಸ್ಲಾಂ ಧರ್ಮ ಸ್ವೀಕರಿಸಲು ಸಿದ್ದತೆ ಮಾಡಿಕೊಂಡಿದ್ದರು. ಅಂಬೇಡ್ಕರ್ ಇಸ್ಲಾಂ (Islam) ಧರ್ಮ ಸ್ವೀಕರಿಸಲು ಎಲ್ಲ ಸಿದ್ದತೆ ಆಗಿತ್ತು ಆದರೆ, ಕೊನೆ ಕ್ಷಣದಲ್ಲಿ ಬೌದ್ದ (Buddhism) ಧರ್ಮ ಸ್ವೀಕರಿಸಿದರು.
ಅಂಬೇಡ್ಕರ್ (DR. BR. Ambedkar) ಬೌದ್ದ ಧರ್ಮ ಸ್ವೀಕರಿಸದೇ ಹೋಗಿದ್ದರೆ ದಲಿತರೆಲ್ಲ ಮುಸ್ಲೀಮರಾಗುತ್ತಿದ್ದರು. ಆರ್.ಬಿ ತಿಮ್ಮಾಪುರ ಹೋಗಿ ರಹೀಮ್ ಖಾನ್ ಆಗುತ್ತಿದ್ದರು. ಡಾ.ಜಿ ಪರಮೇಶ್ವರ ಹೋಗಿ ಫೀರ್ ಸಾಹೇಬ್ ಆಗುತ್ತಿದ್ದರು. ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಿದ್ದರೆ ಎಲ್ ಹನುಮಂತಯ್ಯ ಹೋಗಿ ಹಸನ್ ಸಾಬ್ ಆಗುತ್ತಿದ್ದರು. ಮಂಜುನಾಥ ತಿಮ್ಮಾಪುರ ಹೋಗಿ ಬಾಬೂಸಾಬ್ ಆಗುತ್ತಿದ್ದರು. ಆದರೆ, ಈಗಲೂ ಎಲ್ಲೆಲ್ಲಿ ದಲಿತ ಕೇರಿ ಇದೆಯೋ ಅಲ್ಲೆಲ್ಲ ಪಕ್ಕದಲ್ಲೇ ಮುಸ್ಲಿಂ ದರ್ಗಾ ಇದೆ ದಲಿತರಿಗೂ ಮುಸ್ಲಿಮರಿಗೂ ಇರುವ ಬಾಂಧವ್ಯ ಹಾಗೆ ಇದೆ ಎಂದು ಅಜ್ಜಂಪೀರ್ ಖಾದ್ರಿ ಮಾತನಾಡುವ ವೇಳೆ ಹೇಳಿದ್ದರು.
ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಹೇಳಿಕೆ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಕ್ಷಮೆಯಾಚಿಸಿದ್ದಾರೆ. ನಾನು ಡಾ.ಬಿ.ಆರ್. ಅಂಬೇಡ್ಕರ್ (DR. BR. Ambedkar) ಅವರ ಅಭಿಮಾನಿ. ಭಾಷಣದಲ್ಲಿ ಜೈಭೀಮ್ ಎಂದು ಘೋಷಣೆ ಕೂಗಿದ್ದೇನೆ. ಈ ಹಿಂದೆ ಎಲ್ಲೋ ಕೇಳಿದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರು ಮುಸ್ಲಿಂ ಧರ್ಮ ಸೇರಲು ಸಿದ್ಧತೆ ನಡೆದಿತ್ತು, ಕೊನೆಯ ಕ್ಷಣದಲ್ಲಿ ಬೌದ್ಧ ಧರ್ಮ ಸೇರಿದರು ಎಂದಿದ್ದೇನೆ. ಇದರಿಂದ ಯಾರಿಗಾದರೂ ನೋವಾಗಿದ್ದರೆ ಅವರ ಕ್ಷಮೆ ಕೋರುತ್ತೇನೆ. ನನ್ನ ಹೇಳಿಕೆ ವಾಪಸ್ ಪಡೆಯುತ್ತೇನೆ ಎಂದು ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಹೇಳಿದ್ದಾರೆ.