ಕನ್ನಡ ಕಿರುತೆರೆ ನಟಿಗೆ ವರದಕ್ಷಿಣೆ ಕಿರುಕುಳ, ಠಾಣೆ ಮೆಟ್ಟಿಲೇರಿದ ಸಂತ್ರಸ್ತೆ

Dowry
Published on

ಬೆಂಗಳೂರು: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಕಿರುತೆರೆ ನಟಿಯೊಬ್ಬರು ಗಂಡ ಮತ್ತು ಆತನ ಪಾಲಕರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಯಲಹಂಕ ನಿವಾಸಿ 28 ವರ್ಷದ ಕಿರುತೆರೆ ನಟಿ ನೀಡಿದ ದೂರಿನ ಮೇರೆಗೆ ಪೊಲೀಸರು ಆಕೆಯ ಗಂಡ ಪ್ರೀತಮ್​ (34), ಮಾವ ರಾಜಶೇಖರ್​ (62), ಅತ್ತೆ ಶಶಿಕಲಾ (60) ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿರಿ ವಾಕಿಂಗ್​ಗೆ ಹೊರಟಿದ್ದ ತಂದೆಯನ್ನೇ ತಲ್ವಾರ್​ನಿಂದ ಕತ್ತರಿಸಿದ ಮಗ!

ದೂರು ನೀಡಿದ ಕಿರುತೆರೆ ನಟಿಯನ್ನು 2016ರಲ್ಲಿ ಮೈಸೂರಿನ ಪೊಲೀಸ್​ ಭವನದಲ್ಲಿ ವಿವಾಹವಾಗಿದ್ದ ಪ್ರೀತಮ್​, ಯಲಹಂಕ ಸಬ್​ ರಿಜಿಸ್ಟ್ರಾರ್​ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿಕೊಂಡಿದ್ದರು. ವಿವಾಹವಾದ ಆರಂಭದಲ್ಲಿ ದಂಪತಿ ಅನ್ಯೋನ್ಯವಾಗಿದ್ದರು. ಇದಾದ ಕೆಲ ಸಮಯದ ಬಳಿಕ ಪ್ರೀತಮ್​ ಮತ್ತು ಆತನ ಪಾಲಕರು "ಮನೆಯಲ್ಲಿ ಸುಮ್ಮನೆ ಕೂರುತ್ತೀಯಾ? ನೀನು ಚಲನಚಿತ್ರ ಹಾಗೂ ಧಾರಾವಾಹಿಯಲ್ಲಿ ನಟಿಸಿದರೆ ಸಾಕಷ್ಟು ಹಣ ಸಿಗುತ್ತದೆ. ನಾವು ನಿನ್ನನ್ನು ಸೇರಿಸುತ್ತೇವೆ ನಟಿಸಲು ಹೋಗು ಎಂದು ಬಲವಂತಪಡಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದರು'' ಎಂದು ದೂರಿನಲ್ಲಿ ನಟಿ ಉಲ್ಲೇಖಿಸಿದ್ದಾರೆ.

ಪತಿ ಹಾಗೂ ಆತನ ಪಾಲಕರ ಒತ್ತಾಯದ ಮೇರೆಗೆ ಕನ್ನಡ ಹಾಗೂ ತಮಿಳು ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಗಳಲ್ಲಿ ನಟಿಸಿದ್ದೆ. ಇದರಿಂದ ಬಂದ ಸಂಪೂರ್ಣ ಹಣವನ್ನು ಪತಿ ಪಡೆದುಕೊಂಡಿದ್ದ. ಇದಾದ ಬಳಿಕ ನನಗೆ ಧಾರವಾಹಿಯಲ್ಲಿ ನಟಿಸಲು ಇಷ್ಟವಿಲ್ಲ ಎಂದಿದ್ದಕ್ಕೆ ವಿನಾಕಾರಣ ಕಿರುಕುಳ ನೀಡುತ್ತಿದ್ದರು. ಲಾಕ್​ಡೌನ್​ ಸಮಯದಲ್ಲಿ 'ನಿನ್ನನ್ನು ಸಾಕಲು ಆಗುವುದಿಲ್ಲ' ಎಂದ ಪತಿ ಮತ್ತು ಆತನ ಪಾಲಕರು ನನ್ನ ಮೇಲೆ ಹಲ್ಲೆ ನಡೆಸಿದರು. ತವರು ಮನೆಯಿಂದ 3 ಲಕ್ಷ ರೂ. ತರುವಂತೆ ಕಿರುಕುಳ ನೀಡಿದರು. ನಾನು ತವರು ಮನೆಗೆ ಹೋದೆ. ಬಳಿಕ ಕಳೆದ ಜು.1ರಂದು ಯಲಹಂಕದ ಅತ್ತೂರು ಲೇಔಟ್​ನ ಸಂತೋಷನಗರದಲ್ಲಿರುವ ಗಂಡನ ಮನೆಗೆ ನನ್ನನ್ನು ನನ್ನ ತಂದೆ ಕರೆದುಕೊಂಡು ಬಂದರು. ಆಗ 'ನನ್ನ ಮಗನಿಗೆ(ಪ್ರೀತಮ್​) ಬೇರೆ ಮದುವೆ ಆಗಿದೆ. ಮನೆಯ ಒಳಗೆ ಬರಬೇಡ' ಎಂದ ಅತ್ತೆ ನಮ್ಮನ್ನು ಹೊರಗೆ ತಳ್ಳಿ ಹಲ್ಲೆ ನಡೆಸಿದರು ಎಂದು ಸಂತ್ರಸ್ತ ನಟಿ ಆರೋಪಿಸಿದ್ದಾರೆ.

ನನ್ನ ಮದುವೆ ಸಂದರ್ಭದಲ್ಲಿ ಪ್ರೀತಮ್​ಗೆ 5.50 ಲಕ್ಷ ರೂ. ನಗದು, ಬಟ್ಟೆ, ಒಂದು ಚಿನ್ನದ ಉಂಗುರ, ಚಿನ್ನದ ಬ್ರಾಸ್ಲೇಟ್, ಕತ್ತಿಗೆ ಸರ, ಬಟ್ಟೆ ಕೊಡಲಾಗಿತ್ತು. ಇದಲ್ಲದೆ ನನಗೆ 300 ಗ್ರಾಂ ಚಿನ್ನದ ಆಭರಣ, 2 ಕೆಜಿ ಬೆಳ್ಳಿ ಆಭರಣವನ್ನು ನನ್ನ ಪಾಲಕರು ಕೊಟ್ಟಿದ್ದರು. ಇಷ್ಟು ಸಾದೆಂಬಂತೆ ಮತ್ತೆ 3 ಲಕ್ಷ ರೂ. ಹಣ ತರುವಂತೆ ನನ್ನ ಗಂಡ ಪೀಡಿಸುತ್ತಿದ್ದ ಎಂದು ಸಂತ್ರಸ್ತ ನಟಿ ದೂರಿನಲ್ಲಿ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net