ನಾನು ಎಚ್ಚರಿಕೆ ಕೊಡುತ್ತೇನೆ.. ಮುಟ್ಟಿ ನೋಡಿ..: ಕಾಂಗ್ರೆಸ್​ಗೆ ಸವಾಲೆಸೆದ ಸಿಎಂ ಬೊಮ್ಮಾಯಿ

CM basavaraj bommai
Published on

ರಾಯಚೂರು: ಮೀಸಲಾತಿ, ಒಳಮೀಸಲಾತಿ ವಿಚಾರವನ್ನೇ ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅದೇ ವಿಚಾರವಾಗಿ ಕಾಂಗ್ರೆಸಿಗರಿಗೆ ಸವಾಲೆಸೆದಿದ್ದಾರೆ. ರಾಯಚೂರಿನಲ್ಲಿ ಇಂದು ಮಾತನಾಡಿದ ಅವರು ಈ ವಿಷಯವಾಗಿ ಮಾತನಾಡಿದ್ದಾರೆ.

ನಾವು ಮಾಡಿರುವ ಮೀಸಲಾತಿ, ಒಳಮೀಸಲಾತಿ ಜನರ ಕೂಗು. ರಾಜಕೀಯ ಇಚ್ಛಾಶಕ್ತಿಯಿಂದ ಅದನ್ನು ಮಾಡಿದ್ದೇವೆ, ಅದರ ಲಾಭವನ್ನ ಮುಂದೆ ಪಡೆದುಕೊಳ್ಳಬೇಕಿದೆ. ಈ ವಿಚಾರವನ್ನು ಮನೆಮನೆಗೆ ತೆರಳಿ ತಿಳಿಸಬೇಕು. ದೊಡ್ಡ ಸಾಮಾಜಿಕ ಬದಲಾವಣೆ ಆಗಬೇಕು. ಹಿಂದೆ ಬಸವಣ್ಣನವರು ಮಾಡಿದ ಹಾಗೆ ಕಲಿಯುಗದಲ್ಲೂ ಆಗಬೇಕು ಎಂದು ಬೊಮ್ಮಾಯಿ ಹೇಳಿದ್ದಾರೆ.

ಕಾಂಗ್ರೆಸ್‌ನವರು ನಾವು ಮೀಸಲಾತಿ ರದ್ದು ಮಾಡುತ್ತೇವೆ ಎನ್ನುತ್ತಿದ್ದಾರೆ. ಜನರು ನಿಮಗೆ ಅಂಥ ಅನಿಷ್ಠ ಕೆಲಸ ಮಾಡಲು ಅವಕಾಶ ಕೊಡುವುದಿಲ್ಲ. ನಾನು ಎಚ್ಚರಿಕೆ ಕೊಡುತ್ತೇನೆ, ಬೇಕಿದ್ದರೆ ಮುಟ್ಟಿ ನೋಡಿ. ಮೀಸಲಾತಿಯನ್ನು ಮುಟ್ಟಿದರೆ ಹಳ್ಳಿಹಳ್ಳಿಯಲ್ಲಿ ಕಾಂತ್ರಿಯಾಗುತ್ತದೆ. ಈ ಜನಾಂಗ ಎದ್ದು ನಿಂತರೆ ನೀವು ಎಲ್ಲರೂ ರಾಜಕೀಯ ಕ್ಷೇತ್ರದಿಂದ ಮಾಯವಾಗುತ್ತೀರಿ ಎಂದು ಸವಾಲೆಸೆದಿದ್ದಾರೆ.

ಮೀಸಲಾತಿಯನ್ನು ಸದ್ಬಳಕೆ ಮಾಡಿಕೊಂಡು ಬೆಳೆಯಬೇಕು. ಸೂರ್ಯ-ಚಂದ್ರ ಇರುವವರೆಗೂ ಯಾರೂ ಅದನ್ನು ಮುಟ್ಟಲು ಸಾಧ್ಯವಿಲ್ಲ. ಬಡತನದಲ್ಲಿ ಹುಟ್ಟಿದರೂ ಸ್ವಂತ ಶಕ್ತಿಯಿಂದ ಸ್ವಾವಲಂಬನೆಯ ಬದುಕು ಬದುಕಬೇಕು. ಯಾರಿಗೆ ಸ್ವಾಭಿಮಾನದ ಬದುಕು ಸಿಕ್ಕಿಲ್ಲ ಅವರು ಶಾಪಗ್ರಸ್ತರು, ಅವರ ಶಾಪ ವಿಮುಕ್ತಿ ಮಾಡಲು ನಿರ್ಧಾರ ಮಾಡಿದ್ದೇವೆ. ಚುನಾವಣೆ ವಿಚಾರ ಏನೇ ಇರಲಿ, ಬದಲಾವಣೆ ತರುವ ಶಕ್ತಿ ಜನರಲ್ಲಿದೆ, ನಿಮ್ಮಲ್ಲಿದೆ.. ಏಳಿ ಎದ್ದೇಳಿ ಒಂದಾಗಿ ಎಂದು ಬೊಮ್ಮಾಯಿ ಕರೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net