ಕೋವಿಡ್​ನಿಂದ ಸತ್ತಿದ್ದ ಎನ್ನಲಾದ ವ್ಯಕ್ತಿ 2 ವರ್ಷದ ಬಳಿಕ ಮನೆಗೇ ಬಂದ!; ಅಂತ್ಯಸಂಸ್ಕಾರ ಮಾಡಿದ್ವಿ ಎಂದಿದ್ದ ಅಧಿಕಾರಿಗಳು!

Covid
Published on

ಅಹಮದಾಬಾದ್: ಮನೆಯವರೆಲ್ಲ ಆತ ಸತ್ತೇ ಹೋಗಿದ್ದ ಎಂದು ಭಾವಿಸಿದ್ದರು. ಏಕೆಂದರೆ ಸರ್ಕಾರಿ ಅಧಿಕಾರಿಗಳು ಕೂಡ ತಾವು ಆತನ ಅಂತ್ಯಸಂಸ್ಕಾರ ಮಾಡಿದ್ದಾಗಿ ಹೇಳಿದ್ದರು. ಆದರೆ ಇವೆಲ್ಲ ಆಗಿ ಎರಡು ವರ್ಷಗಳ ಬಳಿಕ ಆ ವ್ಯಕ್ತಿ ಮನೆಗೆ ಬಂದಿದ್ದು, ಮನೆಯವರೆಲ್ಲ ಒಮ್ಮೆ ದಿಗ್ಭ್ರಾಂತರಾದ ಪ್ರಸಂಗವೂ ನಡೆದಿದೆ.

ಮಧ್ಯಪ್ರದೇಶದ ಧಾರ್​ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ. 30 ವರ್ಷದ ಕಮಲೇಶ್ ಎಂಬಾತನೇ ಆ ವ್ಯಕ್ತಿ. ಕೋವಿಡ್​ ಎರಡನೇ ಅಲೆಯ ವೇಳೆ ಅಂದರೆ 2021ರಲ್ಲಿ ಕಮಲೇಶ್​ ಕರೊನಾ ಸೋಂಕಿಗೆ ತುತ್ತಾಗಿದ್ದ. ಆದರೆ ಚಿಕಿತ್ಸೆಗೆ ದಾಖಲಾಗಿದ್ದ ಆತ ಸಾವಿಗೀಡಾಗಿದ್ದ ಎಂದು ಮನೆಯವರಿಗೆ ತಿಳಿಸಲಾಗಿತ್ತು. ಅಲ್ಲದೆ ಕೋವಿಡ್ ಮಾರ್ಗಸೂಚಿಗಳ ಪ್ರಕಾರ ತಾವೇ ಅಂತ್ಯಸಂಸ್ಕಾರ ಮಾಡಿದ್ದಾಗಿಯೂ ಅವರು ಮನೆಯವರಿಗೆ ಹೇಳಿದ್ದರು. ಹೀಗಾಗಿ ಮನೆಯವರೆಲ್ಲ ಆತ ಸತ್ತು ಹೋಗಿದ್ದ ಎಂದೇ ಭಾವಿಸಿದ್ದರು.

ಆದರೆ ಅದಾಗಿ ಎರಡು ವರ್ಷಗಳ ಬಳಿಕ ಆತ ಖುದ್ದು ಮನೆಗೇ ಬಂದಿದ್ದಾನೆ. ಗುಜರಾತ್​ನ ಅಹಮದಾಬಾದ್​ನಿಂದ ಆತ ಮನೆಗೆ ಮರಳಿದ್ದು, ಆತನನ್ನು ಕಂಡ ಮನೆಯವರು ಒಮ್ಮೆ ದಿಗ್ಭ್ರಮೆಗೊಂಡಿದ್ದರು. ಅಹಮದಾಬಾದ್​ನಲ್ಲಿ ತನ್ನನ್ನು ಒಂದು ಗ್ಯಾಂಗ್ ಇರಿಸಿಕೊಂಡಿದ್ದು, ದಿನ ಬಿಟ್ಟು ದಿನ ಯಾವುದೋ ಮದ್ದು ಇಂಜೆಕ್ಟ್ ಮಾಡುತ್ತಿದ್ದರು ಎಂಬುದಾಗಿ ಆತ ತಿಳಿಸಿದ್ದಾನೆ. ಕಮಲೇಶ್​ನನ್ನು ಆತನ ಪತ್ನಿ ಮತ್ತು ಕುಟುಂಬಸ್ಥರು ಗುರುತು ಹಿಡಿದಿದ್ದು, ಸತ್ತು ಹೋಗಿದ್ದ ಎನ್ನಲಾದವನೇ ಬದುಕಿರುವುದು ಖಚಿತವಾಗಿದೆ. ಪ್ರಕರಣ ಸಂಬಂಧ ಧಾರ್ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net