ಸಂಪಾದಕೀಯ | ಭರವಸೆಯಾಗಿ ಉಳಿಯದಿರಲಿ

ವಿಜಯವಾಣಿ (2)
Published on

ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಕನ್ನಡದ ತಾಯಿ ಭುವನೇಶ್ವರಿಯ ಪ್ರತಿಮೆ ಅನಾವರಣದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಹತ್ವದ ಘೊಷಣೆಯೊಂದನ್ನು ಮಾಡಿದ್ದಾರೆ. ಕನ್ನಡ ಪರ ಹೋರಾಟಗಾರರ ಮೇಲೆ ಹಾಕಿರುವ ಎಲ್ಲ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅವರು ಹೇಳಿದಂತೆಯೇ ಜಾರಿಗೆ ಬಂದರೆ ಇದು ಅತ್ಯಂತ ಸ್ವಾಗತಾರ್ಹ ನಿರ್ಧಾರವೇ ಸರಿ.

ಹಿಂದೆ ಹಲವು ಮುಖ್ಯಮಂತ್ರಿಗಳು, ಸಚಿವರು ಈ ರೀತಿಯ ಭರವಸೆಗಳನ್ನು ನೀಡಿದ್ದಿದೆ. ಆದರೆ ಅವರ್ಯಾರೂ ತಮ್ಮ ಮಾತನ್ನು ಉಳಿಸಿಕೊಂಡಿಲ್ಲ. ಸಿದ್ದರಾಮಯ್ಯನವರ ವಿಷಯದಲ್ಲಿ ಹಾಗಾಗುವುದಿಲ್ಲ ಎಂಬುದು ಕನ್ನಡಪರ ಹೋರಾಟಗಾರರ ನಂಬಿಕೆ. ಮೊಕದ್ದಮೆ ಹಿಂತೆಗೆತದ ಬಗ್ಗೆ ಹೋರಾಟಗಾರರು ಅಧಿಕೃತವಾಗಿ ಅರ್ಜಿ ಸಲ್ಲಿಸಲಿ ಎಂದು ಸರ್ಕಾರ ಕಾಯುವ ಅವಶ್ಯಕತೆ ಇಲ್ಲ. ತಾನೇ ಸ್ವಇಚ್ಛೆಯಿಂದ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಇಟ್ಟು, ಶೀಘ್ರದಲ್ಲೇ ಕೇಸ್​ಗಳನ್ನು ಹಿಂಪಡೆಯಬೇಕು. ನಾಡಿನ ನೆಲ-ಜಲಕ್ಕಾಗಿ ಹೋರಾಡುವುದು ಅಪರಾಧವಲ್ಲ, ಹೆಮ್ಮೆಯ ಸಂಗತಿ ಎಂಬುದನ್ನು ಸರ್ಕಾರ ಈ ಮೂಲಕ ದೃಢಪಡಿಸಬೇಕು.

ಕನ್ನಡ ನಾಡು ನುಡಿಯ ವಿಷಯ ಬಂದಾಗ ಸಿದ್ದರಾಮಯ್ಯ ಅವರು ಹಿಂದೆಯೂ ಹಲವು ಬಾರಿ ಉತ್ತಮ ತೀರ್ಮಾನಗಳನ್ನೇ ಕೈಗೊಂಡಿದ್ದಾರೆ. ಎಲ್ಲ ಅಂಗಡಿ - ಮುಂಗಟ್ಟುಗಳ ಮೇಲಿನ ನಾಮಫಲಕಗಳಲ್ಲಿ ಕನ್ನಡಕ್ಕೆ ಅಗ್ರಸ್ಥಾನ ದೊರೆಯಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ಕೆಲವು ತಿಂಗಳುಗಳ ಹಿಂದೆ ಕನ್ನಡಪರ ಹೋರಾಟಗಾರರು ಚಳವಳಿ ನಡೆಸಿದ್ದರು. ರಾಜ್ಯ ರಾಜಧಾನಿಯಲ್ಲಿ ಹಲವೆಡೆ ಅನ್ಯಭಾಷಿಕರ ಸಂಖ್ಯೆಯೇ ಹೆಚ್ಚಾಗಿರುವುದರಿಂದ ಫಲಕಗಳಲ್ಲಿ ಸಹಜವಾಗಿಯೇ ಕನ್ನಡಕ್ಕೆ ಆದ್ಯತೆ ದೊರೆಯುತ್ತಿಲ್ಲ. ಸೌಮ್ಯ ರೀತಿಯಲ್ಲಿ ತಿಳಿಹೇಳಿದರೆ ಅನ್ಯಭಾಷಿಕರು ಕೇಳುವುದೂ ಇಲ್ಲ. ಅಂತಹ ಸಂದರ್ಭಗಳಲ್ಲಿ ಕನ್ನಡಪರ ಹೋರಾಟಗಾರರು ಸ್ವಲ್ಪ ಮಟ್ಟಿಗೆ ಬಲಪ್ರಯೋಗ ಮಾಡುವುದು ಅನಿವಾರ್ಯವಾಗುತ್ತದೆ.

ಕನ್ನಡ ನಾಮಫಲಕಕ್ಕೆ ಸಂಬಂಧಿಸಿದ ಹೋರಾಟವೊಂದರಲ್ಲೇ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ಅವರ ಮೇಲೆ ಒಂದೇ ದಿನ ಹದಿನಾರು ಪ್ರಕರಣಗಳು ದಾಖಲಾಗಿದ್ದವು. ಹಲವಾರು ದಿನಗಳ ಕಾಲ ಅವರು ಜೈಲಿನಲ್ಲಿರಬೇಕಾಯಿತು. ಆದರೆ ಕೆಲವೇ ದಿನಗಳಲ್ಲಿ ಸಿದ್ದರಾಮಯ್ಯ ಅವರು ಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಇರಲೇಬೇಕು ಎಂದು ಕಾಯ್ದೆಯನ್ನೇ ಜಾರಿ ಮಾಡಿದರು. ಇದು ಅವರ ಕನ್ನಡಪರ ನಿಲುವುಗಳಿಗೆ ಒಂದು ಉದಾಹರಣೆ. ‘ನಮ್ಮ ಮೆಟ್ರೋ’ ರೈಲುಗಳಲ್ಲಿ ಕೂಡ ಹಿಂದಿ ಹೇರಿಕೆ ವಿಪರೀತವಾಗಿತ್ತು. ಅದನ್ನು ತಡೆಯುವ ದಿಸೆಯಲ್ಲಿಯೂ ಕನ್ನಡಪರ ಹೋರಾಟಗಾರರು ಸಾಕಷ್ಟು ಹೋರಾಟ ನಡೆಸಿದರು.

ಆ ವಿಷಯದಲ್ಲಿಯೂ ಸಿದ್ಧರಾಮಯ್ಯ ಕನ್ನಡದ ಪರವಾಗಿ ದಿಟ್ಟ ನಿರ್ಧಾರ ಕೈಗೊಂಡಿದ್ದರು. ಕನ್ನಡದ ಕೆಲಸಗಳು ಇಷ್ಟಕ್ಕೇ ಸೀಮಿತವಲ್ಲ. ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಿಗೆ ಹೊರರಾಜ್ಯಗಳಿಂದ ಬಂದು ನೆಲೆಸುವವರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಅವರು ಸ್ಥಳೀಯರ ಉದ್ಯೋಗಗಳನ್ನು ಕಿತ್ತುಕೊಳ್ಳುವುದು ನಿರಂತರವಾಗಿ ನಡೆಯುತ್ತಿದೆ. ಕರ್ನಾಟಕದಲ್ಲೇ ಸರ್ಕಾರಿ ಉದ್ಯೋಗಗಳು ಕನ್ನಡಿಗರ ಕೈ ತಪ್ಪುತ್ತಿವೆ. ಇದನ್ನೆಲ್ಲ ನಿಗ್ರಹಿಸಲು ನ್ಯಾಯಾಂಗ ಪರಿಷ್ಕರಣೆಯಲ್ಲೂ ದೃಢವಾಗಿ ನಿಲ್ಲುವಂತಹ ಸಮರ್ಪಕ ಕಾಯ್ದೆಗಳನ್ನು ರೂಪಿಸುವ ಅವಶ್ಯಕತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net