

Apsara Rani: ಟಾಲಿವುಡ್ ಉದ್ಯಮದಲ್ಲಿ ತನ್ನ ಹಾಟ್ ಬ್ಯೂಟಿಯಿಂದಲೇ ಗುರುತಿಸಿಕೊಂಡಿರುವ ಅಪ್ಸರಾ ರಾಣಿ, ಐಟಂ ಸಾಂಗ್ಗಳಿಗೆ ಹೆಸರುವಾಸಿ. ಇಂತಹ ಹಾಡುಗಳಲ್ಲಿ ಭರ್ಜರಿಯಾಗಿ ಹೆಜ್ಜೆ ಹಾಕುತ್ತಿದ್ದ ಅಪ್ಸರಾ, ಅಂದು ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದ ಚೆಲುವೆ. ಕೇವಲ ಐಟಂ ಸಾಂಗ್ಗಳಿಂದಲೇ ಜನಪ್ರಿಯತೆ ಗಳಿಸಿದ ಬೋಲ್ಡ್ ರಾಣಿ, ತನಗಾದ ಬೇಸರದಿಂದ ಚಿತ್ರರಂಗವನ್ನು ಬಿಡಲು ದೃಢವಾಗಿ ನಿರ್ಧರಿಸಿದ್ದರಂತೆ. ಈ ಕುರಿತು ಇತ್ತೀಚಿನ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿರುವ ನಟಿ, ಸಿನಿ ಉದ್ಯಮ ತ್ಯಜಿಸಲು ನಿರ್ಧರಿಸಿದ್ದೇಕೆ ಎಂಬುದನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
"ಒಂದು ಸಮಯದಲ್ಲಿ ಐಟಂ ಸಾಂಗ್ ಮಾಡಿದೆ. ತದನಂತರ ಕೇವಲ ಇಂತಹ ಹಾಡುಗಳಲ್ಲಿ ಕುಣಿಯಲು ಮಾತ್ರ ನನಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದವು. ದಿನ ಕಳೆದಂತೆ ಇದೇ ರೀತಿಯ ಪಾತ್ರಗಳು ಸಿಗುತ್ತಿದ್ದರಿಂದ ಮನಸ್ಸಿಗೆ ತೀರ ಘಾಸಿಯಾಯಿತು. ಮುಂದಿನ ದಿನಗಳಲ್ಲಿ ನಾನು ನಟಿಯಾಗಿ ಒಳ್ಳೆಯ ಪಾತ್ರ ಮಾಡುವ ಅವಕಾಶ ಸಿಗುವುದಿಲ್ಲ ಎಂಬುದು ನನಗೆ ಖಾತ್ರಿಯಾಯಿತು. ಇದೇ ಕಾರಣದಿಂದ ಚಿತ್ರರಂಗದಿಂದ ದೂರ ಉಳಿಯಲು ನಿರ್ಧರಿಸಿದೆ. ಆದರೆ, ನನ್ನ ನೋವು ಭಗವಂತನಿಗೆ ಕೇಳಿಸಿತೋ ಏನೋ, ದೇವರು 'ರಾಚರಿಕಂ' ಚಿತ್ರತಂಡವನ್ನು ನನಗೆ ಪರಿಚಯಿಸಿದ" ಎಂದಿದ್ದಾರೆ.
"ತೆಲುಗು ಚಿತ್ರರಂಗ ತೊರೆಯಲು ಮುಂದಾದ ಸಮಯದಲ್ಲೇ 'ರಾಚರಿಕಂ' ಸಿನಿಮಾ ತಂಡ ನನ್ನೊಂದಿಗೆ ಮಾತನಾಡಿತು. ಈ ಚಿತ್ರದಲ್ಲಿ ನನಗೊಂದು ಒಳ್ಳೆಯ ಪಾತ್ರವನ್ನು ಕೊಡುವ ಮೂಲಕ ನನ್ನನ್ನು ಟಾಲಿವುಡ್ನಲ್ಲಿ ಮುಂದುವರಿಯುವಂತೆ ಮಾಡಿತು. ಇದಕ್ಕೆ ಭಗವಂತನೇ ಕಾರಣ. ಈ ಚಿತ್ರದಲ್ಲಿ ನಾನು ಉತ್ತಮ ಪಾತ್ರವನ್ನೇ ನಿರ್ವಹಿಸಿದ್ದೇನೆ" ಎಂದು ಅಪ್ಸರಾ ರಾಣಿ ಮನಬಿಚ್ಚಿ ಮಾತನಾಡಿದ್ದಾರೆ.
'ರಾಚರಿಕಂ' ಚಿತ್ರ ಇಂದು (ಜ.31) ತೆಲುಗು ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಉತ್ತರಾಖಂಡದ ಸುಂದರಿ ನಟನೆ ಬಗ್ಗೆ ಪ್ರೇಕ್ಷಕರು ಏನು ಹೇಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).