ರಣಜಿಯಲ್ಲಿಯೂ ವಿರಾಟ್​ ಕಳಪೆ ಫಾರ್ಮ್​! ಕೊಹ್ಲಿಗೆ ದುಃಸ್ವಪ್ನವಾಗಿ ಕಾಡಿದ ಈ ವೇಗಿ ಯಾರು? ಈತನದ್ದು ಧೋನಿಯ ಕಥೆ.. | Himanshu Sangwan

ವಿಜಯವಾಣಿ - 2025-01-31T193332.602
Published on

Himanshu Sangwan: 12 ವರ್ಷಗಳ ಬಳಿಕ ರಣಜಿ ಕ್ರಿಕೆಟ್​ಗೆ ಮರಳಿದ ಟೀಮ್ ಇಂಡಿಯಾ ಸ್ಟಾರ್​ ಬ್ಯಾಟರ್​, ಮಾಜಿ ಕ್ಯಾಪ್ಟನ್​ ವಿರಾಟ್ ಕೊಹ್ಲಿ, ಇಂದು ನಡೆದ ದೇಶಿಯ ಟೂರ್ನಿಯಲ್ಲೂ ತಮ್ಮ ಕಳಪೆ ಫಾರ್ಮ್​ನ ಮುಂದುವರಿಸಿದ್ದಾರೆ. ರೈಲ್ವೇಸ್​ ತಂಡದ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಪರ ಬ್ಯಾಟ್​ ಮಾಡಲು ಕ್ರೀಸ್​ಗೆ ಬಂದ ಕೊಹ್ಲಿ, ಬಹುಬೇಗನೆ ವಿಕೆಟ್​ ಒಪ್ಪಿಸಿ ಪೆವಿಲಿಯನ್​ನತ್ತ ಮುಖ ಮಾಡಿದ್ದು ಅಭಿಮಾನಿಗಳಲ್ಲಿ ಭಾರೀ ನಿರಾಸೆಯನ್ನುಂಟು ಮಾಡಿದೆ.

ದೆಹಲಿ ಪರ ಕಣಕ್ಕಿಳಿದ ವಿರಾಟ್​ ಕೊಹ್ಲಿ, ಕೇವಲ 6 ರನ್​ ಗಳಿಸಿ ಔಟಾದರು. ಇದು ದೇಶೀಯ ಟೂರ್ನಿಯಲ್ಲೂ ವಿರಾಟ್ ವೈಫಲ್ಯವನ್ನು ಎತ್ತಿಹಿಡಿಯಿತು. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿ, ಮಾಜಿ ಕ್ರಿಕೆಟಿಗರ ಟೀಕೆ, ವ್ಯಂಗ್ಯಗಳಿಗೆ ಗುರಿಯಾಗಿದ್ದ ಕೊಹ್ಲಿ, ರಣಜಿ ಟ್ರೋಫಿಯಲ್ಲಿಯೂ ಅದೇ ಕಳಪೆ ಫಾರ್ಮ್ ಮುಂದುವರಿಸಿರುವುದು ಕ್ರೀಡಾಂಗಣಕ್ಕೆ ಆಗಮಿಸಿದ್ದ ಅಪಾರ ಸಂಖ್ಯೆಯ ವಿರಾಟ್​ ಅಭಿಮಾನಿಗಳನ್ನು ಬೇಸರಕ್ಕೆ ದೂಡಿದೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ 'ರನ್​ಮಷಿನ್'​ ಹೆಸರನ್ನು ಕೇಳಿದರೆ ಅತ್ಯಂತ ಪ್ರತಿಭಾನ್ವಿತ ಬೌಲರ್‌ಗಳು ಸಹ ಬೆದರುತ್ತಾರೆ. ವಿರಾಟ್​ ಕ್ರೀಸ್​ನಲ್ಲಿದ್ದಾರೆ ಎಂದರೆ ಎದುರಾಳಿ ಬೌಲರ್‌ಗಳ ಮೇಲೆ ಒತ್ತಡ ಹೆಚ್ಚಿರಲಿದೆ ಎಂದೇ ಅರ್ಥ. ತಮ್ಮ ಕ್ರಿಕೆಟ್​ ಕರಿಯರ್​ನಲ್ಲಿ ಕೊಹ್ಲಿ ಅನೇಕ ಬೌಲರ್​ಗಳಿಗೆ ನಿದ್ದೆಯಿಲ್ಲದ ರಾತ್ರಿಗಳನ್ನು ತೋರಿಸಿದ್ದಾರೆ. ಇದಕ್ಕೆ ಹಲವು ನಿದರ್ಶನಗಳು ಇಂದು ನಮ್ಮ ಕಣ್ಣ ಮುಂದಿವೆ. ಹೀಗಿರುವಾಗ ಅಪರೂಪಕ್ಕಾದರೂ ಇಂತಹ ಸ್ಟಾರ್ ಬ್ಯಾಟರ್​ನ ವಿಕೆಟ್​ ಪಡೆದು ಸಂಭ್ರಮಿಸಬೇಕು ಎಂಬ ಆಸೆ ಅದೆಷ್ಟೋ ವೇಗಿಗಳದ್ದು. ಆದ್ರೆ, ಇದನ್ನು ಬಹಳ ಸುಲಭವಾಗಿ ಈಡೇರಿಸಿಕೊಂಡಿದ್ದು ರೈಲ್ವೇಸ್​ ತಂಡ ಹಿಮಾಂಶು ಸಾಂಗ್ವಾನ್.

ಹಿಮಾಂಶು ಮೋಡಿ

ಇಂದು ದೆಹಲಿಯ ಅರುಣ್ ಜೆಟ್ಲಿ ಸ್ಟೇಡಿಯಂನಲ್ಲಿ ನಡೆದ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ಯಶ್ ಧುಲ್ ಔಟಾದ ನಂತರ ಕೊಹ್ಲಿ ಮೈದಾನಕ್ಕಿಳಿದರು. ವಿರಾಟ್​ ಆಗಮಿಸುತ್ತಿದ್ದಂತೆ ಉತ್ಸಾಹದಿಂದ ಕೂಗಾಡಿದ ಅಭಿಮಾನಿಗಳು, ವಿರಾಟ್‌ರಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸಿದ್ದರು. ಆದರೆ, ಕಿಂಗ್ ಕೊಹ್ಲಿ ಕನಿಷ್ಠ ಎರಡಂಕಿ ತಲುಪಲು ಸಾಧ್ಯವಾಗದ ಪರಿಸ್ಥಿತಿ ಕಂಡು ಭಾರೀ ಬೇಸರಗೊಂಡರು. ಕೇವಲ ಆರು ರನ್​ಗೆ ಔಟ್ ಆದ ವಿರಾಟ್​ ಪೆವಿಲಿಯನ್​ಗೆ ಮರಳಿದರು. ಒಂದೆಡೆ ಬೇಸರವಾದರೆ, ಮತ್ತೊಂದೆಡೆ ಟೀಮ್ ಇಂಡಿಯಾಗೆ ಭರವಸೆಯ ಬೌಲರ್​ ಸಿಗುವ ಸುಳಿವು ಲಭಿಸಿತು. ಕೊಹ್ಲಿಯ ವಿಕೆಟ್​ ಕಬಳಿಸಿದ ವೇಗಿ ಹಿಮಾಂಶುಗೆ ಸದ್ಯ ವ್ಯಾಪಕ ಮೆಚ್ಚುಗೆಗಳು ಹರಿದುಬರುತ್ತಿವೆ.

ರೈಲ್ವೇಸ್ ವೇಗಿ ಹಿಮಾಂಶು ಸಂಗ್ವಾನ್ ತಮ್ಮ ಇನ್ ಸ್ವಿಂಗರ್ ಮೂಲಕ ಕೊಹ್ಲಿಯನ್ನು ಬೌಲ್ಡ್ ಮಾಡಿದರು. ಬ್ಯಾಟ್ ಮತ್ತು ಪ್ಯಾಡ್ ನಡುವಿನ ಅಂತರದ ಮೂಲಕ ಹಾದುಹೋದ ಬಾಲ್​ ವಿಕೆಟ್‌ಗಳನ್ನು ಅಲಗಾಡಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ದಿಗ್ಗಜ ಬ್ಯಾಟರ್​ನ ವಿಕೆಟ್​ ಪಡೆಯುವಲ್ಲಿ ಹಿಮಾಂಶು ಮೇಲುಗೈ ಸಾಧಿಸಿದರು. ಸದ್ಯ ಈತನ ಹೆಸರು ಜಾಲತಾಣಗಳಲ್ಲಿ ಸಖತ್​ ಟ್ರೆಂಡಿಂಗ್ ಆಗಿದ್ದು, ನೆಟ್ಟಿಗರು ಈತ ಯಾರೆಂದು ತಿಳಿಯಲು ಕೌತುಕ ವ್ಯಕ್ತಪಡಿಸಿದ್ದಾರೆ.

ಯಾರೀ ಹಿಮಾಂಶು ಸಂಗ್ವಾನ್?

ಸೆಪ್ಟೆಂಬರ್ 2, 1995ರಂದು ದೆಹಲಿಯ ನಜಾಫ್‌ಗಢದಲ್ಲಿ ಜನಿಸಿದ ಹಿಮಾಂಶು ಸಂಗ್ವಾನ್, ಬಲಗೈ ಮಧ್ಯಮ ವೇಗಿ. ಪ್ರಸ್ತುತ ರೈಲ್ವೇಸ್​ ರಾಯಲ್ಸ್ ಪರ ಆಡುತ್ತಿದ್ದು, ಈ ಹಿಂದೆ ದೆಹಲಿ ಪರವು ಆಡಿದ್ದಾರೆ. 2019ರಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಲಿಸ್ಟ್ ಎಗೆ ಪದಾರ್ಪಣೆ ಮಾಡಿದ ಹಿಮಾಂಶು, ನಂತರದಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಟಿ20ಗೆ ಎಂಟ್ರಿಕೊಟ್ಟರು. ಅದೇ ವರ್ಷ ಅವರು ರಣಜಿ ಟ್ರೋಫಿಗೂ ಲಗ್ಗೆಯಿಟ್ಟರು. ಇಲ್ಲಿಯವರೆಗೆ 23 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಯುವ ವೇಗಿ, 77 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ 17 ಪಂದ್ಯಗಳನ್ನು ಆಡಿ, 21 ವಿಕೆಟ್‌ಗಳನ್ನು ಪಡೆದಿದ್ದಾರೆ. ಮತ್ತು 7 ಟಿ20 ಪಂದ್ಯಗಳಲ್ಲಿ 5 ವಿಕೆಟ್‌ಗಳನ್ನು ಪಡೆದಿದ್ದಾರೆ.

'ಕ್ಯಾಪ್ಟನ್ ಕೂಲ್​' ಕಥೆ

ಹಿಮಾಂಶು ಸಂಗ್ವಾನ್ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು ದೆಹಲಿ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಇದು ಕ್ರಿಕೆಟ್​ ದಿಗ್ಗಜ, ಟೀಮ್ ಇಂಡಿಯಾದ ಶ್ರೇಷ್ಠ ನಾಯಕ ಎಂ.ಎಸ್​. ಧೋನಿ ಅವರ ಜೀವನದ ಕಥೆಯನ್ನೇ ಹೋಲುತ್ತದೆ. ತದನಂತರ ತಮ್ಮ ಕ್ರಿಕೆಟ್​ ಕನಸ್ಸಿಗಾಗಿ ಎಂಆರ್‌ಎಫ್ ಫೌಂಡೇಶನ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡ ಹಿಮಾಂಶು, ಆಸ್ಟ್ರೇಲಿಯಾದ ಲೆಜೆಂಡ್ರಿ ಬೌಲರ್ ಗ್ಲೆನ್ ಮೆಕ್‌ಗ್ರಾತ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿರುವುದು ಗಮನಾರ್ಹ. ಕ್ರಿಕೆಟ್​ ಲೋಕದಲ್ಲಿ ಗುರುತಿಸಿಕೊಳ್ಳುವುದೇ ನನ್ನ ಮಹತ್ವದ ಕನಸು ಎಂದು ಹೇಳಿರುವ ಹಿಮಾಂಶು, ತಮ್ಮ ದಿಕ್ಕನ್ನು ಬದಲಾಯಿಸುವ ಮಾತಿಲ್ಲ ಎನ್ನುವಂತೆ ಸಾಗುತ್ತಿದ್ದಾರೆ.

ಪ್ರಸ್ತುತ ರಣಜಿ ಟ್ರೋಫಿಯ ಭಾಗವಾಗಿರುವ ಹಿಮಾಂಶು, ರೈಲ್ವೇಸ್​ ತಂಡದ ಪರ ಅಖಾಡದಲ್ಲಿ ಸದ್ದು ಮಾಡುತ್ತಿದ್ದಾರೆ. ಈ ಹಿಂದೆ ಟೀಮ್ ಇಂಡಿಯಾದ ಓಪನಿಂಗ್ ಬ್ಯಾಟರ್​ಗಳಾದ ಅಜಿಂಕ್ಯ ರಹಾನೆ ಮತ್ತು ಪೃಥ್ವಿ ಶಾ ಅವರ ವಿಕೆಟ್‌ಗಳನ್ನೂ ಹಿಮಾಂಶು ಪಡೆದಿದ್ದಾರೆ. 60 ರನ್​ ಕೊಟ್ಟು 6 ವಿಕೆಟ್‌ಗಳನ್ನು ಪಡೆಯುವ ಮೂಲಕ ಹಿಮಾಂಶು ಕ್ರಿಕೆಟ್​ ಲೋಕದಲ್ಲಿ ತಮ್ಮ ಹೆಸರನ್ನು ದಾಖಲಿಸುತ್ತಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net