

ನವದೆಹಲಿ: ಭಾರತೀಯ ರೈಲ್ವೆ ಬೋಗಿಯಲ್ಲಿ ಪ್ರಯಾಣಿಕರೊಬ್ಬರು ಸೆರೆಹಿಡಿಯಲಾದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಪ್ರಯಾಣಿಕರು ತಮ್ಮ ಪ್ರಯಾಣದ ವೇಳೆ ಮಾಡುವ ತಪ್ಪುಗಳನ್ನು ಒಮ್ಮೆ ಕ್ಷಮಿಸಬಹುದು. ಆದ್ರೆ, ಪದೇ ಪದೇ ಇಂತಹದ್ದೇ ತಪ್ಪು ಮಾಡಿದರೆ, ಹೇಗೆ ಕ್ಷಮಿಸೋದು? ಏನೂ ಅಂತ ಹೇಳೋದು ನೀವೇ ಹೇಳಿ? ಎಂದು ಹೌಸ್‌ಕೀಪಿಂಗ್ ಸಿಬ್ಬಂದಿ ತೋಡಿಕೊಂಡ ಅಳಲು ಇದೀಗ ಸಾರ್ವಜನಿಕರನ್ನು ಕೆರಳಿಸಿದೆ.
ಕಡಿಮೆ ವೆಚ್ಚದಲ್ಲಿ ಸುಖಕರ ಪ್ರಯಾಣ ಮಾಡಲು ರೈಲು ಉತ್ತಮ ಎಂದು ಯೋಚಿಸುವ ಜನರು, ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ರೈಲಿನಲ್ಲಿ ಪ್ರಯಾಣ ಮಾಡಲು ಇಚ್ಛಿಸುತ್ತಾರೆ. ಈ ವೇಳೆ ತಾವು ತರುವ ತಿಂಡಿ-ತಿನಿಸುಗಳ ಪೇಪರ್, ಕವರ್ಗಳನ್ನು ಎಲ್ಲೆಂದರಲ್ಲಿ ಬಿಸಾಡುವ ಪ್ರಯಾಣಿಕರು, ಇದರಿಂದ ಇತರರಿಗೆ ಮತ್ತು ಅದನ್ನು ಸ್ವಚ್ಛಗೊಳಿಸುವ ನಿಬ್ಬಂದಿಗಳಿಗೆ ಎಷ್ಟು ಕಿರಿಕಿರಿ ಉಂಟಾಗುತ್ತದೆ ಎಂಬುದರ ಬಗ್ಗೆ ಕಿಂಚಿತ್ತು ತಲೆಕಡಿಸಿಕೊಳ್ಳುವುದಿಲ್ಲ. ಸದ್ಯ ಇದೇ ವಿಚಾರಕ್ಕೆ ಸಾರ್ವಜನಿಕರು ಇದೀಗ ಕಿಡಿಕಾರಿದ್ದು, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆಗಳನ್ನು ಹೊರಹಾಕಿದ್ದಾರೆ.
ರೈಲಿನ ಬೋಗಿಗಳಲ್ಲಿ ಸ್ವಚ್ಛತಾ ಕಾರ್ಯಕ್ಕೆ ಮುಂದಾದ ಹೌಸ್‌ಕೀಪಿಂಗ್ ಸಿಬ್ಬಂದಿಯೊಬ್ಬರು, ಪ್ರಯಾಣಿಕರು ಕುಳಿತುಕೊಳ್ಳಲು ಮೀಸಲಿಟ್ಟ ಆಸನದ ಕೆಳಗೆ ಹಾಕಿರುವ ಕಸದ ರಾಶಿಯನ್ನು ತೋರಿಸಿ, ಈ ರೀತಿ ಮಾಡಿದ್ರೆ ಹೇಗೆ? ದಯವಿಟ್ಟು ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಎಸೆಯಬೇಡಿ. ಕಸದಬುಟ್ಟಿಗೆ ಹಾಕುವ ಅಭ್ಯಾಸವನ್ನು ರೂಢಿಸಿಕೊಳ್ಳಿ ಎಂದು ತಿಳಿಸಿದ್ದಾರೆ. ಇದನ್ನು ರೆಕಾರ್ಡ್ ಮಾಡಿಕೊಂಡ ಪ್ರಯಾಣಿಕರೊಬ್ಬರು, ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ,(ಏಜೆನ್ಸೀಸ್).