

ಶಿಕಾರಿಪುರ: ಹೋರಿಹಬ್ಬ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಜನಪದ ಕ್ರೀಡೆ. ಅದು ನಮ್ಮ ಗ್ರಾಮೀಣ ಜನರ ಬದುಕಿನ ಸೊಗಡು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಪಟ್ಟಣದಲ್ಲಿ ಜನಸ್ಪಂದನ ಟ್ರಸ್ಟ್ ಶನಿವಾರ ಆಯೋಜಿಸಿದ್ದ ಹೋರಿಹಬ್ಬ- ಕರ್ನಾಟಕದ ಅಸ್ಮಿತೆ ಪುಸ್ತಕ ಬಿಡುಗಡೆ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಮೊಗ್ಗ, ಹಾವೇರಿ, ಗದಗ ಸೇರಿ ನಾಡಿನ ಬಹುತೇಕ ಜಿಲ್ಲೆಗಳಲ್ಲಿ ಈ ರೋಚಕವಾದ ಹೋರಿ ಬೆದರಿಸುವ ಹಬ್ಬವನ್ನು ಆಚರಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ಯುವಕರು ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದರು.
ಶಿಕಾರಿಪುರದ ಬಹುತೇಕ ರೈತರ ಮನೆಗಳಲ್ಲಿ ಹಬ್ಬಕ್ಕಾಗಿಯೇ ಲಕ್ಷಾಂತರ ರೂಪಾಯಿ ಕೊಟ್ಟು ಹೋರಿಗಳನ್ನು ತಂದು ಸಾಕುತ್ತಾರೆ. ಅಂತಹ ವಿಶೇಷ ತಳಿಗಳನ್ನು ಉಳಿಸಿ ಬೆಳೆಸಬೇಕು. ನಮ್ಮ ಹೋರಿಹಬ್ಬದ ಮಾದರಿಯಲ್ಲೇ ನಡೆಯುತ್ತಿರುವ ಜಲ್ಲಿಕಟ್ಟು ಮತ್ತು ಕಂಬಳ ಕ್ರೀಡೆಗಳು ವಿಶ್ವಪ್ರಸಿದ್ಧಿಯಾಗಿವೆ. ಅದಕ್ಕೆ ಕಾರಣ ಆ ಪ್ರಾಂತ್ಯದ ಜನ ಅವುಗಳನ್ನು ಪ್ರೀತಿಸಿ, ಆರಾಧಿಸುತ್ತಿರುವುದು. ನಮ್ಮಲ್ಲಿ ಕೆಲವರಿಗೆ ಹೋರಿಹಬ್ಬದ ಬಗ್ಗೆ ತಾತ್ಸಾರವಿದೆ. ಅದರಿಂದ ನಾವು ಹೊರಗೆ ಬಂದು ನಮ್ಮ ಹೋರಿಹಬ್ಬವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯಬೇಕು. ಇಂತಹ ಪ್ರಯತ್ನಗಳಿಂದ ಅದು ಸಾಧ್ಯವಾಗಲಿದೆ ಎಂದರು.
ಪತ್ರಕರ್ತರ ಜಿಲ್ಲಾ ಸಂಘದ ಉಪಾಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ ಮಾತನಾಡಿ, ವೀರೇಶ್ ಮತ್ತು ನಂದನ್ ಸಂಪಾದಕತ್ವದಲ್ಲಿ ಸುವ್ವಿ ಪ್ರಕಾಶನ ಹೊರತಂದಿರುವ ಹೋರಿಹಬ್ಬ ಪುಸ್ತಕ ಒಂದು ಸಂಗ್ರಹಯೋಗ್ಯ ಕೃತಿ. ನಮಗೆ ಹಬ್ಬದ ಬಗ್ಗೆ ಗೊತ್ತಿರದ ಸಾಕಷ್ಟು ವಿಚಾರಗಳನ್ನು ಈ ಕೃತಿಯಲ್ಲಿ ತಿಳಿಸಲಾಗಿದೆ. ಈ ಪುಸ್ತಕವನ್ನು ಓದಿದರೆ ಹೋರಿಹಬ್ಬವೇ ಕಣ್ಮುಂದೆ ಬಂದಂತಹ ಅನುಭವವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕೃಷಿಕ ಸಮಾಜದ ಅಧ್ಯಕ್ಷ ಮಹೇಶ್ ಹುಲ್ಮಾರ್, ಡಿ.ಎಲ್.ಬಸವರಾಜ್, ಹೋರಿ ಮಾಲೀಕ ದೆವ್ವ ಮರಿಯಪ್ಪ, ರಂಗಕರ್ಮಿ ಟಿ.ಆರ್.ಗುರುಪ್ರಸಾದ್, ಸುವ್ವಿ ಪ್ರಕಾಶನದ ಸುನಿಲ್ಕುಮಾರ್, ಲೇಖಕರಾದ ವೀರೇಶ್, ನಂದನ್ ಇತರರಿದ್ದರು.