

ಆನ್ಲೈನ್ ಗೇಮಿಂಗ್ ಹಾಗೂ ಬೆಟ್ಟಿಂಗ್ ಆಪ್ಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಇದರಿಂದ ಹಣ, ನೆಮ್ಮದಿ ಕಳೆದುಕೊಂಡು ಬದುಕನ್ನು ನರಕವಾಗಿಸಿಕೊಂಡವರ ನಿದರ್ಶನಗಳು ಬೆಚ್ಚಿಬೀಳಿಸುತ್ತವೆ. ಈ ಹಾವಳಿ ಯಾವುದೋ ಒಂದೆರಡು ರಾಜ್ಯಗಳಿಗೆ ಸೀಮಿತವಾಗಿ ಉಳಿದಿಲ್ಲ. ದೇಶಾದ್ಯಂತ ಬೆಟ್ಟಿಂಗ್, ಗ್ಯಾಂಬ್ಲಿಂಗ್, ಕ್ಯಾಸಿನೋ ಆಪ್ಗಳ ಹಾವಳಿ ಮೇರೆ ಮೀರಿದೆ. ಅದರಲ್ಲೂ, ಶಾಲಾ-ಕಾಲೇಜುಗಳಿಗೆ ಹೋಗುವ ಲಕ್ಷಾಂತರ ವಿದ್ಯಾರ್ಥಿಗಳು, ಯುವಕರು ಮಾತ್ರವಲ್ಲ ವಯಸ್ಕರು ಕೂಡ ದೊಡ್ಡಸಂಖ್ಯೆಯಲ್ಲಿ ಈ ಆಪ್ಗಳಿಗೆ ದಾಸರಾಗಿದ್ದಾರೆ.
ದಿಢೀರ್ ಶ್ರೀಮಂತರಾಗಬಹುದು ಎಂಬ ಹುಚ್ಚುಭ್ರಮೆಯಲ್ಲಿ ಲಕ್ಷಾಂತರ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಕೆಲವರು ಆಪ್ಗಳಿಗೆ ಹಣ ಹೊಂದಿಸಲು ಸಮಾಜಘಾತಕ ಕೆಲಸಗಳಲ್ಲಿ ತೊಡಗಿಕೊಂಡಿದ್ದರೆ. ಇನ್ನು ಕೆಲವರು ಸಾಲದ ಬಲೆಯಲ್ಲಿ ಸಿಲುಕಿದ್ದಾರೆ. ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡವರ ಪೈಕಿ ಎಷ್ಟೋ ಜನ ಆತ್ಮಹತ್ಯೆಗೆ ಶರಣಾದ ಘಟನೆಗಳು ಕಣ್ಮುಂದೆ ಇವೆ. ದುಡಿದು ಗಳಿಸಿದ್ದ ಹಣವನ್ನು, ಉಳಿತಾಯದ ಹಣವನ್ನು ಇಂಥ ಆಪ್ಗಳಿಗೆ ಹಾಕಿ ಬೀದಿಪಾಲಾಗಿರುವವರ ಬದುಕನ್ನು ನೋಡಿಯಾದರೂ ಇತರರು ಪಾಠ ಕಲಿಯಬೇಕು.
ಸಿರಿವಂತರಾಗಲು ದುಡಿಮೆ ಮತ್ತು ಕಠಿಣ ಪರಿಶ್ರಮದ ಹೊರತಾಗಿ ಬೇರೆ ದಾರಿಗಳಿಲ್ಲ. ಅಡ್ಡಮಾರ್ಗಗಳನ್ನು ಹುಡುಕಿಕೊಂಡರೆ ಹಣ, ನೆಮ್ಮದಿ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂಬುದಕ್ಕೆ ಈ ಹೊಸಬಗೆಯ ಜೂಜು ನಿದರ್ಶನ. ಆರಂಭದಲ್ಲಿ ಕುತೂಹಲಕ್ಕೆಂದು ಇಂಥ ಆಟಗಳನ್ನು ಶುರು ಮಾಡಿಕೊಂಡವರು ಕ್ರಮೇಣ ಅದನ್ನೇ ಗೀಳಾಗಿ ಮಾಡಿಕೊಳ್ಳುತ್ತಾರೆ. ಇನ್ನೂ ದುರಂತದ ಸಂಗತಿಯೆಂದರೆ ಸಮಾಜದಲ್ಲಿ ಪ್ರತಿಷ್ಠಿತರು ಎನಿಸಿಕೊಂಡ ಸೆಲಿಬ್ರಿಟಿಗಳು ಇಂಥ ಸಮಾಜಕಂಟಕ ಆಪ್ಗಳ ಪರವಾಗಿ ಪ್ರಚಾರ ಮಾಡುವುದು! ಇದಕ್ಕಾಗಿ ಅವರು ಕಂಪನಿಗಳಿಂದ ಭಾರಿ ಮೊತ್ತವನ್ನು ಪಡೆದು ಸ್ವಂತ ಲಾಭ ಮಾಡಿಕೊಳ್ಳುತ್ತಾರೆ. ಆದರೆ, ಇವರ ಜಾಹೀರಾತುಗಳನ್ನು ನಂಬಿ ಇಂಥ ಮೋಸದಾಟಗಳಿಗೆ ಹಣ ಹಾಕಿದವರ ಬಾಳು ಮತ್ತೆ ಹಳಿಗೆ ಬರದಷ್ಟು ಹಾಳಾಗುತ್ತಿದೆ.
ಹಾಗಾಗಿಯೇ, ಇತ್ತೀಚೆಗೆ ಪೊಲೀಸರು ಎಚ್ಚೆತ್ತುಕೊಂಡು ಇಂಥ ಕೆಲ ಸೆಲೆಬ್ರಿಟಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಆದರೆ, ಇದು ಬರೀ ಕಣ್ಣೋರೆಸುವ ತಂತ್ರವಾಗಬಾರದು. ಮತ್ತು ಸಮಾಜದಲ್ಲಿ ಈ ಹಾವಳಿ ಸೃಷ್ಟಿಸುತ್ತಿರುವ ಹಾನಿಯನ್ನು ಮನಗಂಡು ಸೆಲೆಬ್ರಿಟಿಗಳು ಬೆಟ್ಟಿಂಗ್ ಆಪ್, ವೆಬ್ಸೈಟ್ಗಳ ಪರ ಪ್ರಚಾರ ಮಾಡಬಾರದು. ನಿಯಮ ಉಲ್ಲಂಘನೆಯ ಆರೋಪದಲ್ಲಿ 2022ರಿಂದ 2025ರ ಫೆಬ್ರವರಿವರೆಗೆ 1410 ಆನ್ಲೈನ್ ಬೆಟ್ಟಿಂಗ್ ಹಾಗೂ ಗೇಮಿಂಗ್ ಆಪ್/ವೆಬ್ಸೈಟ್ಗಳನ್ನು ನಿರ್ಬಂಧಿಸಲು ಡಿಜಿಜಿಐ ಆದೇಶ ಹೊರಡಿಸಿದೆ. ವಿದೇಶಿ ಆಪ್ಗಳ ಮೇಲೂ ಡಿಜಿಜಿಐ ನಿಗಾ ವಹಿಸಿದ್ದು, ಕಾನೂನುಬಾಹಿರವಾಗಿ ನಡೆಯುತ್ತಿದ್ದ 357 ವೆಬ್ಸೈಟ್ ಹಾಗೂ ಮೊಬೈಲ್ ಅಪ್ಲಿಕೇಶನ್ಗಳನ್ನು ಐಟಿ ಕಾಯ್ದೆಯಡಿ ನಿರ್ಬಂಧಿಸಲಾಗಿದೆ.
ಪ್ರತ್ಯೇಕ ಪ್ರಕರಣಗಳಲ್ಲಿ 2400 ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿಕೊಂಡು 126 ಕೋಟಿ ರೂ.ಗಳನ್ನು ಜಪ್ತಿ ಮಾಡಲಾಗಿದೆ. ಇಂಥ ಕಾರ್ಯಾಚರಣೆಗಳು ಮೇಲಿಂದ ಮೇಲೆ ನಡೆಯಬೇಕು. ಬೆಟ್ಟಿಂಗ್ ಆಪ್ಗಳು ಅನಾರೋಗ್ಯಕರ ಸ್ಪರ್ಧೆ, ಒತ್ತಡವನ್ನು ಸೃಷ್ಟಿಸುತ್ತಿದ್ದು, ಸಮಾಜದ ಸ್ವಾಸ್ಥ್ಯಕ್ಕೆ ಕಂಟಕವಾಗಿರುವ ಈ ಹೊಸಬಗೆಯ ಜೂಜನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಷೇಧಿಸಬೇಕು.