

Donald Trump : ರಷ್ಯಾ ವಿರುದ್ಧ "ಎರಡನೇ ಹಂತದ" ನಿರ್ಬಂಧಗಳನ್ನು ವಿಧಿಸಲು ಸಿದ್ಧರಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಹೇಳಿದ್ದಾರೆ. ಟ್ರಂಪ್ ಅವರ ಈ ಹೇಳಿಕೆ ರಷ್ಯಾದಿಂದ ತೈಲವನ್ನು ಖರೀದಿಸುವುದನ್ನು ಮುಂದುವರಿಸಿರುವ ಭಾರತದಂತಹ ದೇಶಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಇತ್ತೀಚಿನ ದಿನಗಳಲ್ಲಿ ರಷ್ಯಾ, ಯೂಕ್ರೇನ್ ಮೇಲೆ ತನ್ನ ಅತಿದೊಡ್ಡ ವೈಮಾನಿಕ ದಾಳಿಯನ್ನು ನಡೆಸಿದೆ. ಯೂಕ್ರೇನ್ ರಾಜಧಾನಿ ಕೈವ್ನಲ್ಲಿರುವ ಪ್ರಮುಖ ಸರ್ಕಾರಿ ಸಂಕೀರ್ಣದ ಮೇಲೆ ದಾಳಿ ಮಾಡಿದ ಬೆನ್ನಲ್ಲೇ ಟ್ರಂಪ್ ಅವರಿಂದ ಈ ಹೇಳಿಕೆ ಬಂದಿದೆ.
ರಷ್ಯಾ ಹಾಗೂ ಅದರಿಂದ ತೈಲ ಖರೀದಿ ಮಾಡುತ್ತಿರುವ ದೇಶಗಳ ಮೇಲೆ ಹೊಸ ಸುತ್ತಿನ ನಿರ್ಬಂಧಗಳನ್ನು ವಿಧಿಸಲು ನೀವು ಸಿದ್ಧರಿದ್ದೀರಾ ಎಂದು ಶ್ವೇತಭವನದಲ್ಲಿ ಸುದ್ದಿಗಾರರು ಪ್ರಶ್ನೆ ಮಾಡಿದರು. ಈ ಪ್ರಶ್ನೆಗೆ ಹೆಚ್ಚಿನ ವಿವರಗಳನ್ನು ನೀಡದೆ "ಹೌದು, ನಾನು ಸಿದ್ಧ" ಎಂದು ಟ್ರಂಪ್ ಸಂಕ್ಷಿಪ್ತವಾಗಿ ಉತ್ತರ ನೀಡಿದರು.
ಅಂದಹಾಗೆ ರಷ್ಯಾ ಮತ್ತು ಯೂಕ್ರೇನ್ ನಡುವಿನ ಸಂಘರ್ಷ ಹಾಗೇ ಮುಂದುವರಿದಿದೆ. ಹೇಗಾದರೂ ಮಾಡಿ ಯುದ್ಧವನ್ನು ನಿಲ್ಲಿಸಬೇಕೆಂದು ಡೊನಾಲ್ಡ್ ಟ್ರಂಪ್ ಪ್ರಯತ್ನಿಸಿದರು. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆ ಕದನ ವಿರಾಮ ಪ್ರಯತ್ನಗಳನ್ನು ಮಾಡಿದರು. ಆದರೆ, ಅವರ ಪ್ರಯತ್ನ ಫಲ ನೀಡಲಿಲ್ಲ. ಇದರಿಂದ ಹತಾಶೆಗೊಂಡಿರುವ ಟ್ರಂಪ್ ಎರಡನೇ ನಿರ್ಬಂಧಗಳ ಹೇಳಿಕೆಯನ್ನು ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಅಮೆರಿಕ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು ಎನ್ಬಿಸಿ ನ್ಯೂಸ್ ಜತೆ ಮಾತನಾಡಿ, ವಾಷಿಂಗ್ಟನ್ ಮತ್ತು ಯುರೋಪಿಯನ್ ಒಕ್ಕೂಟವು ರಷ್ಯಾದ ತೈಲವನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಮೇಲೆ "ದ್ವಿತೀಯ ಸುಂಕ"ಗಳನ್ನು ವಿಧಿಸಬಹುದು ಎಂದು ಹೇಳಿದರು. ಈ ನಿರ್ಬಂಧಗಳಿಂದ ರಷ್ಯಾದ ಆರ್ಥಿಕತೆ ಕುಸಿಯಲಿದ್ದು, ಸಂಧಾನಕ್ಕಾಗಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅಂಗಲಾಚಬಹುದು ಎಂದರು.
ಇನ್ನು ಕಳೆದ ತಿಂಗಳಷ್ಟೇ, ಯುಎಸ್ ಸರ್ಕಾರ, ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ವಸ್ತುಗಳ ಮೇಲೆ ಶೇ.25 ರಷ್ಟು ದಂಡದ ಸುಂಕವನ್ನು ವಿಧಿಸಿ, ಒಟ್ಟಾರೆ ಆಮದು ಸುಂಕವನ್ನು ಶೇ.50 ಕ್ಕೆ ಏರಿಸಿದೆ. ರಷ್ಯಾದ ಯುದ್ಧ ಯಂತ್ರಕ್ಕೆ ಭಾರತ ಇಂಧನವನ್ನು ತುಂಬುತ್ತಿದೆ ಎಂದು ಪದೇ ಪದೆ ಅಮೆರಿಕ ಆರೋಪಿಸುತ್ತಿದ್ದು, ತಮ್ಮ ಸುಂಕ ಸಮರವನ್ನು ಸಮರ್ಥಿಸಿಕೊಳ್ಳುತ್ತಿದೆ. ಆದರೆ, ಭಾರತ ರಾಷ್ಟ್ರೀಯ ಇಂಧನ ಭದ್ರತೆಯ ಆಧಾರದ ಮೇಲೆ ರಷ್ಯಾದಿಂದ ಕಚ್ಚಾ ತೈಲ ಖರೀದಿ ಮಾಡುತ್ತಿರುವುದಾಗಿ ಸಮರ್ಥಿಸಿಕೊಳ್ಳುತ್ತಾ ಬಂದಿದೆ. ಅಲ್ಲದೆ, ಅಮೆರಿಕದ ಕ್ರಮಗಳು ಅನ್ಯಾಯವೆಂದು ಕರೆದಿದೆ. (ಏಜೆನ್ಸೀಸ್)