

Donald Trump : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದಂತೆಯೇ ಇಡೀ ಜಗತ್ತಿಗೆ ಶಾಕ್ ನೀಡಿದ್ದಾರೆ. ವಿವಿಧ ದೇಶಗಳ ಮೇಲೆ ತೆರಿಗೆ ಬಾಂಬ್ ಹಾಕಿರುವ ಟ್ರಂಪ್, ವಿದೇಶಿ ಉತ್ಪನ್ನಗಳ ಮೇಲೆ ಭಾರೀ ಸುಂಕಗಳನ್ನು ವಿಧಿಸಿದ್ದಾರೆ. ಭಾರತೀಯ ಉತ್ಪನ್ನಗಳ ಮೇಲೆ ಶೇ. 26 ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ. ಎಲ್ಲ ದೇಶಗಳಿಂದ ಆಮದು ಮಾಡಿಕೊಳ್ಳುವ ಆಟೋಮೊಬೈಲ್‌ಗಳ ಮೇಲೆ ಶೇ. 25 ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ. ಇಂದಿನಿಂದಲೇ ಈ ಪ್ರತೀಕಾರದ ಸುಂಕಗಳು ಜಾರಿಗೆ ಬರಲಿವೆ. ಅಂದಹಾಗೆ ಇದನ್ನು ಪಾರಸ್ಪರಿಕ ತೆರಿಗೆ (ರೆಸಿಪ್ರೋಕಲ್ ಟ್ಯಾಕ್ಸ್) ಎಂದು ಟ್ರಂಪ್ ಕರೆದಿದ್ದಾರೆ.
ಏಪ್ರಿಲ್ 2 ಅನ್ನು ಅಮೆರಿಕದ 'ವಿಮೋಚನಾ ದಿನ' ಎಂದು ಘೋಷಿಸಿದ ಟ್ರಂಪ್, ಬುಧವಾರ ಶ್ವೇತಭವನದ ರೋಸ್ ಗಾರ್ಡನ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಮೆರಿಕ ಹಲವು ವರ್ಷಗಳಿಂದ ಈ ದಿನಕ್ಕಾಗಿ ಕಾಯುತ್ತಿದೆ. ಅಮೆರಿಕದ ವ್ಯವಹಾರಗಳು ಇಂದು ಮರುಜನ್ಮ ಪಡೆದಿವೆ. ಅಮೆರಿಕ ಮತ್ತೆ ಸಮೃದ್ಧ ದೇಶವಾದ ದಿನವಾಗಿ ಇದನ್ನು ನೆನಪಿಸಿಕೊಳ್ಳಲಾಗುವುದು. ಅಮೆರಿಕವನ್ನು ಹಲವು ವರ್ಷಗಳಿಂದ ಸುಂಕದ ಹೆಸರಿನಲ್ಲಿ ವಂಚಕರು ಶೋಷಿಸಿದ್ದಾರೆ. ಅದು ಮತ್ತೆ ಸಂಭವಿಸುವುದಿಲ್ಲ. ನಮ್ಮ ಮೇಲೆ ಸುಂಕ ವಿಧಿಸುವ ದೇಶಗಳ ಮೇಲೆ ನಾವು ಖಂಡಿತವಾಗಿಯೂ ಸುಂಕ ವಿಧಿಸುತ್ತೇವೆ. ಅಮೆರಿಕಕ್ಕೆ ಇಂದು ನಿಜವಾದ ಆರ್ಥಿಕ ಸ್ವಾತಂತ್ರ್ಯವಿದೆ ಎಂದರು.
ಈಗ ಅಮೆರಿಕ ಇನ್ನಷ್ಟು ಬೆಳೆಯಲು ಅವಕಾಶವಿದೆ. ಸುಂಕಗಳ ಘೋಷಣೆಯೊಂದಿಗೆ, ಉದ್ಯೋಗಗಳು ದೊಡ್ಡ ಪ್ರಮಾಣದಲ್ಲಿ ಅಮೆರಿಕಕ್ಕೆ ಮರಳುತ್ತವೆ. ಕಂಪನಿಗಳು ಹಿಂತಿರುಗುತ್ತವೆ. ನಾವು ವಿದೇಶಿ ಮಾರುಕಟ್ಟೆಗಳಿಗೆ ಬಾಗಿಲು ತೆರೆಯುತ್ತೇವೆ. ಅಮೆರಿಕ ಹೆಚ್ಚು ಸ್ಪರ್ಧಾತ್ಮಕವಾಗುತ್ತದೆ ಮತ್ತು ಸರಕುಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುತ್ತವೆ. ಇದು ಅಮೆರಿಕದ ಸುವರ್ಣಯುಗವಾಗಿರುತ್ತದೆ. ಅಮೆರಿಕ ದಶಕಗಳಿಂದ ವ್ಯಾಪಾರ ಅಡೆತಡೆಗಳನ್ನು ತೆಗೆದುಹಾಕುತ್ತಿದೆ. ಆದರೆ ಅನೇಕ ದೇಶಗಳು ಅಮೆರಿಕ ಉತ್ಪನ್ನಗಳ ಮೇಲೆ ಭಾರೀ ಸುಂಕಗಳನ್ನು ವಿಧಿಸುತ್ತಿವೆ. ಅನೇಕ ದೇಶಗಳು ಅನ್ಯಾಯದ ನಿಯಮಗಳನ್ನು ಅಳವಡಿಸಿಕೊಂಡಿವೆ ಎಂದರು.
ಅಮೆರಿಕ ಆಮದು ಮಾಡಿಕೊಳ್ಳುವ ಮೋಟಾರ್ ಸೈಕಲ್‌ಗಳ ಮೇಲೆ ಕೇವಲ ಶೇ. 2.4 ರಷ್ಟು ತೆರಿಗೆ ವಿಧಿಸುತ್ತದೆ. ಥೈಲ್ಯಾಂಡ್ ಮತ್ತು ಇತರ ದೇಶಗಳು ಅಮೆರಿಕದಿಂದ ಆಮದು ಮಾಡಿಕೊಳ್ಳುವ ದ್ವಿಚಕ್ರ ವಾಹನಗಳ ಮೇಲೆ ಶೇ. 60, ಭಾರತ ಶೇ. 70 ಮತ್ತು ವಿಯೆಟ್ನಾಂ ಶೇ. 75 ರಷ್ಟು ತೆರಿಗೆ ವಿಧಿಸುತ್ತವೆ. ವ್ಯಾಪಾರದ ವಿಷಯಕ್ಕೆ ಬಂದಾಗ, ಕೆಲವೊಮ್ಮೆ ಸ್ನೇಹಿತ ಶತ್ರುವಿಗಿಂತ ಹೆಚ್ಚು ಅಪಾಯಕಾರಿ. ಅದಕ್ಕಾಗಿಯೇ ನಾವಿಂದು ಎಲ್ಲಾ ವಿದೇಶಿ ನಿರ್ಮಿತ ಆಟೋಮೊಬೈಲ್‌ಗಳ ಮೇಲೆ ಶೇ. 25 ರಷ್ಟು ಸುಂಕವನ್ನು ವಿಧಿಸುತ್ತೇವೆ. ಅಮೆರಿಕದಲ್ಲಿ ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳ ಮೇಲೆ ನಾವು ಯಾವುದೇ ತೆರಿಗೆ ವಿಧಿಸುವುದಿಲ್ಲ ಎಂದರು.
* ಭಾರತ: ಶೇ. 26
* ಯುಕೆ: ಶೇ. 10
* ಆಸ್ಟ್ರೇಲಿಯಾ: ಶೇ. 10
* ಕೊಲಂಬಿಯಾ: ಶೇ. 10
* ಚಿಲಿ: ಶೇ. 10
* ಬ್ರೆಜಿಲ್: ಶೇ. 10
* ಸಿಂಗಾಪುರ: ಶೇ. 10
* ಟರ್ಕಿ: ಶೇ. 10
* ಇಸ್ರೇಲ್: ಶೇ. 17
* ಫಿಲಿಪೈನ್ಸ್: ಶೇ. 17
* ಯುರೋಪಿಯನ್ ಯೂನಿಯನ್: ಶೇ. 20
* ಮಲೇಶಿಯಾ: ಶೇ. 24
* ಜಪಾನ್: ಶೇ. 24
* ದಕ್ಷಿಣ ಕೊರಿಯಾ: ಶೇ. 25
* ಪಾಕಿಸ್ತಾನ: ಶೇ. 29
* ದಕ್ಷಿಣ ಆಫ್ರಿಕಾ: ಶೇ. 30
* ಸ್ವಿಟ್ಜರ್ಲೆಂಡ್: ಶೇ. 31
* ಇಂಡೋನೇಷ್ಯಾ: ಶೇ. 32
* ತೈವಾನ್: ಶೇ. 32
* ಚೀನಾ: ಶೇ. 34
* ಥೈಲ್ಯಾಂಡ್: ಶೇ. 36
* ಬಾಂಗ್ಲಾದೇಶ: ಶೇ. 37
* ಶ್ರೀಲಂಕಾ: ಶೇ. 44
* ಕಾಂಬೋಡಿಯಾ: ಶೇ. 49
ಪ್ರತೀಕಾರ ಅಥವಾ ಪಾರಸ್ಪರಿಕ ತೆರಿಗೆಯಿಂದ ಅಮೆರಿಕದಲ್ಲಿ ಜೀವನಾವಶ್ಯಕ ವಸ್ತುಗಳ ಬೆಲೆ ಹೆಚ್ಚಲಿದ್ದು, ಹಣದುಬ್ಬರವೂ ಹೆಚ್ಚಲಿದೆ. ಹಲವು ಉತ್ಪನ್ನಗಳಿಗಾಗಿ ಅಮೆರಿಕ ಕೂಡ ಇತರ ದೇಶಗಳ ಮೇಲೆ ಅವಲಂಬಿತವಾಗಿದೆ. ಹಾಗಾಗಿ, ಆ ಉತ್ಪನ್ನಗಳು ದುಬಾರಿ ಆಗುವುದರಿಂದ, ಹಲವು ಪ್ರತಿಕೂಲ ಪರಿಣಾಮ ಬೀರಲಿದೆ. ಅಮೆರಿಕದಲ್ಲಿ ಉಪಯೋಗಿಸುವ 63% ತರಕಾರಿ ಹಾಗೂ 47% ಹಣ್ಣುಗಳು ಮೆಕ್ಸಿಕೋದಿಂದ ಬರುತ್ತವೆ. ಆದರೆ, ಮೆಕ್ಸಿಕೋದೊಂದಿಗೆ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿದ್ದು, ಮುಂದಿನ ದಿನಗಳು ಹೇಗೆ ಎಂಬ ಅನಿಶ್ಚಿತತೆ ಕಾಡುತ್ತಿದೆ. ಅಮೆರಿಕದಲ್ಲಿ ಈಗಾಗಲೇ ಉದ್ಯೋಗಸೃಷ್ಟಿ ಪ್ರಮಾಣ ತೃಪ್ತಿದಾಯಕವಾಗಿಲ್ಲ. ಹೀಗಿರುವಾಗ, ಆರ್ಥಿಕತೆ ಹಳಿ ತಪ್ಪಿದರೆ ಉದ್ಯೋಗ ಸಮಸ್ಯೆ ಮತ್ತಷ್ಟು ತೀವ್ರವಾಗಿ, ಸರ್ಕಾರ ಯುವಕರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ. ಟ್ರಂಪ್ ಕ್ರಮದಿಂದ ಅಮೆರಿಕದಲ್ಲಿ ಬೆಲೆಯೇರಿಕೆ ಹೆಚ್ಚಲಿದೆ. ಜನರು ದಿನಸಿ, ವಾಹನ ಸೇರಿ ದಂತೆ ಜೀವನಾವಶ್ಯಕ ವಸ್ತುಗಳ ಖರೀದಿಗೆ ಹೆಚ್ಚಿನ ಡಾಲರ್ ನೀಡಬೇಕಾಗುತ್ತದೆ. ಕಡಿಮೆ ಆದಾಯ ಹೊಂದಿರುವ ಕುಟುಂಬಗಳ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಲಿದೆ. ಅಲ್ಲದೆ, ಕಾಪೋರೇಟ್ ಆದಾಯ ದಲ್ಲೂ ಭಾರಿ ಇಳಿಕೆ ಕಾಣಲಿದೆ.
ಟ್ರಂಪ್ ಅವರ ಪಾರಸ್ಪರಿಕ ಸುಂಕ ಘೋಷಣೆಯು ಕೆಲವು ಭಾರತೀಯ ರಫ್ತುಗಳು ಹೆಚ್ಚಿನ ಆಮದು ಸುಂಕವನ್ನು ಎದುರಿಸಬೇಕಾಗುತ್ತದೆ. ಇದರಿಂದ ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಬಹುದು. ಅದರಲ್ಲೂ ರಫ್ತು ಆಧಾರಿತ ವಲಯಗಳ ಮೇಲಿನ ಪರಿಣಾಮದ ಬಗ್ಗೆ ವ್ಯಾಪಾರಿಗಳು ಚಿಂತಿತರಾಗಿದ್ದಾರೆ. ಆದಾಗ್ಯೂ, ಎಸ್‌ಬಿಐ ಸಂಶೋಧನೆಯ ವರದಿಯ ಪ್ರಕಾರ ಭಾರತವು ಈ ಹೊಸ ಸುಂಕ ನೀತಿಯಿಂದ ಹೆಚ್ಚಿನ ಹೊಡೆತವನ್ನು ಅನುಭವಿಸುವುದಿಲ್ಲ ಎಂದು ಹೇಳಿದೆ. (ಏಜೆನ್ಸೀಸ್)