ಮೋದಿ ನನ್ನ ಸ್ನೇಹಿತ ಎನ್ನುತ್ತಲೇ ಭಾರತಕ್ಕೆ ಶೇ. 26 ತೆರಿಗೆ ರಿಯಾಯಿತಿ ಘೋಷಿಸಿದ ಟ್ರಂಪ್​! Donald Trump

Donald Trump
Published on

Donald Trump : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ (ಏಪ್ರಿಲ್​ 02) ಭಾರತದ ಮೇಲೆ 26 ಪ್ರತಿಶತ ‘ಪಾರಸ್ಪರಿಕ ತೆರಿಗೆ’ (ರೆಸಿಪ್ರೋಕಲ್ ಟ್ಯಾಕ್ಸ್) ರಿಯಾಯಿತಿಯನ್ನು ಘೋಷಿಸಿದ್ದಾರೆ. ನಾವು ವಿಧಿಸಿರುವ ಸುಂಕಗಳು ಸಂಪೂರ್ಣವಾಗಿ ಪಾರಸ್ಪರಿಕ ಸಂಬಂಧ ಹೊಂದಿಲ್ಲವಾದರೂ ಭಾಗಶಃ ಹೊಂದಿದೆ ಎಂದರು. ಇದರಿಂದ ಭಾರತೀಯ ಸಾಮಾಗ್ರಿಗಳಿಗೆ ಅಮೆರಿಕದಲ್ಲಿ ಶೇ. 26 ರಷ್ಟು ರಿಯಾಯಿತಿ ದೊರೆಯಲಿದೆ.

ಇದು ಅಮೆರಿಕ ವಿಮೋಚನಾ ದಿನ. ಇದೊಂದು ಬಹುನಿರೀಕ್ಷಿತ ಕ್ಷಣ. 2025, ಏಪ್ರಿಲ್ 2 ಅಮೆರಿಕದ ಉದ್ಯಮವು ಮರುಜನ್ಮ ಪಡೆದ ದಿನವಾಗಿದೆ. ಅಮೆರಿಕದ ಹಣೆಬರಹವನ್ನು ಮರಳಿ ಪಡೆದ ದಿನ ಮತ್ತು ನಾವು ಅಮೆರಿಕವನ್ನು ಮತ್ತೆ ಶ್ರೀಮಂತಗೊಳಿಸಲು ಪ್ರಾರಂಭಿಸಿದ ದಿನವಾಗಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ನಾವು ಅಮೆರಿಕವನ್ನು ಉತ್ತಮ ಮತ್ತು ಶ್ರೀಮಂತಗೊಳಿಸಲಿದ್ದೇವೆ ಎಂದು ಟ್ರಂಪ್ ಬುಧವಾರ ಶ್ವೇತಭವನದ ರೋಸ್ ಗಾರ್ಡನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಘೋಷಿಸಿದರು. ಅದೇ ಸಮಯದಲ್ಲಿ ನಿರೀಕ್ಷಿತ ‘ಪಾರಸ್ಪರಿಕ ತೆರಿಗೆ’ (ರೆಸಿಪ್ರೋಕಲ್ ಟ್ಯಾಕ್ಸ್)ಯನ್ನು ಘೋಷಿಸಿದರು.

ತೆರಿಗೆ ಘೋಷಣೆಯ ಸಮಯದಲ್ಲಿ, ಭಾರತ, ಚೀನಾ, ಯುಕೆ ಮತ್ತು ಯುರೋಪಿಯನ್ ಒಕ್ಕೂಟ ಸೇರಿದಂತೆ ವಿವಿಧ ದೇಶಗಳ ಮೇಲೆ ವಿಧಿಸಿರುವ ಸುಂಕಗಳನ್ನು ಪ್ರದರ್ಶಿಸುವ ಚಾರ್ಟ್ ಅನ್ನು ಪ್ರಸ್ತುತಪಡಿಸಿದರು. ಜೊತೆಗೆ ಈ ರಾಷ್ಟ್ರಗಳು ಎದುರಿಸಬೇಕಾದ ಹೊಸ ಪಾರಸ್ಪರಿಕ ಸುಂಕಗಳನ್ನು ಸಹ ಪ್ರಸ್ತುತಪಡಿಸಿದರು. ಈ ಚಾರ್ಟಿನಲ್ಲಿ ಅಮೆರಿಕದ ಮೇಲೆ ಭಾರತ ವಿಧಿಸುತ್ತಿರುವ ಶೇ. 52 ರಷ್ಟು ಸುಂಕಗಳನ್ನು ಬಹಿರಂಗಪಡಿಸಿದೆ. ಇದರ ವಿರುದ್ಧ ಅಮೆರಿಕ ಈಗ ಶೇ. 26 ರಷ್ಟು "ರಿಯಾಯಿತಿ ಪಾರಸ್ಪರಿಕ ಸುಂಕ" ವನ್ನು ವಿಧಿಸಲಿದೆ.

ಮೋದಿ ನನ್ನ ಸ್ನೇಹಿತ

ಭಾರತ ತುಂಬಾ, ತುಂಬಾ ಕಠಿಣ. ಅಮೆರಿಕ ಭೇಟಿ ಮುಗಿಸಿ ಪ್ರಧಾನಿ ಮೋದಿ ಇತ್ತೀಚೆಗಷ್ಟೇ ಹೋದರು. ಈ ವೇಳೆ ನಾನು ಅವರಿಗೆ ಹೇಳಿದೆ, ನೀವು ನನ್ನ ಸ್ನೇಹಿತ. ಆದರೆ, ನೀವು ನಮ್ಮೊಂದಿಗೆ ಸರಿಯಾಗಿ ವರ್ತಿಸುತ್ತಿಲ್ಲ. ನಮ್ಮ ಮೇಲೆ ಅವರು 52% ಶುಲ್ಕ ವಿಧಿಸುತ್ತಾರೆ. ನೀವಿಲ್ಲಿ ಒಂದನ್ನು ಅರ್ಥಮಾಡಿಕೊಳ್ಳಬೇಕು. ನಾವು ವರ್ಷಗಳಿಂದ ಮತ್ತು ದಶಕಗಳಿಂದ ಅವರಿಗೆ ಬಹುತೇಕ ಶುಲ್ಕವನ್ನೇ ವಿಧಿಸಿಲ್ಲ. ಕೇವಲ ಏಳು ವರ್ಷಗಳ ಹಿಂದೆ ನಾನು ಅಧಿಕಾರಕ್ಕೆ ಬಂದಾಗ ನಾವು ಚೀನಾದೊಂದಿಗೆ ತೆರಿಗೆಯನ್ನು ಪ್ರಾರಂಭಿಸಿದೆವು ಎಂದು ಟ್ರಂಪ್​ ಹೇಳಿದರು.

ಇದೇ ಸಂದರ್ಭದಲ್ಲಿ ಮೋಟಾರ್ ಸೈಕಲ್ ಮೇಲಿನ ಸುಂಕಗಳಲ್ಲಿನ ಅಸಮಾನತೆಯನ್ನು ಎತ್ತಿ ತೋರಿಸಿದ ಟ್ರಂಪ್​, ಯುನೈಟೆಡ್ ಸ್ಟೇಟ್ಸ್ ಇತರ ದೇಶಗಳಿಂದ ಮೋಟಾರ್ ಸೈಕಲ್‌ಗಳ ಮೇಲೆ ಕೇವಲ ಶೇ. 2.4 ರಷ್ಟು ಸುಂಕವನ್ನು ವಿಧಿಸುತ್ತದೆ. ಅದೇ ಸಮಯದಲ್ಲಿ, ಥೈಲ್ಯಾಂಡ್ ಮತ್ತು ಇತರರು ಶೇ. 60 ರಂತೆ ಹೆಚ್ಚಿನ ದರಗಳನ್ನು ವಿಧಿಸುತ್ತಿದೆ. ಭಾರತ ಶೇ. 70, ವಿಯೆಟ್ನಾಂ ಶೇ. 75 ಮತ್ತು ಇತರರು ಇನ್ನೂ ಹೆಚ್ಚಿನ ದರಗಳನ್ನು ವಿಧಿಸುತ್ತಾರೆ ಎಂದು ಹೇಳಿದರು.

ದಶಕಗಳಿಂದ ಇಂದಿನವರೆಗೂ ಅಮೆರಿಕ ಶೇ. 2.5 ರಷ್ಟು ಸುಂಕ ವಿಧಿಸುತ್ತಿದೆ. ವಿದೇಶಿ ನಿರ್ಮಿತ ವಾಹನಗಳ ಮೇಲೆ ಶೇ. 2.5 ರಷ್ಟು ಸುಂಕ ವಿಧಿಸುವುದೆಂದರೆ ಯೋಚಿಸಿ ನೋಡಿ. ಯುರೋಪಿಯನ್ ಒಕ್ಕೂಟವು ಶೇ. 10 ಕ್ಕಿಂತ ಹೆಚ್ಚು ಸುಂಕ ವಿಧಿಸುತ್ತದೆ ಮತ್ತು ಅವರು ಶೇ. 20 ರಷ್ಟು ವ್ಯಾಟ್ ವಿಧಿಸುತ್ತಾರೆ ಎಂದು ಟ್ರಂಪ್​ ಹೇಳಿದರು. ಇನ್ನು ಟ್ರಂಪ್​ ಅವರು ಘೋಷಣೆ ಮಾಡಿರುವ ಹೊಸ ತೆರಿಗೆಗಳಿಂದ ಚೀನಾ ಮತ್ತು ಪಾಕಿಸ್ತಾನ ಅತಿ ದೊಡ್ಡ ಹೊಡೆತವನ್ನು ಅನುಭವಿಸಿವೆ. ಚೀನಾದ ಮೇಲೆ ಶೇ.34 ಮತ್ತು ಪಾಕಿಸ್ತಾನದ ಮೇಲೆ 29 ರಷ್ಟು ಸುಂಕವನ್ನು ಟ್ರಂಪ್​ ವಿಧಿಸಿದ್ದಾರೆ.

ಟ್ರಂಪ್ ಅವರ ಪಾರಸ್ಪರಿಕ ಸುಂಕ ಘೋಷಣೆಯು ಕೆಲವು ಭಾರತೀಯ ರಫ್ತುಗಳು ಹೆಚ್ಚಿನ ಆಮದು ಸುಂಕವನ್ನು ಎದುರಿಸಬೇಕಾಗುತ್ತದೆ. ಇದರಿಂದ ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಬಹುದು. ಅದರಲ್ಲೂ ರಫ್ತು ಆಧಾರಿತ ವಲಯಗಳ ಮೇಲಿನ ಪರಿಣಾಮದ ಬಗ್ಗೆ ವ್ಯಾಪಾರಿಗಳು ಚಿಂತಿತರಾಗಿದ್ದಾರೆ. ಆದಾಗ್ಯೂ, ಎಸ್‌ಬಿಐ ಸಂಶೋಧನೆಯ ವರದಿಯ ಪ್ರಕಾರ ಭಾರತವು ಈ ಹೊಸ ಸುಂಕ ನೀತಿಯಿಂದ ಹೆಚ್ಚಿನ ಹೊಡೆತವನ್ನು ಅನುಭವಿಸುವುದಿಲ್ಲ ಎಂದು ಹೇಳಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net