ನಾವದನ್ನು ಮೂರ್ಖತನದಿಂದ ವಿಧಿಸುತ್ತಿರಲಿಲ್ಲ... ಭಾರತದ ಮೇಲೆ ಮತ್ತೆ ಕೆಸರೆರಚಿದ ಡೊನಾಲ್ಡ್ ಟ್ರಂಪ್! Donald Trump

Donald Trump
Published on

Donald Trump : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಭಾರತದ ವಿರುದ್ಧ ಆಕ್ರೋಶದ ಹೇಳಿಕೆಯನ್ನು ನೀಡಿದ್ದಾರೆ. ಭಾರತದೊಂದಿಗೆ ಅಮೆರಿಕ ಉತ್ತಮ ಸಂಬಂಧವನ್ನು ಹೊಂದಿದೆ. ಆದರೆ, ನವದೆಹಲಿಯ ಸರ್ಕಾರ ವಾಷಿಂಗ್ಟನ್‌ ಮೇಲೆ ಅತಿಯಾದ ಸುಂಕಗಳನ್ನು ವಿಧಿಸುತ್ತಿರುವುದರಿಂದ ಹಲವು ವರ್ಷಗಳಿಂದ ಎರಡೂ ದೇಶಗಳ ನಡುವಿನ ಸಂಬಂಧ ಏಕಪಕ್ಷೀಯವಾಗಿದೆ ಎಂದಿದ್ದಾರೆ.

ಓವಲ್ ಕಚೇರಿಯಿಂದ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ನಾವು ಭಾರತದೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತೇವೆ ಆದರೆ, ಹಲವು ವರ್ಷಗಳಿಂದ ಅದು ಏಕಪಕ್ಷೀಯ ಸಂಬಂಧವಾಗಿತ್ತು. ಭಾರತವು ನಮಗೆ ಅಪಾರ ಸುಂಕಗಳನ್ನು ವಿಧಿಸುತ್ತಿದೆ ಮತ್ತು ಇದು ವಿಶ್ವದಲ್ಲೇ ಅತಿ ಹೆಚ್ಚು. ಆದ್ದರಿಂದ ನಾವು ಭಾರತದೊಂದಿಗೆ ಹೆಚ್ಚು ವ್ಯವಹಾರ ಮಾಡುತ್ತಿರಲಿಲ್ಲ. ಆದರೆ, ಅವರು ನಮ್ಮೊಂದಿಗೆ ವ್ಯವಹಾರ ಮಾಡುತ್ತಿದ್ದರು. ಏಕೆಂದರೆ, ನಾವು ಅವರಿಗೆ ಮೂರ್ಖತನದಿಂದ ಶುಲ್ಕ ವಿಧಿಸುತ್ತಿರಲಿಲ್ಲ. ಆದರೆ, ನಾವು ಅಧಿಕಾರಕ್ಕೆ ಬಂದ ನಂತರ ಇದು ಬದಲಾಗಿದೆ ಎಂದು ಟ್ರಂಪ್​ ಹೇಳಿದರು.

ನಮ್ಮಲ್ಲಿ ಕಡಿಮೆ ಸುಂಕ ಇದ್ದಿದ್ದರಿಂದ ಅವರು ( ಭಾರತ) ಬೃಹತ್ ಪ್ರಮಾಣದಲ್ಲಿ ರಫ್ತು ಮಾಡುತ್ತಿದ್ದರು. ನಮ್ಮಲ್ಲಿ ಇಲ್ಲದ ಎಲ್ಲ ವಸ್ತುಗಳನ್ನು ಅವರು ಕಳುಹಿಸುತ್ತಿದ್ದರು ಎಂಬುದು ನಿಮಗೆ ತಿಳಿದಿದೆ. ಅವರು ಮಾಡಿದ ಎಲ್ಲವನ್ನೂ ನಮಗೆ ಕಳುಹಿಸುತ್ತಿದ್ದರು. ಅದು ನಮ್ಮ ದೇಶದಲ್ಲಿ ಸುರಿಯುತ್ತಿತ್ತು. ಆದ್ದರಿಂದ, ನಮ್ಮಲ್ಲಿಯೂ ಯಾವುದೇ ಉತ್ಪನ್ನ ತಯಾರಾಗುತ್ತಿರಲಿಲ್ಲ ಎಂಬುದು ನಿಮಗೆ ತಿಳಿದಿದೆ. ಇದೊಂದು ರೀತಿಯಲ್ಲಿ ನೆಗೆಟಿವ್​ ಆಗಿದೆ. ಆದರೆ, ಅವರು ನಮಗೆ 100 ಪ್ರತಿಶತ ಸುಂಕವನ್ನು ವಿಧಿಸುತ್ತಿರುವುದರಿಂದ ನಾವು ಏನನ್ನೂ ಅವರಿಗೆ ಕಳುಹಿಸುವುದಿಲ್ಲ ಎಂದು ಟ್ರಂಪ್ ಹೇಳಿದರು.

ಇದೇ ವೇಳೆ ಒಂದು ಉದಾಹರಣೆ ನೀಡಿದ ಟ್ರಂಪ್​, ಅಮೆರಿಕದ ಅತ್ಯಂತ ಖ್ಯಾತಿಯ ಮೋಟಾರ್‌ ಸೈಕಲ್ ಬ್ರಾಂಡ್‌ಗಳಲ್ಲಿ ಒಂದಾದ ಹಾರ್ಲೆ-ಡೇವಿಡ್ಸನ್ ಭಾರತದಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುವಲ್ಲಿ ಎದುರಿಸುತ್ತಿರುವ ಹೋರಾಟಗಳನ್ನು ಎತ್ತಿ ತೋರಿಸಿದರು. ಹಾರ್ಲೆ-ಡೇವಿಡ್ಸನ್ ಭಾರತಕ್ಕೆ ಮಾರಾಟ ಮಾಡಲು ಸಾಧ್ಯವಾಗಲಿಲ್ಲ. ಮೋಟಾರ್‌ ಸೈಕಲ್ ಮೇಲೆ ಶೇ. 200 ರಷ್ಟು ಸುಂಕವಿತ್ತು. ಹಾಗಾದರೆ ಮುಂದೇನಾಯಿತು? ಹಾರ್ಲೆ-ಡೇವಿಡ್ಸನ್ ಕಂಪನಿ ಭಾರತಕ್ಕೆ ಹೋಗಿ ಮೋಟಾರ್‌ಸೈಕಲ್ ಸ್ಥಾವರವನ್ನು ನಿರ್ಮಿಸಿತು. ಈಗ ಅವರು ಸುಂಕಗಳನ್ನು ಪಾವತಿಸಬೇಕಾಗಿಲ್ಲ. ಅನ್ಯಾಯದ ಸುಂಕ ರಚನೆಗಳು ಕಂಪನಿಗಳನ್ನು ಅಮೆರಿಕದ ಹೊರಗೆ ಉತ್ಪಾದನೆಯನ್ನು ಸ್ಥಾಪಿಸಲು ಒತ್ತಾಯಿಸುತ್ತಿವೆ ಎಂದರು.

ನಾವು ಹೇರಿದ ಪಾರಸ್ಪರಿಕ ಸುಂಕಗಳು ಸೇರಿದಂತೆ ತಮ್ಮ ಆಡಳಿತದ ವ್ಯಾಪಾರ ನೀತಿಗಳಿಂದ ಇದೀಗ ಟ್ರೆಂಡ್​ ಬದಲಾಗುತ್ತಿದೆ. ಅನೇಕ ಕಂಪನಿಗಳು ಇದೀಗ ಅಮೆರಿಕದತ್ತ ಬರುತ್ತಿವೆ ಎಂದು ಟ್ರಂಪ್​ ವಾದಿಸಿದರು. ಸಾವಿರಾರು ಕಂಪನಿಗಳು ಯುಎಸ್‌ಗೆ ಬರುತ್ತಿವೆ. ಕಾರು ಕಂಪನಿಗಳು ಹಾಗೂ AI ಸೇರಿದಂತೆ ನಮ್ಮಲ್ಲಿ ಹಲವಾರು ಕಂಪನಿ ಕಾರ್ಖಾನೆಗಳು ನಿರ್ಮಾಣ ಹಂತದಲ್ಲಿವೆ. ಚೀನಾದಿಂದ, ಮೆಕ್ಸಿಕೊದಿಂದ ಬರುತ್ತಿದ್ದಾರೆ. ಅಷ್ಟೇ ಏಕೆ, ಕೆನಡಾದಿಂದಲೂ ಬರುತ್ತಿದ್ದಾರೆ. ಏಕೆಂದರೆ, ಅವರು ಇಲ್ಲಿ ನಿರ್ಮಿಸಲು ಬಯಸುತ್ತಾರೆ. ಇದರಿಂದ ಅವರಿಗೆ ಯಾವುದೇ ಸುಂಕಗಳು ಇರುವುದಿಲ್ಲ ಎಂದು ಟ್ರಂಪ್ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net