ಪ್ಲೀಸ್​ ಕ್ಷಮೆಯಾಚನೆ ಸ್ವೀಕರಿಸಿ... ಕನ್ನಡಿಗರ ಮುಂದೆ ಮಂಡಿಯೂರಿದ ಮಲಯಾಳಂ ಸಿನಿಮಾ ತಂಡ! Bengaluru Girls

Bengaluru Girls
Published on

Bengaluru Girls : ಬೆಂಗಳೂರಿನ ಸಂಸ್ಕೃತಿ ಮತ್ತು ಅಲ್ಲಿನ ಯುವತಿಯರ ಬಗ್ಗೆ ತುಂಬಾ ಅಶ್ಲೀಲ ಪದ ಬಳಕೆ ಮಾಡುವ ಮೂಲಕ ಮಲಯಾಳಂನ ಲೋಕಃ ಚಾಪ್ಟರ್​ 1 ಸಿನಿಮಾ ವಿವಾದದ ಬಿರುಗಾಳಿ ಎಬ್ಬಿಸಿದೆ. ಇದರ ವಿರುದ್ಧ ಸಿಲಿಕಾನ್​ ಸಿಟಿ ಮಂದಿ ಭಾರಿ ಆಕ್ರೋಶ ಹೊರಹಾಕಿದ ಬೆನ್ನಲ್ಲೇ ಲೋಕಃ ಚಿತ್ರತಂಡ ಬೆಂಗಳೂರಿಗರ ಕ್ಷಮೆಯಾಚಿಸಿದೆ.

ಅಂದಹಾಗೆ, ಲೋಕಃ ಚಾಪ್ಟರ್​ 1 ಸಿನಿಮಾವನ್ನು ಮಲಯಾಳಂನ ಖ್ಯಾತ ನಟ ದುಲ್ಕರ್​ ಸಲ್ಮಾನ್​ ಅವರು ತಮ್ಮ "ವೇಫಾರರ್ ಫಿಲ್ಮ್ಸ್​" ಅಡಿಯಲ್ಲಿ ನಿರ್ಮಿಸಿದ್ದಾರೆ. ಬೆಂಗಳೂರು ಕುರಿತಾದ ಡೈಲಾಗ್​ನಿಂದಾಗಿ ವಿವಾದ ಹೊತ್ತಿಕೊಳ್ಳುತ್ತಿದ್ದಂತೆ ವೇಫಾರರ್​ ಫಿಲ್ಮ್ಸ್​ ತಂಡ ಪ್ರತಿಕ್ರಿಯೆ ನೀಡಿದೆ.

ಪ್ಲೀಸ್​ ಕ್ಷಮೆಯಾಚನೆ ಸ್ವೀಕರಿಸಿ

ನಾವು ನಿರ್ಮಾಣ ಮಾಡಿರುವ ಲೋಕಃ ಚಾಪ್ಟರ್​ 1 ಸಿನಿಮಾದ ಪಾತ್ರಧಾರಿಗಳಲ್ಲಿ ಒಬ್ಬರು ಹೇಳಿರುವ ಸಂಭಾಷಣೆಯು ಕರ್ನಾಟಕದ ಜನರ ಭಾವನೆಗಳನ್ನು ನೋಯಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ನಾವಿದನ್ನು ಉದ್ದೇಶಪೂರ್ವಕವಾಗಿ ಮಾಡಿಲ್ಲ. ವೇಫಾರರ್ ಸಿನಿಮಾಗಳಲ್ಲಿ ನಾವು ಜನರನ್ನು ಎಲ್ಲಕ್ಕಿಂತ ಮೇಲಿರಿಸಿಕೊಳ್ಳುತ್ತೇವೆ. ಹೀಗಾಗಿ, ಪ್ರಸ್ತುತ ವಿವಾದವನ್ನು ನಾವು ತೀವ್ರವಾಗಿ ವಿಷಾದಿಸುತ್ತೇವೆ ಮತ್ತು ಯಾವುದೇ ಅಪರಾಧವನ್ನು ನಾವು ಉದ್ದೇಶಪೂರ್ಕವಾಗಿ ಮಾಡಿಲ್ಲ ಎಂಬ ಭರವಸೆಯನ್ನು ನಿಮಗೆ ನೀಡುತ್ತೇವೆ. ಸದ್ಯ ವಿವಾದಕ್ಕೆ ಕಾರಣವಾಗಿರುವ ಸಂಭಾಷಣೆಯನ್ನು ಆದಷ್ಟು ಬೇಗ ತೆಗೆದುಹಾಕಲಾಗುತ್ತದೆ ಅಥವಾ ಎಡಿಟ್​ ಮಾಡಲಾಗುತ್ತದೆ. ನಮ್ಮಿಂದ ಉಂಟಾದ ನೋವಿಗೆ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ ಮತ್ತು ನಮ್ಮ ಕ್ಷಮೆಯಾಚನೆಯನ್ನು ಸ್ವೀಕರಿಸಲು ವಿನಮ್ರವಾಗಿ ವಿನಂತಿಸುತ್ತೇವೆ ಎಂದು ವೇಫಾರರ್​ ಸಿನಿಮಾ ತಂಡ ಸಾಮಾಜಿಕ ಜಾಲತಾಣ ಮೂಲಕ ಕೇಳಿಕೊಂಡಿದೆ.

ಏನಿದು ವಿವಾದ?

ಬೆಂಗಳೂರು ಯುವತಿಯರನ್ನು ಕೆಟ್ಟದಾಗಿ ಬಿಂಬಿಸಿದ ಆರೋಪ ಇತ್ತೀಚೆಗೆ ತೆರೆಕಂಡ ಲೋಕಃ ಚಾಪ್ಟರ್​ 1 ವಿರುದ್ಧ ಕೇಳಿಬಂದಿದೆ. ಈ ಸಿನಿಮಾದಲ್ಲಿ ನಟಿ ಕಲ್ಯಾಣಿ ಪ್ರಿಯದರ್ಶನಿ ಸೂಪರ್ ಹೀರೋಯಿನ್​ ಪಾತ್ರದಲ್ಲಿ ನಟಿಸಿದ್ದಾರೆ. ರಾಜ್ ಬಿ ಶೆಟ್ಟಿಯ ಲಾಫ್ಟರ್ ಬುದ್ಧ ಸಂಸ್ಥೆ ಈ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಿದೆ. ಈ ಸಿನಿಮಾದಲ್ಲಿ ಬೆಂಗಳೂರನ್ನು ಡ್ರಗ್ಸ್ ಸಿಟಿ ಎನ್ನುವ ರೀತಿ ತೋರಿಸಲಾಗಿದಯಂತೆ. ಅಲ್ಲದೆ, ಬೆಂಗಳೂರು ಯುವತಿಯರನ್ನು ಸಾಮೂಹಿಕವಾಗಿ ನಿಂದಿಸಿರುವಂತಹ ಸಂಭಾಷಣೆ ಇದೆ ಎಂದು ಟೀಕೆ ಇದೆ. ಸನ್ನಿವೇಶವೊಂದರಲ್ಲಿ ಬೆಂಗಳೂರು ಯುವತಿಯರನ್ನು ನಾನು ಮದುವೆಯಾಗಲ್ಲ,‌ ಅಲ್ಲಿ ಇರುವವರೆಲ್ಲ ಡಗಾ*** ಗಳು ಎಂದು ಅರ್ಥೈಸಿ ಡೈಲಾಗ್ ಹೇಳಲಾಗಿದೆಯಂತೆ. ಇನ್ನು ಈ ಚಿತ್ರದ ವಿರುದ್ಧ ಸ್ಯಾಂಡಲ್​ವುಡ್​ನ ಖ್ಯಾತ ನಿರ್ದೇಶಕ ಮಂಸೋರೆ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಂಗಳೂರನ್ನು ಡ್ರಗ್ಸ್ ಸಿಟಿ ಎನ್ನುವ ರೀತಿ ಬ್ರ್ಯಾಂಡ್ ಮಾಡಲಾಗಿದೆ ಎಂದು ಟೀಕಿಸಿದ್ದಾರೆ. ಅಂದಹಾಗೆ, ಈ ಸಿನಿಮಾದ ಇಡೀ ಕಥೆ ಬೆಂಗಳೂರಿನಲ್ಲೇ ಸಾಗುತ್ತದೆ.

ಬೆಂಗಳೂರು ಇಷ್ಟಕ್ಕೆ ಸೀಮಿತವಾ?

ಮಲಯಾಳಂನ ಲೋಕಃ: ಚಾಪ್ಟರ್ 1-ಚಂದ್ರ ಸಿನಿಮಾದಲ್ಲಿ ಬೆಂಗಳೂರಿಗರಿಗೆ ಅವಮಾನ ಮಾಡೋ ಪದ ಬಳಕೆ ಆಗಿದೆ. ಅಲ್ಲದೆ, ಬೆಂಗಳೂರನ್ನು ಕೇವಲ ಪಾರ್ಟಿ, ಡ್ರಗ್ಸ್‌ಗಳಿಗೆ ಮಾತ್ರ ಎಂದು ಚಿತ್ರಿಸಿರೋ ರೀತಿ ಚರ್ಚೆಯನ್ನು ಹುಟ್ಟುಹಾಕಿದೆ. ಸಿನಿಮಾದಲ್ಲಿ ಬರೋ ನಾಚಿಯಪ್ಪ ಗೌಡನಿಗೆ (ಸ್ಯಾಂಡಿ) ಮದುವೆ ಆಫರ್ ನೀಡಲಾಗುತ್ತದೆ. ಆದರೆ, ಆತ, ‘ನಾನು ಮದುವೆ ಆಗೋಕೆ ಒಪ್ಪಿಕೊಳ್ಳೋದಿಲ್ಲ ಎಂದಲ್ಲ, ಇಲ್ಲಿಯವರನ್ನು ಮದುವೆ ಆಗಲ್ಲ. ಏಕೆಂದರೆ, ಇಲ್ಲಿಯವರು ಡ…ರ್ ಗಳು’ ಎಂದು ಹೇಳುತ್ತಾನೆ. ಇಡೀ ಬೆಂಗಳೂರು ಯುವತಿಯರು/ಮಹಿಳೆಯರನ್ನು ಈ ರೀತಿ ಕರೆದಿರೋದು ಚರ್ಚೆ ಹುಟ್ಟುಹಾಕಿದೆ. ಈ ವಾಕ್ಯವನ್ನು ತೆಗೆದು ಹಾಕಬೇಕು ಎಂದು ಅನೇಕರು ಒತ್ತಾಯಿಸಿದ್ದಾರೆ. ಲೋಕಃ’ ಸಿನಿಮಾದಲ್ಲಿ ಸಾಕಷ್ಟು ಪಾರ್ಟಿ ದೃಶ್ಯಗಳು, ಅದರಲ್ಲಿ ಡ್ರಗ್ ಬಳಕೆ ತೋರಿಸಲಾಗಿದೆ. ಅದು ಕಾಮನ್ ಎಂಬ ರೀತಿಯಲ್ಲಿ ಚಿತ್ರಿಸಲಾಗಿದೆ. ಇದು ಕೂಡ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಹೊರ ಜಗತ್ತಿಗೆ ನೋಡುವವರಿಗೆ ‘ಬೆಂಗಳೂರು ಇಷ್ಟಕ್ಕೆ ಸೀಮಿತವಾ’ ಎಂಬ ಪ್ರಶ್ನೆ ಹುಟ್ಟುಹಾಕುವಂತೆ ಮಾಡುತ್ತದೆ ಎಂದು bengaluruinlast24hr ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಅಭಿಪ್ರಾಯ ಹಂಚಿಕೊಳ್ಳಲಾಗಿದೆ.

ಅಂದಹಾಗೆ, ಸಾಮಾಜಿಕ ಜಾಲತಾದಲ್ಲಿ ಲೋಕಃ ಸಿನಿಮಾದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬೆಂಗಳೂರು ಕೇವಲ ಕನ್ನಡಿಗರಿಗೆ ಮಾತ್ರ ಸೂರಲ್ಲ, ದೇಶದ ವಿವಿಧ ಭಾಗಗಳಿಂದ ಬರುವ ಎಲ್ಲರಿಗೂ ತನ್ನ ಒಡಲಲ್ಲಿ ಜಾಗ ನೀಡುತ್ತದೆ. ಪ್ರತಿಯೊಬ್ಬರು ಗೌರವಯುತ ಜೀವನ ನೀಡುತ್ತದೆ. ಉತ್ತಮ ಪರಿಸರದಿಂದಿಡಿದು ಪ್ರತಿಯೊಂದು ಮೂಲ ಸೌಕರ್ಯವನ್ನು ಒದಗಿರುವ ಬೆಂಗಳೂರು ಅನೇಕ ವಿದೇಶಿಗರಿಗೂ ನೆಚ್ಚಿನ ತಾಣವಾಗಿದೆ. ಐಟಿ ಹಬ್​, ಸಿಲಿಕಾಲ್​ ಸಿಟಿ ಎಂಬ ಖ್ಯಾತಿ ಗಳಿಸಿರುವ ಬೆಂಗಳೂರಿಗೆ ಇಂತಹ ಕಳಂಕ ತರುವುದನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು ಎಂದು ಅನೇಕ ನೆಟ್ಟಿಗರು ತಮ್ಮದೆಯಾದ ಅಭಿಪ್ರಾಯವನ್ನು ಹೊರಹಾಕುತ್ತಿದ್ದಾರೆ. ಹೀಗೆ ಸಾಕಷ್ಟು ವಿರೋಧ ವ್ಯಕ್ತವಾದ ಬಳಿಕ ಸಿನಿಮಾ ತಂಡ ಕೊನೆಗೂ ಕ್ಷಮೆಯಾಚಿಸಿದೆ ಮತ್ತು ಅಶ್ಲೀಲ ಪದ ಬಳಕೆಯನ್ನು ತೆಗೆದುಹಾಕುವ ಭರವಸೆ ನೀಡಿದೆ.

ಬೆಂಗಳೂರು ನಮ್ಮ ಹೆಮ್ಮೆ

ರಾಜ್ಯ ರಾಜಧಾನಿ ಬೆಂಗಳೂರು (Bengaluru) ಕೇವಲ ಒಂದು ನಗರ ಮಾತ್ರವಲ್ಲ ಅದೊಂದು ಕುಟುಂಬ. ನಮ್ಮ ಕನ್ನಡನಾಡು ಕನ್ನಡಿಗರಿಗಷ್ಟೇ ಸೀಮಿತವಾಗದೆ ಇತರೆ ಜಿಲ್ಲೆ, ರಾಜ್ಯ, ದೇಶ-ವಿದೇಶಗಳ ಜನರಿಗೆ ಸೂರು ಆಗಿದೆ, ಆಸರೆಯೂ ಆಗಿದೆ. ಉದ್ಯಮ, ಶಿಕ್ಷಣ ಹೀಗೆ ನಾನಾ ಉದ್ದೇಶಗಳನ್ನು ಹೊತ್ತು ಸಿಲಿಕಾನ್ ಸಿಟಿಗೆ ಆಗಮಿಸುವ ಅದೆಷ್ಟೋ ಸಂಖ್ಯೆಯ ವಲಸಿಗರು, ತಮ್ಮ ಧ್ಯೇಯದಲ್ಲಿ ಯಶಸ್ಸನ್ನು ಕಂಡು, ಬೆಂಗಳೂರಿನಲ್ಲೇ ನೆಲೆ ಕಂಡಿದ್ದಾರೆ. ದೊಡ್ಡ ಕನಸನ್ನು ಕಾಣುತ ಬೆಂದಕಾಳೂರಿಗೆ ಕೆಂಪು ಬಸ್​ ಹಿಡಿದು ಬಂದವರ ಪೈಕಿ ಇಂದು ಸಾಧನೆ ಮಾಡಿದವರು ಅಪಾರ. ಕನ್ನಡ ನೆಲ, ಜಲ, ಸೂರು, ಆಹಾರ, ಸಂಸ್ಕೃತಿಗೆ ವಲಸಿಗರು ಕೂಡ ಫಿದಾ ಆಗುತ್ತಾರೆ. ವಿಶ್ವದಲ್ಲೇ ಬೆಂಗಳೂರಿಗೆ ವಿಶೇಷ ಸ್ಥಾನವಿದೆ. ಹೀಗಿರುವಾಗ ಬೆಂಗಳೂರು ಮತ್ತು ಅಲ್ಲಿನ ಯುವತಿಯರ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವುದನ್ನು ನಿಜಕ್ಕೂ ಒಪ್ಪಲಾಗದು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net