

ಬೆಂಗಳೂರು: ನಟ ಡಾಲಿ ಧನಂಜಯ ಮತ್ತು ಡಾ. ಧನ್ಯತಾ ಮದುವೆ ಇದೇ ತಿಂಗಳ 16ರಂದು ಮೈಸೂರಿನಲ್ಲಿ ನಡೆಯಲಿದೆ. ಅಂಬಾವಿಲಾಸ ಅರಮನೆ ಮುಂಭಾಗದ ವಸ್ತುಪ್ರದರ್ಶನ ಮೈದಾನದಲ್ಲಿ ಶನಿವಾರ (ಫೆ.15) ಸಂಜೆ 6 ಗಂಟೆಯ ನಂತರ ಆರತಕ್ಷತೆ ಮತ್ತು ಭಾನುವಾರ (ಫೆ.16) ಬೆ. 8.20ರಿಂದ 10 ಗಂಟೆಯವರೆಗೆ ಮೀನ ಲಗ್ನದಲ್ಲಿ ಮಾಂಗಲ್ಯಧಾರಣೆ ಮಾಡಲಿದ್ದಾರೆ. ಈ ಬಗ್ಗೆ ಧನಂಜಯ, ‘ರಿಜಿಸ್ಟರ್ ಮ್ಯಾರೇಜ್ ಆಗಬೇಕು ಅಂದುಕೊಂಡಿದ್ದೆ. ಸರಳವಾಗಿ ಮದುವೆಯಾಗಿ ನಂತರ ಎಲ್ಲರಿಗೂ ತಿಳಿಸೋಣ ಅಂತಲೂ ಯೋಚಿಸಿದ್ದೆ. ಆದರೆ, ನಂತರ ಸಾವಿರಾರು ಪ್ರಶ್ನೆಗಳು ಸೃಷ್ಟಿಯಾಗಿ ಎಲ್ಲದಕ್ಕೂ ಉತ್ತರಿಸಬೇಕಾಗುತ್ತದೆ. ಇದೊಂದು ಒಳ್ಳೆ ಸಂದರ್ಭ ಕುಟುಂಬದವರು, ಸ್ನೇಹಿತರು, ಚಿತ್ರರಂಗದ ಗೆಳೆಯರು, ಅಭಿಮಾನಿಗಳನ್ನು ಸೇರಿಸಿ ಆಚರಿಸಬೇಕು ಅಂತನ್ನಿಸಿತು. ನನ್ನ ಬಳಗ ಕೂಡ ದೊಡ್ಡದು. ಅಮೆರಿಕ, ದುಬೈ, ಆಸ್ಟ್ರೇಲಿಯಾ ಸೇರಿ ಹಲವೆಡೆ ಫ್ರೆಂಡ್ಸ್ ಇದ್ದಾರೆ. ಅವರೂ ಮದುವೆಗೆ ಬರಲಿದ್ದಾರೆ’ ಎಂದು ಮಾಹಿತಿ ನೀಡಿದರು. ಕಳೆದ ಎರಡು ತಿಂಗಳಿನಿಂದ ಮದುವೆಯ ಸಿದ್ಧತೆಯಲ್ಲಿರುವ ಧನಂಜಯ, ಮಾರ್ಚ್ನಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ಬಿಜಿಯಾಗಲಿದ್ದಾರೆ.
ಧನ, ಧನ್ಯತಾ ಪ್ರೇಮಪಯಣ: ಡಾ. ಧನ್ಯತಾ ಬಗ್ಗೆ ಧನಂಜಯ, ‘ಯಾವಾಗ ಮದುವೆ ಅಂತ ಎಲ್ಲರೂ ಕೇಳುತ್ತಿದ್ದರು. ನನಗನ್ನಿಸುವ ಹುಡುಗಿ ಸಿಕ್ಕಾಗ ಆಗ್ತೀನಿ ಅಂತಿದ್ದೆ. ಧನ್ಯತಾ ವಿದ್ಯಾರ್ಥಿನಿಯಾಗಿದ್ದಾಗ ನನ್ನ ಅಭಿಮಾನಿ. ಆಗ ಜಯನಗರದಲ್ಲಿ ಒಮ್ಮೆ ಭೇಟಿ ಮಾಡಿದ್ದೆ. ನನ್ನ ಸಿನಿಮಾ ನೋಡಿದಾಗ, ಪ್ರಶಸ್ತಿ ಬಂದಾಗ ಜಾಲತಾಣದಲ್ಲಿ ಹಾರೈಸುತ್ತಿದ್ದರು. ಕಳೆದ ವರ್ಷ ಇನ್ನೊಮ್ಮೆ ಭೇಟಿ ಮಾಡಿದೆವು. ಬಳಿಕ ಪದೇ ಪದೆ ಭೇಟಿ ಮಾಡಿದೆವು. ಅವರ ಸರಳತೆ, ನಮ್ಮಿಬ್ಬರ ಆಲೋಚನೆ, ಅವರ ವೃತ್ತಿಪರತೆ ನನಗೆ ಬಹಳ ಇಷ್ಟವಾಯಿತು. ಅವರ ಜತೆಗಿದ್ದರೆ ಬದುಕು ಚೆನ್ನಾಗಿರುತ್ತೆ ಅಂತನ್ನಿಸಿತು. ಧನ್ಯತಾ ಜತೆಯಲ್ಲೇ ಜೀವನ ಮಾಡಬೇಕು ಅಂತನ್ನಿಸಿತು. ಅವರಿಗೆ ಯಾವುದನ್ನೂ ವಿವರಿಸಿ ಹೇಳುವ ಅವಶ್ಯಕತೆಯಿಲ್ಲ. ಅವರೇ ಮೊದಲು ಅರ್ಥ ಮಾಡಿಕೊಂಡಿರುತ್ತಾರೆ’ ಎನ್ನುತ್ತಾರೆ. ಹಾಗೇ ಹೆರಿಗೆ, ಸ್ತ್ರೀರೋಗ ತಜ್ಞೆಯಾಗಿರುವ ಡಾ. ಧನ್ಯತಾ ಇದುವರೆಗೆ 500ಕ್ಕೂ ಅಧಿಕ ಹೆರಿಗೆ ಮಾಡಿಸಿದ್ದಾರೆ. ಭಾವಿ ವರ ಧನಂಜಯ ಬಗ್ಗೆ ಅವರು, ‘ನಾವಿಬ್ಬರೂ ಒಂದೇ ರೀತಿ ಯೋಚಿಸುತ್ತೇವೆ. ತುಂಬ ಸರಳವಾಗಿರುತ್ತಾರೆ. ನನಗೆ ಅವರು ನಟಿಸಿರುವ ‘ರತ್ನನ್ ಪ್ರಪಂಚ’ ಇಷ್ಟ. ಅವರು ತೆರೆಯ ಮೇಲೆ ಪಾಸಿಟಿವ್, ನೆಗಟಿವ್ ಎರಡೂ ಪಾತ್ರಗಳನ್ನು ತುಂಬ ಚೆನ್ನಾಗಿ ಮಾಡುತ್ತಾರೆ’ ಎನ್ನುತ್ತಾರೆ.
ಮೈಸೂರಿನಲ್ಲೇಕೆ ಮದುವೆ?: ಹಾಸನದ ಅರಸೀಕೆರೆಯ ಧನಂಜಯ ಮೈಸೂರಿನಲ್ಲೇ ಮದುವೆಯಾಗಬೇಕು ಅಂತ ಆಸೆಪಟ್ಟಿದ್ದರಂತೆ. ಈ ಬಗ್ಗೆ, ‘ನಾನು ಓದಿದ್ದು, ಬೆಳೆದಿದ್ದು ಮೈಸೂರಿನಲ್ಲಿ. ಹೀಗಾಗಿ ನನಗೂ ಮೈಸೂರಿಗೂ ಭಾವನಾತ್ಮಕ ನಂಟಿದೆ. ಧನ್ಯತಾ ಓದಿದ್ದು ಕೂಡ ಮೈಸೂರಿನಲ್ಲೇ. ನನಗೂ ಅಲ್ಲೇ ಮದುವೆ ಆಗಬೇಕು ಅಂತ ಆಸೆ ಇತ್ತು. ಜತೆಗೆ ಊರಿನಲ್ಲಿ ಒಮ್ಮೆ, ಮೈಸೂರಿನಲ್ಲಿ ಇನ್ನೊಮ್ಮೆ, ಬೆಂಗಳೂರಿನಲ್ಲಿ ಮತ್ತೊಮ್ಮೆ, ಧನ್ಯತಾ ಹುಟ್ಟೂರು ಚಿತ್ರದುರ್ಗದ ಶಿವಪುರದಲ್ಲಿ ಮಗದೊಮ್ಮೆ ಆರತಕ್ಷತೆ ಮಾಡುವುದಕ್ಕಿಂತ ಒಂದೇ ಬಾರಿ ಮೈಸೂರಿನಲ್ಲೇ ಆದರೆ ಉತ್ತಮ ಅಂತನ್ನಿಸಿತು’ ಎನ್ನುತ್ತಾರೆ.
ಅಭಿಮಾನಿಗಳಿಗೆ ವಿದ್ಯಾಪತಿ ದ್ವಾರ: ವಸ್ತುಪ್ರದರ್ಶನ ಮೈದಾನದಲ್ಲೇ ಮದುವೆಯ ಎರಡು ದಿನಗಳ ಕಾಲ ಅಭಿಮಾನಿಗಳಿಗೂ ವ್ಯವಸ್ಥೆ ಮಾಡಲಾಗಿದೆ. ‘ಸರತಿ ಸಾಲಿನಲ್ಲಿ ಸ್ಟೇಜ್ ಬಳಿ ಬಂದು ಶುಭಹಾರೈಸಲು, ಕುಳಿತು ಮದುವೆ ನೋಡಲು, ಹಾಗೇ ಅವರಿಗೆಂದೇ ವಿಶೇಷವಾಗಿ ಊಟದ ವ್ಯವಸ್ಥೆಯನ್ನೂ ಮಾಡಲಿದ್ದೇವೆ’ ಎನ್ನುತ್ತಾರೆ ಧನಂಜಯ.