ಬಿಡುಗಡೆಗೂ ಮುನ್ನ ಭಾರಿ ಸದ್ದು ಮಾಡುತ್ತಲಿದೆ ಕನ್ನಡದ 'ಡೊಳ್ಳು'

Dollu F
Published on

ಬೆಂಗಳೂರು: ನಿರ್ದೇಶಕ ಪವನ್ ವಡೆಯರ್ ಅವರ ಚೊಚ್ಚಲ ನಿರ್ಮಾಣದ ಹಾಗೂ ನಿರ್ದೇಶಕ ಸಾಗರ್ ಪುರಾಣಿಕ್ ಅವರ ಪ್ರಪ್ರಥಮ ನಿರ್ದೇಶನದ ಸಿನಿಮಾ ಡೊಳ್ಳು ಬಿಡುಗಡೆಗೆ ಮೊದಲೇ ಭಾರಿ ಸದ್ದು ಮಾಡುತ್ತಿದೆ.

ಗೋವಾದಲ್ಲಿ ನಡೆದ 52ನೇ ಭಾರತ ಅಂತಾರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ಪನೊರಮಾ ವಿಭಾಗದಲ್ಲಿ ಪ್ರದರ್ಶಿಸಲಾಗಿದ್ದ ‘ಡೊಳ್ಳು’ ಸಿನಿಮಾ ಅತ್ಯುತ್ತಮ ಸಿನಿಮಾ ಪ್ರಶಸ್ತಿಗೆ ಪಾತ್ರವಾಗಿತ್ತು. ಅಲ್ಲದೆ ಇನೊವೇಟಿವ್​ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಕನ್ನಡ ಚಲನಚಿತ್ರಕ್ಕಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸಹ ಪಡೆದುಕೊಂಡಿತ್ತು.

ಅದಕ್ಕೂ ಮೊದಲು ಢಾಕಾ ಸಿನಿಮಾ ಉತ್ಸವದಲ್ಲೂ ಈ ಚಿತ್ರಕ್ಕೆ ಪ್ರಶಸ್ತಿ ಬಂದಿತ್ತು. ಜೊತೆಗೆ ಬೋಸ್ಟನ್ ಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿ, ಕಲೈಡೊ ಚಿತ್ರೋತ್ಸವದಲ್ಲಿ ಒಂದು ಪ್ರಶಸ್ತಿ ಸಹ ಮುಡಿಗೇರಿಸಿಕೊಂಡಿತ್ತು. ಅಲ್ಲದೆ ಇತ್ತೀಚೆಗೆ ನೇಪಾಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಜಾಗತಿಕ ಸ್ಪರ್ಧೆ ವಿಭಾಗಕ್ಕೂ ಆಯ್ಕೆ ಆಗಿದೆ.

ಇದೀಗ ಕೇಂದ್ರ ಸರ್ಕಾರ ಅಂದರೆ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ಕಾನ್​​ಫೆಡರೇಷನ್​ ಆಫ್ ಇಂಡಸ್ಟ್ರಿಯು ಈ ಚಿತ್ರವನ್ನು 72ನೇ ಬರ್ಲಿನೇಲ್ಸ್​ ಯುರೋಪಿಯನ್​ ಫಿಲ್ಮ್​ ಮಾರ್ಕೆಟ್​ನಲ್ಲಿ ಪ್ರದರ್ಶಿಸಲು ಆಯ್ಕೆ ಮಾಡಿದೆ. ಅಲ್ಲಿ ಫೆ. 12 ಹಾಗೂ 14ರಂದು 9 ಸಿನಿಮಾಗಳ ಪೈಕಿ ಇದು ಕೂಡ ಪ್ರದರ್ಶನಗೊಳ್ಳಲಿದೆ.

ಹೊಸಬರಾದ ಕಾರ್ತಿಕ್ ಮಹೇಶ್ ಮತ್ತು ನಿಧಿ ಹೆಗ್ಡೆ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗಿನ ಪೀಳಿಗೆಯ ಮಕ್ಕಳಿಗೆ ನಮ್ಮ ನಾಡಿನ ಜನಪದ ಕಲೆಯೊಂದನ್ನು ಪರಿಚಯಿಸುವುದರ ಸಲುವಾಗಿ ‘ಡೊಳ್ಳು’ ಸಿನಿಮಾ ಮಾಡಲಾಗಿದೆ. ಕೇವಲ ಮನರಂಜನೆ ಅಲ್ಲದೇ ಈ ಸಿನಿಮಾದಲ್ಲಿ ಒಂದೊಳ್ಳೆಯ ಸಂದೇಶ ಕೂಡ ಇದೆ. ಜನಪದ ಕಲೆಯಾದ ‘ಡೊಳ್ಳು’ ಸದ್ಯ ಅನುಭವಿಸುತ್ತಿರುವ ಸಮಸ್ಯೆಗಳು ಮತ್ತು ಇದೇ ಕಲೆಯನ್ನು ನಂಬಿಕೊಂಡು ಬದುಕುತ್ತಿರುವ ಕಲಾವಿದರ ಕಷ್ಟಗಳ ಬಗ್ಗೆ ಚಿತ್ರದಲ್ಲಿ ತೋರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net