

ಬಿಡದಿ: ಮನುಷ್ಯ ಇತ್ತೀಚಿಗೆ ಮನುಷ್ಯತ್ವವನ್ನೆ ಕಳೆದುಕೊಳ್ಳುತ್ತಿದ್ದಾನೆ. ಸಣ್ಣ ಪುಟ್ಟ ವಿಚಾರಗಳಿಗೂ ಅತಿಯಾಗಿ ವರ್ತಿಸುತ್ತಿದ್ದು, ಇದೀಗ ವ್ಯಕ್ತಿಯೊಬ್ಬ ತನ್ನ ಜಮೀನಿಗೆ ನಾಯಿ ನುಗ್ಗಿತು ಎನ್ನುವ ಕಾರಣಕ್ಕೆ ನಾಯಿಯನ್ನೇ ಕೊಂದು ಹಾಕಿ ವಿಕೃತಿ ಮರೆದಿದ್ದಾನೆ.
ಹೌದು ಇಂತಹ ಘಟನೆ ನಡೆದಿರುವುದು ಬಿಡದಿಯಲ್ಲಿ. ತನ್ನ ಜಮೀನಿಗೆ ನಾಯಿ ಬಂತೆಂದು ಗುಂಡು ಹೊಡೆದು ಸಾಯಿಸಿರುವ ಘಟನೆ ಕಂಚುಗಾರನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಶಶಾಂಕ್ ಎಂಬುವರು ನಾಯಿ ಸಾಕಿದ್ದು, ಸುಬ್ಬ ಎಂದು ನಾಮಕರಣವನ್ನೂ ಮಾಡಿ ಅದೇ ಹೆಸರಲ್ಲಿ ಕರೆಯುತ್ತಿದ್ದರು. ಪ್ರತಿನಿತ್ಯ ಮಧ್ಯಾಹ್ನ ನಾಯಿಯನ್ನು ಓಡಾಡಲು ಮನೆಯಿಂದ ಹೊರಗೆ ಬಿಡುತ್ತಿದ್ದರು.
ಅದೇರೀತಿ ಸೋಮವಾರ ಮಧ್ಯಾಹ್ನ ನಾಯಿಯನ್ನು ಹೊರಬಿಟ್ಟಿದ್ದರು. ಸಂಜೆಯಾದರೂ ನಾಯಿ ವಾಪಸಾಗಿರಲಿಲ್ಲ. ಮಂಗಳವಾರ ಶಶಾಂಕ್ ಎಂಬುವರ ಮನೆ ಎದುರು ಇರುವ ಎಸ್ಟೇಟ್‌ನಲ್ಲಿ ಕೆಲಸ ಮಾಡುವ ಕೆಲಸಗಾರನ ಬಳಿ ನಾಯಿ ಬಗ್ಗೆ ವಿಚಾರಿಸಿದಾಗ ಸತ್ಯ ಬಯಲಾಗಿದೆ.
ಎಸ್ಟೇಟ್‌ನ ಮಾಲೀಕರು ನಿಮ್ಮ ನಾಯಿಗೆ ಬಂದೂಕಿನಿಂದ ಗುಂಡು ಹಾರಿಸಿ ಸಾಯಿಸಿ ನಂತರ ಮರವೊಂದರ ಕೆಳಗೆ ಎಸೆದಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಅದರಂತೆ ಶಶಾಂಕ್ ಮರದ ಬಳಿ ಹೋಗಿ ನೋಡಿದಾಗ ನಾಯಿ ಮೃತಪಟ್ಟಿರುವುದು ಕಂಡುಬಂತು. ಈ ಬಗ್ಗೆ ಬಿಡದಿ ಠಾಣೆಯಲ್ಲಿ ಶಶಾಂಕ್ ಮಂಗಳವಾರ ದೂರು ದಾಖಲು ಮಾಡಿದ್ದಾರೆ.