

ಮುಂಬೈ: ನಟ ಅಜಯ್ ದೇವಗನ್ ಅವರು 1991ರಲ್ಲಿ ತೆರೆಕಂಡ ಫೂಲ್ ಔರ್ ಕಾಂತೆ ಸಿನಿಮಾ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಿದರು. ಮೊದಲ ಸಿನಿಮಾದಲ್ಲೇ ಫಿಲ್ಮ್ಫೇರ್ ಅವಾರ್ಡ್ ಗಳಿಸಿದರು. ಈ ಸಿನಿಮಾದ ಕಥಾವಸ್ತುವು ಮೆಚ್ಚುಗೆ ಪಡೆದಿದ್ದಲ್ಲದೆ, ಹಾಡುಗಳು ಸಹ ಹಿಟ್ ಆದವು. ಮೊದಲ ಸಿನಿಮಾದಲ್ಲೇ ಅಜಯ್ ದೇವಗನ್ ಬಾಲಿವುಡ್ನ ಭರವಸೆ ನಾಯಕರಾದರು. ಈ ಸಿನಿಮಾದಲ್ಲಿ ವಿಶೇಷ ಗಮನ ಸೆಳೆದಿದ್ದು, ದೇವಗನ್ ಅವರ ಅದ್ಧೂರಿ ಎಂಟ್ರಿ. ಎರಡು ಬೈಕ್ಗಳ ಮೇಲೆ ನಿಂತು ಬರುವ ಸಾಹಸ ಸಿನಿ ರಸಿಕರನ್ನು ಸೆಳೆಯಿತು.
ಈ ಸಿನಿಮಾ 1991ರಲ್ಲಿ ತೆರೆಕಂಡರೂ ಇಂದಿಗೂ ಈ ಐಕಾನಿಕ್ ಸಾಹಸವನ್ನು ನೆನಪು ಮಾಡಿಕೊಳ್ಳುತ್ತಲೇ ಇರುತ್ತಾರೆ. ಅನೇಕ ಸಿನಿಮಾಗಳಲ್ಲಿ ಅಜಯ್ ದೇವಗನ್ ಈ ದೃಶ್ಯವನ್ನು ಮರುಸೃಷ್ಟಿ ಮಾಡಿದ್ದಾರೆ. ಆದರೆ, ಇದೀಗ ವೈರಲ್ ಆಗಿರುವ ವಿಡಿಯೋವೊಂದು ನಿಮ್ಮನ್ನು ಆಶ್ಚರ್ಯ ಚಕಿತಗೊಳಿಸುತ್ತದೆ. ಅಲ್ಲದೆ, ನಿಮ್ಮನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಎರಡು ಎಮ್ಮೆಗಳು ರಸ್ತೆಯಲ್ಲಿ ನಡೆದು ಬರುತ್ತಿರುವುದನ್ನು ನೋಡಬಹುದು. ಆದರೆ, ಜನರ ಗಮನ ಸೆಳೆದ ಸಂಗತಿ ಏನೆಂದರೆ, ಒಂದು ಎಮ್ಮೆಯ ಮೇಲೆ ಬಿಳಿ ಶ್ವಾನವೊಂದು ಅಜಯ್ ದೇವಗನ್ ಮಾದರಿಯಲ್ಲಿ ಕಾಲುಗಳನ್ನು ಇಟ್ಟುಕೊಂಡು ಬರುವ ಮೂಲಕ ಸಾಹಸ ಪ್ರದರ್ಶಿಸಿದೆ. ಎರಡು ಎಮ್ಮೆಗಳು ನೇರವಾಗಿ ಒಟ್ಟಿಗೆ ನಡೆಯುತ್ತಿದ್ದರೆ, ನಾಯಿಯು ಒಂದು ಎಮ್ಮೆಯ ಮೇಲೆ ನಿಂತಿರುವುದನ್ನು ಕಾಣಬಹುದು. ನಾಯಿಯು ಅಜಯ್ ದೇವಗನ್ ಅವರ ಸಾಂಪ್ರದಾಯಿಕ ಸಾಹಸಕ್ಕೆ ಒಂದು ಟ್ವಿಸ್ಟ್ ಅನ್ನು ಇಲ್ಲಿ ಪರಿಚಯಿಸಿದೆ.
ಈ ವಿಡಿಯೋದ ಮೂಲವನ್ನು ಖಚಿತಪಡಿಸಲು ಸಾಧ್ಯವಾಗದಿದ್ದರೂ, ಇದು ನೆಟ್ಟಿಗರ ಗಮನ ಸೆಳೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಬಗೆಬಗೆಯ ಕಾಮೆಂಟ್ ಮೂಲಕ ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅನೇಕರು ನಾಯಿಯ ಸಾಹಸವನ್ನು ಅಜಯ್ ದೇವಗನ್ ಸಾಹಸಕ್ಕೆ ಹೋಲಿಕೆ ಮಾಡಿದ್ದಾರೆ. ನಗುತ್ತಿರುವ ಎಮೋಜಿಗಳ ಮಹಾಪೂರವೇ ಹರಿದುಬಂದಿದೆ. (ಏಜೆನ್ಸೀಸ್)