

ಬೆಂಗಳೂರು: ಕರೊನಾ ನಿಯಂತ್ರಣಕ್ಕಾಗಿ ಮತ್ತೆ ಮತ್ತೆ ವಿಸ್ತರಣೆ ಮಾಡಲಾಗಿರುವ ಲಾಕ್ಡೌನ್ ಜೂ. 14ರ ಬಳಿಕವೂ ಪುನಃ ವಿಸ್ತರಣೆ ಆಗಲಿದೆಯೇ ಎಂಬ ಅನುಮಾನಗಳ ನಡುವೆಯೇ ಮತ್ತೊಂದು ಸಾಧ್ಯತೆಯೂ ಹೊರಬಿದ್ದಿದೆ. ಅದೇನೆಂದರೆ ನಿಗದಿತ ದಿನಾಂಕಕ್ಕೂ ಮೊದಲೇ ಲಾಕ್ಡೌನ್ ತೆರವಾಗುವ ಸಾಧ್ಯತೆಗಳೂ ನಿಚ್ಚಳವಾಗಿ ಕಾಣಿಸಲಾರಂಭಿಸಿವೆ.
ಸದ್ಯ ವಿಸ್ತರಣೆ ಮಾಡಲಾಗಿರುವ ಲಾಕ್ಡೌನ್ ಜೂ. 14ಕ್ಕೆ ಮುಗಿಯಲಿದೆ. ಮಾತ್ರವಲ್ಲ ರಾಜ್ಯದಲ್ಲಿ ವಿಸ್ತರಿತ ಲಾಕ್ಡೌನ್ನಿಂದಾಗಿ ಕರೊನಾ ಸೋಂಕಿತರ ಪ್ರಮಾಣಕ್ಕಿಂತ ಗುಣಮುಖರಾಗುವವರ ಸಂಖ್ಯೆಯೇ ಹೆಚ್ಚಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಜೂ.14ಕ್ಕೆ ಲಾಕ್ಡೌನ್ ಕೊನೆಯಾಗುವುದು ಖಚಿತ ಎಂಬಂತಾಗಿದೆ. ಇದಕ್ಕೆ ಪೂರಕವೆಂಬಂತೆ ಸಿಎಂ ಕೂಡ ಮೊನ್ನೆ ಹೇಳಿಕೆ ನೀಡಿದ್ದರು. ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.11.09ರಷ್ಟಿದ್ದು, ಅದು ಶೇ.05ಕ್ಕೆ ಬಂದರೆ ರಾಜ್ಯವನ್ನು ಅನ್ಲಾಕ್ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅವರು ತಿಳಿಸಿದ್ದರು.
ಆದರೆ ಇದೀಗ ಮತ್ತೊಂದು ಸಾಧ್ಯತೆ ಬಹಿರಂಗಗೊಂಡಿದ್ದು, ಲಾಕ್ಡೌನ್ ಜೂ. 14ಕ್ಕೂ ಮೊದಲೇ ಅಂತ್ಯಗೊಳ್ಳುವ ಲಕ್ಷಣಗಳು ಕಾಣಿಸಿವೆ. ಇದನ್ನು ಪುಷ್ಠೀಕರಿಸುವ ನಿಟ್ಟಿನಲ್ಲಿ ಕೆಎಸ್ಆರ್ಟಿಸಿಯಲ್ಲಿನ ಬೆಳವಣಿಗೆಗಳು ಕಂಡುಬಂದಿವೆ. ಅದೇನೆಂದರೆ ಜೂ. 8ರಿಂದಲೇ ಕೆಎಸ್ಆರ್ಟಿಸಿ ಬಸ್ಗಳು ಸಂಚರಿಸಲಿವೆ. ಅದಕ್ಕಾಗಿ ಮುಂಚಿತವಾಗಿ ಆನ್ಲೈನ್ ಬುಕಿಂಗ್ಗೆ ಅವಕಾಶ ನೀಡಿರುವ ಕೆಎಸ್ಆರ್ಟಿಸಿ, ಜೂ. 8ರಂದೇ ಬಸ್ಗಳು ರಸ್ತೆಗಿಳಿಯುವುದು ಪಕ್ಕಾ ಎಂಬ ಮಾಹಿತಿ ಬಿಟ್ಟುಕೊಟ್ಟಿದೆ. ಈ ಮೂಲಕ ಜೂ. 8ರಂದೇ ರಾಜ್ಯ ಅನ್ಲಾಕ್ ಆಗುವ ಸುಳಿವು ಹೊರಬಿದ್ದಿದ್ದು, ಅಂದೇ ಲಾಕ್ಡೌನ್ ಮುಕ್ತಾಯಗೊಂಡರೂ ಅಚ್ಚರಿ ಏನಿಲ್ಲ.