ವೈಶಿಷ್ಟ್ಯಕ್ಕೆ ಸಾಕ್ಷಿಯಾದ ದೊಡ್ಡ ಸೋಮನಹಳ್ಳಿ

3 RMN-MGD P5
Published on

*ವಿದ್ಯಾವಂತರ ಊರಲ್ಲಿ ನ್ಯಾಯ ಪಂಚಾಯಿತಿಯೇ ಪ್ರಧಾನ

* ಸರ್ಕಾರಿ ಉದ್ಯೋಗಕ್ಕೂ ಸೈ, ಕೃಷಿಗೂ ಜೈ ಎನ್ನುವ ಜನ

ಎಂ.ಎಸ್.ಸಿದ್ದಲಿಂಗೇಶ್ವರ ಮಾಗಡಿ

ಆಧುನಿಕತೆ ಎಷ್ಟೇ ಬೆಳೆದರೂ ಬಹುತೇಕ ಗ್ರಾಮಗಳು ಇಂದಿಗೂ ವಿಶಿಷ್ಟ ಇತಿಹಾಸವನ್ನು ಜೀವಂತವಾಗಿಟ್ಟುಕೊಂಡಿವೆ. ಅಂತೆಯೇ, ಹಲವು ವೈಶಿಷ್ಟದಿಂದ ತಾಲೂಕಿನ ದೊಡ್ಡಸೋಮನಹಳ್ಳಿ ಗಮನ ಸೆಳೆಯುತ್ತಿದೆ.

ಮಾಗಡಿಯಿಂದ 12 ಕಿಮೀ ದೂರದ ಕುಣಿಗಲ್ ಮುಖ್ಯರಸ್ತೆಯ ಹೊಸಪಾಳ್ಯದಿಂದ ಬಲಕ್ಕೆ ತಿರುಗಿದರೆ ಪುರಾತನ ಕಾಲದ ಗ್ರಾಮ ದೊಡ್ಡಸೋಮನಹಳ್ಳಿ ಸಿಗುತ್ತದೆ. ಈ ಹಳ್ಳಿ ದೇವಗಣದ ಬೀಡಾಗಿರುವುದೇ ವಿಶೇಷ.

ವಿಜಯನಗರ ಸಾಮಾಜ್ಯದ ಸೋಮ ಎಂಬುವರು ಈ ಗ್ರಾಮದಲ್ಲಿ ನೆಲೆಸಿದ್ದರಿಂದ ಸೋಮನಹಳ್ಳಿ ಎನ್ನಲಾಗುತ್ತಿದೆ ಎಂಬುದು ಹಿರಿಯರ ಮಾತು. ಈ ಗ್ರಾಮ ವಿಸ್ತಾರವಾಗಿರುವ ಜತೆಗೆ ದೊಡ್ಡ ದೊಡ್ಡ ಗೌಡ ಮನೆತನದವರೇ ಹೆಚ್ಚಾಗಿದ್ದ ಕಾರಣದಿಂದ ಈ ಗ್ರಾಮಕ್ಕೆ ದೊಡ್ಡ ಎಂಬ ಪದ ತಳುಕು ಹಾಕಿಕೊಂಡು ದೊಡ್ಡ ಸೋಮನಹಳ್ಳಿ ಎಂದೇ ಕರೆಯಲಾಗುತ್ತಿದೆ. ಈ ಗ್ರಾಮದಿಂದ ವಲಸೆ ಹೋದವರು ಮರಿಸೋಮನಹಳ್ಳಿ, ಚಿಕ್ಕಬಸವಯ್ಯನಪಾಳ್ಯ, ರಂಗೇಗೌಡನಪಾಳ್ಯ ಎಂದು ಹೆಸರಿಟ್ಟಿಕೊಂಡು ನೆಲೆಸಿದ್ದಾರೆ. ಗ್ರಾಮದಲ್ಲಿ 250ಕ್ಕೂ ಹೆಚ್ಚು ಮನೆಗಳಿದ್ದು 1,200ಕ್ಕೂ ಹೆಚ್ಚು ಮತದಾರರಿದ್ದಾರೆ. ಹೆಚ್ಚು ಒಕ್ಕಲು ಮನೆತನದವರಿರುವ ಗ್ರಾಮದಲ್ಲಿ ಪರಿಶಿಷ್ಟ ಜಾತಿ, ವಿಶ್ವಕರ್ಮ, ಕುರುಬರು, ಸವಿತಾ ಸಮಾಜ, ಒಕ್ಕಲಿಗ ಜನಾಂಗ ಸೇರಿ ಎಲ್ಲ ಸಮುದಾಯದವರು ಐಕ್ಯತೆ, ಪ್ರೀತಿ, ವಿಶ್ವಾಸದಿಂದ ಬದುಕು ಸಾಗಿಸುತ್ತಿದ್ದಾರೆ.

ಅದ್ದೂರಿ ಜಾತ್ರೆ

ಗ್ರಾಮದಲ್ಲಿ ಪುರಾತನ ಬ್ರಹ್ಮಲಿಂಗೇಶ್ವರ, ಬಸವಣ್ಣ, ಆಂಜನೇಯ, ಪಾರ್ವತಿ ದೇವಿ, ವೀರಮಾಸ್ತಮ್ಮ, ಬಿಲ್ಲಿಕೋಟಮ್ಮ, ಶನೈಶ್ಚರ, ಮುನೇಶ್ವರ ಮುಂತಾದ ದೇವಾಲಯಗಳಿದ್ದು, ಈ ಎಲ್ಲ ದೇವಾಲಯಗಳಲ್ಲಿ ಒಟ್ಟಾಗಿ ಮೂರು ದಿನಗಳವರೆಗೆ ಅದ್ದೂರಿಯಾಗಿ ಜಾತ್ರಾಮಹೋತ್ಸವಗಳು ನಡೆಯುವುದು ವಿಶೇಷ.

ಗ್ರಾಮದ ಬಳಿ 41 ಅಡಿ ಎತ್ತರದ ಆಂಜನೇಯ ಪ್ರತಿಮೆ ಇರುವುದು ವಿಶೇಷ. ಈ ಹಿಂದೆ ಬ್ರಹ್ಮಲಿಂಗೇಶ್ವರ ದೇವಾಲಯದ ಆವರಣದಲ್ಲಿ ಮರಳಿನ ಮೇಲೆ ಅಕ್ಷರಾಭ್ಯಾಸ ನಡೆಯುತ್ತಿತ್ತು. ಕಾಲ ಕ್ರಮೇಣ ಈ ಪದ್ಧತಿ ಸ್ಥಗಿತವಾಗಿದ್ದು, ಇದನ್ನು ಮುಂದುವರಿಸಲು ಗ್ರಾಮದ ಹಿರಿಯರು ಮುಂದಾಗಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಸೇವೆ

ಗ್ರಾಮದಲ್ಲಿ ಬಹುತೇಕ ಮಂದಿ ವಿದ್ಯಾವಂತರಿದ್ದು, ಶಿಕ್ಷಕರು, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಇಂಜಿನಿಯರ್ ವೃತ್ತಿಯಲ್ಲಿದ್ದಾರೆ. ಸಚಿವಾಲಯದ ನೌಕರರು ಇದ್ದು, ಗ್ರಾಮದಲ್ಲಿ 50ಕ್ಕೂ ಹೆಚ್ಚು ಮಂದಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ವಿಶೇಷ. ವಿದ್ಯಾವಂತ ಯುವಜನರು ಪಶುಸಂಗೋಪನೆ, ಹೂವು, ಹಣ್ಣು, ತೆಂಗು, ಅಡಕೆ, ಮಾವು ಸೇರಿ ಇತರ ಬೆಳೆ ಬೆಳೆಯುವ ಮೂಲಕ ಕೃಷಿಯಲ್ಲೂ ಸಾಧನೆ ಮಾಡಿದ್ದಾರೆ.

ಭಜನೆ ಮನೆ

ಗ್ರಾಮದಲ್ಲಿ ಈ ಮೊದಲು ಭಜನೆ ಮನೆ ಇತ್ತು. ವಿಶೇಷ ದಿನಗಳಲ್ಲಿ ಗ್ರಾಮಸ್ಥರು ಭಜನೆ ನಡೆಸುತ್ತಿದ್ದರು. ಆದರೆ, ಈಗ ಶಿಥಿಲವಾಗಿದ್ದು, ಪುನಶ್ಚೇತನಗೊಳಿಸಲು ಚುನಾಯಿತ ಪ್ರತಿನಿಧಿಗಳು, ಗ್ರಾಮಸ್ಥರು ಮುಂದಾಗಿದ್ದಾರೆ.

ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ, ಹಾಲಿನ ಡೇರಿ, ಅಂಚೆ ಕಚೇರಿ, ವಿಎಸ್ಸೆಸ್ಸೆನ್ ಸಂಘ, ಸಮೃದ್ಧಿ ಗ್ರಾಮಾಣಾಭಿವೃದ್ಧಿ ಸಂಸ್ಥೆ ಇವೆ.

ಸ್ಥಳೀಯವಾಗಿಯೇ ವ್ಯಾಜ್ಯ ಇತ್ಯರ್ಥ

ಗ್ರಾಮದಲ್ಲಿ ಸಣ್ಣ ಪುಟ್ಟ ವ್ಯಾಜ್ಯಗಳು ನಡೆದರೆ ಪೊಲೀಸ್ ಠಾಣೆ ಮೆಟ್ಟಿಲು ಹತ್ತದೆ ಗ್ರಾಮದ ಹಿರಿಯರ ಸಮ್ಮುಖದಲ್ಲಿ ನ್ಯಾಯ ಪಂಚಾಯಿತಿ ಮೂಲಕ ಇತ್ಯರ್ಥ ಪಡಿಸಿಕೊಳ್ಳುವ ಪೂರ್ವಿಕರ ಕಾಲದ ಪದ್ಧತಿ ಇಂದಿಗೂ ಜೀವಂತವಾಗಿದೆ.

ಗ್ರಾಮದ ಬಳಿ ದೊಡ್ಡದಾದ ಕೆರೆ ಇದ್ದು, ಈ ಕೆರೆ ದಿನೇ ದಿನೆ ಒತ್ತುವರಿಯಾಗುತ್ತಿದ್ದು, ಈ ಒತ್ತುವರಿಯನ್ನು ತೆರವುಗೊಳಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಗ್ರಾಮದಲ್ಲಿ ಸಾಕಷ್ಟು ರಾಜಕಾರಣಿಗಳಿದ್ದು ಅವರು ತಾಲೂಕು ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಅದರಂತೆ ತಾಲೂಕು ಹಾಗೂ ಗ್ರಾಮದ ರಾಜಕಾರಣಕ್ಕೂ ನಂಟು ಬೆಳೆದಿದ್ದು, ಗ್ರಾಮ ಸಾಕಷ್ಟು ಅಭಿವೃದ್ಧಿ ಹೊಂದಿದೆ.

ದೊಡ್ಡ ಸೋಮನಹಳ್ಳಿ ಗ್ರಾಮ ಮಾಗಡಿ ತಾಲೂಕಿನಲ್ಲಿ ಸಾಕಷ್ಟು ಪ್ರಸಿದ್ಧಿ ಹೊಂದಿದೆ. ಗ್ರಾಮದ ರಾಜಕೀಯ ಮುಖಂಡರು ಪಕ್ಷಾತೀತವಾಗಿ ಗ್ರಾಮದ ಒಳಿತಿಗೆ ಸಹಕರಿಸಿದರೆ ಮತ್ತಷ್ಟು ಅಭಿವೃದ್ಧಿಗೆ ಸಾಕ್ಷಿಯಾಗಲಿದೆ.ಡಿ.ಬಿ. ಗಂಗಾಧರ್, ಶಿಕ್ಷಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net