ಹಲ್ಲೆಕೋರರಿಂದ ತುಂಡಾಗಿದ್ದ ಎಎಸ್ಐ ಕೈ ಯಶಸ್ವಿ ಮರುಜೋಡಣೆ: ವೈದ್ಯರಿಂದ ಸತತ ಏಳೂವರೆ ತಾಸು ಶಸ್ತ್ರಚಿಕಿತ್ಸೆ

ASI
Published on

ಪಟಿಯಾಲಾ: ಸಿಖ್ಖರ ನಿಹಾಂಗ್​ ಪಂಗಡದ ಅನುಯಾಯಿಗಳ ಮಾರಣಾಂತಿಕ ಹಲ್ಲೆಯಿಂದ ತುಂಡಾಗಿದ್ದ ಎಎಸ್​ಐ ಕೈಯನ್ನು ವೈದ್ಯರು ಯಶಸ್ವಿಯಾಗಿ ಮರುಜೋಡಣೆ ಮಾಡಿದ್ದಾರೆ.

ಚಂಡಿಗಢ್​ನ ಸ್ನಾತಕೋತ್ತರ ವೈದ್ಯಕೀಯ ಸಂಸ್ಥೆಯ (ಪಿಜಿಐ) ವೈದ್ಯರು ಸತತ ಏಳೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ತುಂಡಾಗಿದ್ದ ಎಡಗೈಯನ್ನು ಮರುಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತರಕಾರಿ ಮಾರುಕಟ್ಟೆಯಲ್ಲಿ ಕರ್ತವ್ಯದಲ್ಲಿದ್ದ 50 ವರ್ಷದ ಎಎಸ್​ಐ ಹರ್ಜಿತ್​ ಸಿಂಗ್​ ಮೇಲೆ ದಾಳಿ ನಡೆಸಿದ್ದ ನಿಹಾಂಗ್​ಗಳು ಅವರ ಎಡಗೈಯನ್ನು ಕತ್ತರಿಸಿ ಹಾಕಿದ್ದರು.

ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರೊಂದಿಗೆ ಮಾತುಕತೆ ನಡೆಸಿದ್ದೇನೆ. ಕೈಯನ್ನು ಯಶಸ್ವಿಯಾಗಿ ಮರುಜೋಡಿಸಲಾಗಿದೆ ಎಂದು ತಿಳಿಸಿದ್ದಾರೆ. ಜತೆಗೆ, ಹರ್ಜಿತ್​ ಸಿಂಗ್​ ಜತೆಗೂ ಮಾತನಾಡಿದ್ದು, ಅವರು ಕೂಡ ಲವಲವಿಕೆಯಿಂದ ಇದ್ದಾರೆ. ಅವರು ಇನ್ನೂ ಐದು ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಇರಬೇಕಾಗುತ್ತದೆ ಎಂದು ಪಂಜಾಬ್​ ಡಿಜಿಪಿ ದಿನಕರ್​ ಗುಪ್ತಾ ಹೇಳಿದ್ದಾರೆ.

ಘಟನೆ ಹಿನ್ನೆಲೆ: ಭಾನುವಾರ ಬೆಳಗ್ಗೆ ಪಟಿಯಾಲಾದ ತರಕಾರಿ ಮಾರುಕಟ್ಟೆಯಲ್ಲಿ ಹರ್ಜಿತ್​ ಸಿಂಗ್​ ಹಾಗೂ ಮಾರುಕಟ್ಟೆ ಸಿಬ್ಬಂದಿ ಜತೆ ಕರ್ತವ್ಯದಲ್ಲಿದ್ದರು. ಅಲ್ಲಿಗೆ ಬಂದ ನಿಹಾಂಗ್​ಗಳ ಗುಂಪನ್ನು ತಡೆದ ಸಿಬ್ಬಂದಿಯೊಬ್ಬ ಪಾಸ್​ ನೀಡುವಂತೆ ಕೇಳಿದ್ದಾರೆ. ಪಂಜಾಬ್​ನಲ್ಲಿ ಕರೊನಾ ಹಿನ್ನೆಲೆ ಕಫ್ಯೂ ವಿಧಿಸಲಾಗಿದ್ದು, ಜನರು ಹೊರಗೆ ಬರಲು ಪಾಸ್​ ಅಗತ್ಯವಾಗಿದೆ. ಆದರೆ, ಪಾಸ್​ ಹೊಂದಿಲ್ಲದ ಗುಂಪಿಗೆ ಪ್ರವೇಶ ನಿರಾಕರಿಸಿದಾಗ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಮಾರುಕಟ್ಟೆಗೆ ನುಗ್ಗಿದ್ದಾರೆ. ಅವರನ್ನು ತಡೆದ ಹರ್ಜಿತ್​ ಸಿಂಗ್​​ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಗುಂಪು ಅವರ ಎಡಗೈಯನ್ನು ಕತ್ತರಿಸಿತ್ತು. ಬಳಿಕ ಸಮೀಪದ ಹಳ್ಳಿಯ ಗುರುದ್ವಾರದಲ್ಲಿ ಅಡಗಿದ್ದ ಹಲ್ಲೆಕೋರರನ್ನು ಭಾರಿ ಪೊಲೀಸ್​ ಪಡೆ ಬಳಸಿ ಬಂಧಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net