ಮನೆ ಬಾಗಿಲಿಗೆ ಬರಲಿದ್ದಾರೆ ಡಾಕ್ಟರ್: ಎಂಟು ಜಿಲ್ಲೆಗಳಲ್ಲಿ ಪ್ರಾಯೋಗಿಕ ಅನುಷ್ಠಾನ

Doctor
Published on

ಬೆಳಗಾವಿ: ಪ್ರತಿಯೊಬ್ಬರ ಆರೋಗ್ಯ ತಪಾಸಣೆಗಾಗಿ ಮನೆ ಬಾಗಿಲಿಗೆ ವೈದ್ಯರನ್ನು ಕಳುಹಿಸುವ ಗೃಹ ಆರೋಗ್ಯ ಯೋಜನೆ ಮತ್ತು ಆಶಾಕಿರಣ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ತಿಳಿಸಿದರು.

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ಷಾಂತ್ಯದ ಒಳಗಾಗಿ ಗೃಹ ಆರೋಗ್ಯ ಯೋಜನೆ ಮತ್ತು ಆಶಾಕಿರಣ ಯೋಜನೆಗಳನ್ನು ತಲಾ ಎಂಟು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ನಂತರ ಎಲ್ಲ ಜಿಲ್ಲೆಗಳಿಗೆ ವಿಸ್ತರಣೆ ಮಾಡಲಾಗುವುದು. ಅದಕ್ಕಾಗಿ ಪ್ರತ್ಯೇಕ ವೈದ್ಯಕೀಯ ಸಿಬ್ಬಂದಿ ತಂಡ ಕೂಡ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಜನರಿಗೆ ಉಚಿತವಾಗಿ ಎಂಆರ್​ಐ ಮತ್ತು ಸಿಟಿ ಸ್ಕ್ಯಾನ್ ಸೌಲಭ್ಯ ತಲುಪುತ್ತಿಲ್ಲ. ಅಲ್ಲದೆ, ನಿರ್ವಹಣೆ ಇತರೆ ಕಾರಣಗಳಿಂದ ಕೆಲವು ಕಡೆ ಬಂದ್ ಆಗಿವೆ. ಈ ಹಿನ್ನೆಲೆಯಲ್ಲಿ ಅವುಗಳ ನಿರ್ವಹಣೆ, ದಿನದ 24 ಗಂಟೆಗಳ ಕಾರ್ಯನಿರ್ವಹಿಸಲು ಹೊಸ ಏಜೆನ್ಸಿಗಳಿಗೆ ಜವಾಬ್ದಾರಿ ನೀಡಲಾಗುತ್ತಿದೆ. ಅಲ್ಲದೆ ಎಲ್ಲೆಲ್ಲಿ ಎಂಆರ್​ಐ ಮತ್ತು ಸಿಟಿ ಸ್ಕ್ಯಾನ್ ಅವಶ್ಯಕತೆ ಇದೆಯೋ ಅಲ್ಲಿ ಹೊಸದಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಒಟ್ಟಿನಲ್ಲಿ ಮುಂದಿನ 4 ತಿಂಗಳ ಅವಧಿಯಲ್ಲಿ ಅಧಿಕೃತವಾಗಿ ಕಾರ್ಯಾರಂಭ ಮಾಡಲಿವೆ. ಡಯಾಲಿಸಿಸ್ ನಿರ್ವಹಣೆಯನ್ನು ಖಾಸಗಿ ಏಜೆನ್ಸಿಗೆ ನೀಡಲಾಗುತ್ತಿದೆ. 104 ಸಹಾಯವಾಣಿ ಮರು ಆರಂಭಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ದಕ್ಷಿಣ ಭಾರತ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕ ಆರೋಗ್ಯ ವಲಯದಲ್ಲಿ ಬಹಳ ಹಿಂದೆ ಉಳಿದಿದೆ. ಆರೋಗ್ಯ ಕ್ಷೇತ್ರ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಜಿಲ್ಲಾ, ತಾಲೂಕು, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲಾಗುತ್ತಿದೆ. ಅಲ್ಲದೆ, ಖಾಲಿ ಉಳಿದಿರುವ ಹುದ್ದೆಗಳು, ತಜ್ಞ, ಎಂಬಿಬಿಎಸ್ ವೈದ್ಯರು ನೇಮಕ ಮಾಡಿಕೊಳ್ಳಲು ನಿರ್ದೇಶನ ನೀಡಲಾಗಿದೆ ಎಂದು ವಿವರಿಸಿದರು.

ವಿಜಯವಾಣಿ ವರದಿ ಉಲ್ಲೇಖ: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಸಚಿವ ದಿನೇಶ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೆಳಗಾವಿ ವಿಭಾಗೀಯ ಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ ‘ರಾಜ್ಯದ ನಂ-1 ದಿನಪತ್ರಿಕೆ ವಿಜಯವಾಣಿಯಲ್ಲಿ ಬುಧವಾರ ಪ್ರಕಟವಾಗಿದ್ದ ‘ಸರ್ಕಾರಿ ಆಸ್ಪತ್ರೆ ಸ್ಥಿತಿ ದಯನೀಯ’ ಎಂಬ ವಿಶೇಷ ವರದಿಯ ಗಮನ ಸೆಳೆದಿದೆ. ಅಲ್ಲದೆ, ಈ ಕುರಿತು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ಕೇಳಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net