30 ಲಕ್ಷ ರೂ. ಸಾಲದ ಹೊರೆ! ದಿಢೀರ್​ ಹಣ, ವಿಮೆ ಪಡೆಯಲು ಅಮಾಯಕನ ಜೀವವನ್ನೇ ಬಲಿಕೊಟ್ಟ ವೈದ್ಯ | Fakes Death

ವಿಜಯವಾಣಿ (10)
Published on

Fakes Death: ಆ ಸಾಲ, ಈ ಚೀಟಿ ಎಂದು ತಲೆ ಮೇಲೆ 30 ಲಕ್ಷ ರೂ.ಗಳ ಸಾಲದ ಹೊರೆ ಹೊತ್ತುಕೊಂಡಿದ್ದ ವೈದ್ಯನೊಬ್ಬ, ಸಾಲದವರ ಕಾಟ ತಾಳಲಾರದೆ ಹಾಗೂ ಬಹಳ ಬೇಗ ಮತ್ತು ಸುಲಭವಾಗಿ ಹಣ ಪಡೆಯುವ ದುರಾಸೆಯಿಂದ ತನ್ನ ಸಾವನ್ನೇ ನಕಲಿ ಮಾಡಿದ ಭಯಾನಕ ಘಟನೆ ಉತ್ತರ ಪ್ರದೇಶದ ಸಹರಾನ್ಪುರ್​ನಲ್ಲಿ ವರದಿಯಾಗಿದೆ.

ಮಾಸ್ಟರ್​ಪ್ಲಾನ್​ಗೆ ಅಮಾಯಕ ಬಲಿ

ತಾನು ಅಪಘಾತದಲ್ಲಿ ಸಾವನ್ನಪ್ಪಿದರೆ ವಿಮೆಯ ಹಣವನ್ನು ಪಡೆಯಬಹುದು ಎಂಬ ಕೆಟ್ಟ ಯೋಚನೆಗೆ ಇಳಿದ ಕಿರಾತಕ ವೈದ್ಯ, ಈ ಕೃತ್ಯ ಎಸಗಲು ಕ್ರೈಂ ಶೋ ಸಿಐಡಿ ನೋಡಿ ಪ್ರೇರಿತನಾಗಿದ್ದಾನೆ ಎಂಬುದು ಪೊಲೀಸರ ತನಿಖೆಯಲ್ಲಿ ಬಟಾಬಯಲಾಗಿದೆ. ಹಲವು ದಿನಗಳಿಂದ ಸಾಲಗಾರರ ಕೈಯಿಂದ ತಪ್ಪಿಸಿಕೊಳ್ಳಲು ಹಾಗೂ ಸುಲಭವಾಗಿ ಅಡ್ಡದಾರಿಯಿಂದ ಹಣ ಸಂಪಾದಿಸುವತ್ತ ಹೆಚ್ಚು ತಲೆಕೆಡಿಸಿಕೊಂಡಿದ್ದ ಈತ, ತನ್ನೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನೇ ಮಾಸ್ಟರ್​ಪ್ಲಾನ್​ಗೆ ಬಲಿ ಕೊಟ್ಟಿರುವುದು ಸದ್ಯ ಪೊಲೀಸರನ್ನೇ ಬೆಚ್ಚಿಬೀಳಿಸಿದೆ.

ವೈದ್ಯೋ ನಾರಾಯಣೋ ಹರಿಃ

ವೈದ್ಯೋ ನಾರಾಯಣೋ ಹರಿಃ ಎಂಬ ಮಾತನ್ನು ನಂಬಿರುವ ಜನರ ನಡುವೆ ಇಲ್ಲೊಬ್ಬ ವೈದ್ಯ ಮಾತ್ರ ತನ್ನ ಸಾವನ್ನೇ ನಕಲಿ ಮಾಡಿದರೆ, ಅದರಿಂದ ಬರುವ ಇನ್ಶೂರೆನ್ಸ್​ ಹಣವನ್ನು ಸಾಲಗಾರರಿಗೆ ಕೊಟ್ಟು, ನಾನು ಎಲ್ಲಾದರೂ ಬೇರೆ ಊರಿನಲ್ಲಿ ವಾಸ್ತವ್ಯ ಹೂಡುವ ಪ್ಲ್ಯಾನ್ ಮಾಡಿದ್ದು ದುರಂತ. ಇದಕ್ಕಾಗಿ ಅಮಾಯಕ ಸ್ನೇಹಿತನ ಜೀವವನ್ನೇ ಬಲಿ ಕೊಟ್ಟಿರುವ ಈತ, ತನ್ನ ಕಾರಿನಲ್ಲಿ ಆತನನ್ನು ಜೀವಂತವಾಗಿ ಕೂರಿಸಿ, ಸುಟ್ಟುಹಾಕಿದ್ದಾನೆ. ಈ ಘಟನೆ ಮೇರೆಗೆ ಶನಿವಾರ (ಡಿ.28) ಆರೋಪಿಯನ್ನು ಬಂಧಿಸಿರುವ ಪೊಲೀಸರು, ತನಿಖೆಯಲ್ಲಿ ಹಲವು ವಿಷಯಗಳನ್ನು ಬಯಲಿಗೆಳೆದಿದ್ದಾರೆ.

ವಿಮೆ ಹಣ

"ಆರೋಪಿ ಡಾ. ಮುಬಾರಕ್ ವೈಯಕ್ತಿಕ ಸಾಲ ಮತ್ತು ವಿಮಾ ಕಂತುಗಳು ಸೇರಿದಂತೆ ಸುಮಾರು 30 ಲಕ್ಷ ರೂಪಾಯಿ ಸಾಲವನ್ನು ಪಡೆದಿದ್ದ. ಇದರಿಂದ ತೀವ್ರ ಆರ್ಥಿಕ ತೊಂದರೆಗಳಿಗೆ ಸಿಲುಕಿದ್ದ. ಸಾಲದ ಶೂಲದಿಂದ ಪಾರಾಗಲು ಹಂತ ಹಂತವಾಗಿ ಪ್ಲ್ಯಾನ್ ಮಾಡಿದ ಈತ, ಕ್ರೈಂ ಶೋ ಸಿಐಡಿಯಿಂದ ಪ್ರೇರಿತನಾಗಿದ್ದ. ತನ್ನ ಸಾವನ್ನೇ ನಕಲಿ ಮಾಡಿದರೆ, ಅದರಿಂದ ವಿಮೆ ಹಣ ಎಲ್ಲವನ್ನೂ ಹೆಂಡತಿ ಪಡೆಯುತ್ತಾಳೆ. ಆ ನಂತರ ಎಲ್ಲಿಯಾದರೂ ದೂರದಲ್ಲಿ ವಾಸವಿರಲು ಆತ ಯೋಜಿಸಿದ್ದ. ಈ ಪ್ಲ್ಯಾನ್​ಗೆ ಒಂದು ದೇಹ ಬೇಕಿತ್ತು. ಅದಕ್ಕಾಗಿ ತನ್ನ ಮನೆಗೆ ಆಗಾಗ್ಗೆ ಬರುತ್ತಿದ್ದ ಸೋನು ಎಂಬಾತನಿಗೆ ಮದ್ಯದಲ್ಲಿ ನಿದ್ರೆ ಬರುವ ಮಾತ್ರೆಯನ್ನಿಟ್ಟು, ಕಂಠಪೂರ್ತಿ ಕುಡಿಸಿದ್ದಾನೆ" ಎಂದು ಪೊಲೀಸ್ ಅಧಿಕಾರಿ ಘಟನೆಯನ್ನು ವಿವರಿಸಿದ್ದಾರೆ.

ಶ್ರೀಮಂತನಾಗುವ ಆಸೆ

ಡಿಸೆಂಬರ್ 22ರ ಸಂಜೆ ಡಾ. ಮುಬಾರಕ್, ಮದ್ಯದ ಮತ್ತಿನಲ್ಲಿ ನಿದ್ರೆಗೆ ಜಾರಿದ್ದ ಸೋನುನನ್ನು ತನ್ನ ಕಾರಿನಲ್ಲಿ ಕೂರಿಸಿ, ಯಮುನಾ ಕಾಲುವೆಯ ಬಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಕಾರಿಗೆ ಪೆಟ್ರೋಲ್ ಸುರಿದು, ಆತನನ್ನು ಜೀವಂತವಾಗಿ ಸುಟ್ಟುಹಾಕಿದ್ದಾನೆ. ಈ ವೇಳೆ ಸೋನು ಕುಟುಂಬಸ್ಥರು ವೈದ್ಯನ ಕೈವಾಡವನ್ನು ಶಂಕಿಸಿ, ಮಗನ ನಾಪತ್ತೆ ಕೇಸ್​ ದಾಖಲಿಸಿದ ಬಳಿಕ ನಾವು ಮುಬಾರಕ್​ನನ್ನು ವಶಕ್ಕೆ ಪಡೆದು ವಿಚಾರಿಸಿದೆವು. ಅಲ್ಲಿ ಆತ ತನ್ನ ತಪ್ಪೊಪ್ಪಿಕೊಂಡ. ವಿಚಾರಣೆ ವೇಳೆ ಆತ, ನಾನು ಬೇಗನೆ ಶ್ರೀಮಂತನಾಗಬೇಕೆಂದು ಬಯಸಿದ್ದೆ. ಜತೆಗೆ ಸಾಲದ ಹಣವನ್ನು ಮರುಪಾವತಿ ಮಾಡಲು ನನಗೆ ಯಾವ ಮಾರ್ಗವು ತಿಳಿಯಲಿಲ್ಲ. ಹೀಗಾಗಿ ನನ್ನ ಸಾವನ್ನೇ ನಕಲಿ ಮಾಡಲು ಮುಂದಾದೆ ಎಂದು ಹೇಳಿರುವುದಾಗಿ ಪೊಲೀಸರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net