

ನವದೆಹಲಿ: ಮಾನವ ಅಂಗಾಂಗಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. ಹೀಗಾಗಿಯೇ ಅದಕ್ಕೆ ಸಂಬಂಧಿಸಿದ ಗ್ರಾಫಿಕ್ಸ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬಹುಬೇಗನೇ ಜನರನ್ನು ಸೆಳೆದುಬಿಡುತ್ತದೆ.
ಇದೀಗ ಅಂಥದ್ದೇ ವಿಡಿಯೋವೊಂದು ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದೆ. ಆ್ಯಪ್ಸರ್ಕಲ್ ಸಂಸ್ಥಾಪಕ, ಉದ್ಯಮಿ ತನ್ಸು ಯೆಜೆನ್ ಅವರು ಒಂದು ವರ್ಷದ ಹಿಂದೆ ಶೇರ್ ಮಾಡಿಕೊಂಡಿದ್ದ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.
ವೈರಲ್ ಆಗಿರುವ ವಿಡಿಯೋ, ನಾವು ಉಸಿರಾಡಿದಾಗ ನಮ್ಮ ಹೃದಯ ಮತ್ತು ಶ್ವಾಸಕೋಶ ಯಾವ ರೀತಿ ಕೆಲಸ ಮಾಡುತ್ತವೆ ಎಂಬುದನ್ನು ತೋರಿಸುತ್ತದೆ. ನಾವು ಉಸಿರಾಡಿದಾಗ ಎರಡೂ ಶ್ವಾಸಕೋಶಗಳು ಉಬ್ಬುತ್ತವೆ. ಇದರಿಂದ ಎದೆಯ ಭಾಗ ವಿಸ್ತರಗೊಳ್ಳುತ್ತದೆ ಮತ್ತು ಹೊಟ್ಟೆ ಉಬ್ಬುತ್ತದೆ.
ಈ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದು, ಸಾವಿರಾರು ಮಂದಿ ಕಾಮೆಂಟ್ ಮಾಡಿದ್ದಾರೆ. ನಾವು ಉಸಿರಾಡಿದಾಗ ಹೊಟ್ಟೆ ಏಕೆ ಉಬ್ಬುತ್ತದೆ ಎಂಬುದು ನನಗೀಗ ತಿಳಿಯಿತು ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಹೀಗೆ ಸಾಕಷ್ಟು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ವಿಡಿಯೋ ನೋಡಿದ್ರೆ ನಿಮಗೆ ಏನು ಅನಿಸುತ್ತದೆ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ. (ಏಜೆನ್ಸೀಸ್)