ಶಿಲೀಂಧ್ರ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಏನು ಮಾಡಬೇಕು, ಮಾಡಬಾರದು, ಇಲ್ಲಿದೆ ಮಾಹಿತಿ..

Black Fungus
Published on

ನವದೆಹಲಿ: ಮಹಾರಾಷ್ಟ್ರ, ಕರ್ನಾಟಕ ಸಹಿತ ಹಲವು ರಾಜ್ಯಗಳಲ್ಲಿ ಕರೊನಾದಿಂದ ಚೇತರಿಕೆ ಕಂಡ ವ್ಯಕ್ತಿಗಳಲ್ಲಿ ಪತ್ತೆಯಾಗುತ್ತಿರುವ ಮಾರಣಾಂತಿಕ ಕಪು್ಪ ಶಿಲೀಂಧ್ರ ಸೋಂಕು (ಬ್ಲಾ್ಯಕ್ ಫಂಗಸ್) ಆತಂಕ ಮೂಡಿಸಿರುವ ಬೆನ್ನಲ್ಲೇ, ಕೇಂದ್ರ ಆರೋಗ್ಯ ಸಚಿವಾಲಯ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಬ್ಲಾ್ಯಕ್ ಫಂಗಸ್ ಸೋಂಕಿನಿಂದ ಮಹಾರಾಷ್ಟ್ರದಲ್ಲಿ ಈವರೆಗೆ 52 ಜನರು ಮೃತಪಟ್ಟಿದ್ದಾರೆಂದು ಆರೋಗ್ಯ ಇಲಾಖೆ ತಿಳಿಸಿದೆ. ಪುಣೆಯಲ್ಲಿ 270 ಇಂಥ ಪ್ರಕರಣಗಳು ಪತ್ತೆಯಾಗಿವೆ. ದುರ್ಬಲ ಆರೋಗ್ಯ ಅಥವಾ ರೋಗ ಪ್ರತಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಈ ಸೋಂಕು ಹೆಚ್ಚಾಗಿ ಕಂಡುಬರುತ್ತದೆ. ಕೋವಿಡ್ ಸೋಂಕು ತಗುಲಿದ ಮಧುಮೇಹಿಗಳ ಶರೀರದಲ್ಲಿ ಇದು ಬೇಗ ಪತ್ತೆಯಾಗುತ್ತಿದೆ. ಸಾಮಾನ್ಯವಾಗಿ ಕೋವಿಡ್ ಚಿಕಿತ್ಸೆ ಪಡೆದ ಎರಡು ಅಥವಾ ಮೂರು ವಾರ ನಂತರ ಇದು ಬಹಿರಂಗವಾಗುತ್ತದೆ. ಕೋವಿಡ್ ಚಿಕಿತ್ಸೆಯಲ್ಲಿ ಸ್ಟಿರಾಯ್್ಡ ಔಷಧ ಸೇವಿಸಿದವರಲ್ಲಿ ಮತ್ತು ಇತರೆ ರೋಗಗಳಿಂದ ಬಳಲುತ್ತಿರುವವರಲ್ಲೂ ಈ ಸೋಂಕು ಪತ್ತೆಯಾಗಿದೆ.

ಲಕ್ಷಣಗಳೇನು?

  • ಕಣ್ಣುಗಳ ಕೆಳಭಾಗದಲ್ಲಿ ನೋವು
  • ಮುಖದ ಒಂದು ಭಾಗದಲ್ಲಿ ಊತ
  • ತಲೆನೋವು, ಜ್ವರ
  • ಮೂಗು ಅಥವಾ ಸೈನಸ್ ಸೋಂಕು
  • ಮೂಗಿನ ನಾಳದಲ್ಲಿ ಗಾಯ
  • ಭಾಗಶಃ ದೃಷ್ಟಿ ನಷ್ಟ

ಏನು ಮಾಡಬೇಕು?

  • ಕೋವಿಡ್ ಸೋಂಕಿನಿಂದ ಚೇತರಿಕೆ ಕಂಡು ಡಿಸ್ಚಾರ್ಜ್ ಆದ ಬಳಿಕ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಮತ್ತು ಮಧುಮೇಹವನ್ನು ಗಮನಿಸುತ್ತಿರಬೇಕು.
  • ವೈದ್ಯರ ಶಿಫಾರಸಿನ ಪ್ರಕಾರವೇ ಸ್ಟಿರಾಯ್್ಡ ಔಷಧ ಬಳಸಬೇಕು.
  • ಆಕ್ಸಿಜನ್ ಥೆರಪಿಗೆ (ಆವಿ ತೆಗೆದುಕೊಳ್ಳುವಾಗ) ಶುದ್ಧ ನೀರನ್ನೇ ಬಳಸಬೇಕು
  • ಆಂಟಿ ಬಯಾಟಿಕ್/ಆಂಟಿ ಫಂಗಲ್ ಔಷಧಗಳನ್ನು ವೈದ್ಯರ ಶಿಫಾರಸಿನ ಪ್ರಕಾರವೇ ಬಳಸಬೇಕು.

ಏನು ಮಾಡಬಾರದು?

  • ಸೋಂಕಿನ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ
  • ಕೋವಿಡ್ 19 ಸೋಂಕು ತಗುಲಿ ಡಿಸ್ಚಾರ್ಜ್ ಆದವರು ಮೂಗು ಕಟ್ಟುವ ಎಲ್ಲ ಕೇಸ್​ಗಳನ್ನು ಬ್ಯಾಕ್ಟೀರಿಯಾದಿಂದ ಬಂದ ಸೈನಸೈಟಿಸ್ ಎಂದು ಪರಿಗಣಿಸಬೇಡಿ.
  • ಶಿಲೀಂಧ್ರ ಸೋಂಕು ಪತ್ತೆಗೆ ಕ್ಷಿಪ್ರವಾಗಿ ಕಾರ್ಯಾಚರಿಸುವುದಕ್ಕೆ, ವೈದ್ಯರ ನೆರವು ಪಡೆಯುವುದಕ್ಕೆ ಹಿಂದೇಟು ಹಾಕಬೇಡಿ
  • ಚಿಕಿತ್ಸೆ ಆರಂಭಿಸುವಲ್ಲಿ ಯಾವುದೇ ಕಾರಣಕ್ಕೂ ವಿಳಂಬ ಮಾಡಿಕೊಳ್ಳಬೇಡಿ

ತಜ್ಞರ ವರದಿ ನಿರೀಕ್ಷೆಯಲ್ಲಿ ಸರ್ಕಾರ

ಬ್ಲ್ಯಾಕ್​ ಫಂಗಸ್ ಬಗ್ಗೆ ರಾಜ್ಯದ ಸ್ಥಿತಿಗತಿ ಕುರಿತ ತಜ್ಞರ ವರದಿ ಶನಿವಾರ ಅಥವಾ ಭಾನುವಾರ ಸರ್ಕಾರದ ಕೈ ಸೇರಲಿದೆ. ತಜ್ಞರ ಶಿಫಾರಸಿನಂತೆ ಮುಂದಿನ ಕಾರ್ಯತಂತ್ರ ರೂಪಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಮಾಹಿತಿಗಳ ಪ್ರಕಾರ ಪ್ರತಿ ದಿನ 25-30 ಹೊಸ ಪ್ರಕರಣಗಳು ರಾಜ್ಯದಲ್ಲಿ ಕಾಣಿಸಿಕೊಳ್ಳುತ್ತಿದೆ. ಇದು ಇನ್ನಷ್ಟು ಹೆಚ್ಚಾಗಬಹುದೆಂಬ ಆತಂಕವೂ ಇದೆ. ಈ ಕಾಯಿಲೆಗೆ ಬಳಸುವ ಆಂಪೊಟೊರಿಸಿಯನ್ 40 ಸಾವಿರ ವೈಯಲ್ ಸಿದ್ಧವಿದೆ. ಮುಂಜಾಗ್ರತೆಯಾಗಿ ರಾಜ್ಯಕ್ಕೆ 1,050 ವೈಯಲ್​ಅನ್ನು ಕೇಂದ್ರ ನೀಡಿದೆ. ಇನ್ನೂ ಹೆಚ್ಚು ಪಡೆದುಕೊಳ್ಳಲು ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಕೆಯಾಗುತ್ತಿದೆ. ಜತೆಗೆ ತಜ್ಞರ ವರದಿ ಆಧರಿಸಿ ಪ್ರತ್ಯೇಕ ಚಿಕಿತ್ಸಾ ವ್ಯವಸ್ಥೆ, ಚಿಕಿತ್ಸಾ ವಿಧಾನದ ಬಗ್ಗೆ ಮಾರ್ಗಸೂಚಿ ಹೊರಡಿಸುವ ಬಗ್ಗೆಯೂ ಆರೋಗ್ಯ ಇಲಾಖೆಯಲ್ಲಿ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net