

ಮೈಸೂರು: ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂಬ ಸೂಚನೆ ಅದರ ಬಾಟಲಿಗಳ ಮೇಲೆಯೇ ಇರುತ್ತದೆ. ಹೀಗೆ ನಿಗದಿತ ಮಾರ್ಗಸೂಚಿಗಳ ಪ್ರಕಾರ ಮಾಡಿರುವ ಮದ್ಯವೇ ಆರೋಗ್ಯಕ್ಕೆ ಹಾನಿಕರವಾಗಿದ್ದರೆ, ಹಾನಿಕಾರಕ ಅಂಶ ಪತ್ತೆ ಆಗಿರುವಂಥ ಮದ್ಯ ಇನ್ನೆಷ್ಟು ಅಪಾಯಕಾರಿ ಆಗಿರಲಿಕ್ಕಿಲ್ಲ!
ಹೌದು.. ಕಂಪನಿಯೊಂದರ ಘಟಕದಲ್ಲಿ ನಿರ್ದಿಷ್ಟ ದಿನವೊಂದರಲ್ಲಿ ಬಾಟ್ಲಿಂಗ್ ಮಾಡಲಾದ ಬಿಯರ್ಗಳಲ್ಲಿ ಸೆಡಿಮೆಂಟ್ ಶೇಖರಣೆ ಆಗಿರುವುದು ಕಂಡುಬಂದಿದೆ. ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿರುವ ಯುನೈಟೆಡ್ ಬ್ರಿವರೀಸ್ ಲಿಮಿಟೆಡ್ ಘಟಕದಲ್ಲಿ ಜು. 15ರಂದು ಬಾಟ್ಲಿಂಗ್ ಮಾಡಲಾದ ಬಿಯರ್ ದಾಸ್ತಾನಿನ ಕೆಲವು ಬಾಟಲಿಗಳಲ್ಲಿ ಸೆಡಿಮೆಂಟ್ ಶೇಖರಣೆ ಆಗಿರುವುದು ಕಂಡುಬಂದಿದೆ ಎಂದು ಅಬಕಾರಿ ಇಲಾಖೆ ಸುತ್ತೋಲೆ ಹೊರಡಿಸಿದೆ.
ಸದರಿ ದಾಸ್ತಾನು ಕುರಿತಂತೆ ರಾಸಾಯನಿಕ ಪ್ರಯೋಗಾಲಯದಿಂದ ವರದಿ ಪಡೆದುಕೊಳ್ಳುವ ನಿರ್ಧಾರವನ್ನು ಆಧರಿಸಿ ಮುಂದಿನ ಮಾಹಿತಿ ನೀಡುವವರೆಗೂ ಆರೋಗ್ಯ ದೃಷ್ಟಿಯಿಂದ ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಕೋರಲಾಗಿದೆ. ಅಂದಹಾಗೆ ಈ ಬಿಯರ್ ಬಾಟಲಿಗಳು ಈಗಾಗಲೇ ಹಲವೆಡೆಗೆ ವಿತರಣೆ ಆಗಿವೆ.