

ಬೆಂಗಳೂರು: ಸಾಮಾನ್ಯವಾಗಿ ಎಲ್ಲರೂ ದಿನಾಂಕದ ಪ್ರಕಾರ ಜನ್ಮದಿನ ಆಚರಿಸಿಕೊಳ್ಳುತ್ತಾರೆ. ಇನ್ನು ಕೆಲವರು ಜನ್ಮನಕ್ಷತ್ರ, ತಿಥಿ ಪ್ರಕಾರ ಆಚರಿಸಿಕೊಳ್ಳುತ್ತಾರೆ. ಆದರೆ ಜನ್ಮದಿನಾಂಕ ಹಾಗೂ ಜನ್ಮನಕ್ಷತ್ರದ ದಿನ ಒಂದೇ ಆಗಿ ಬರುವುದು ಅತ್ಯಪರೂಪ. ಹೀಗಾಗಿ ಕೆಲವರು ವರ್ಷದಲ್ಲಿ ಎರಡೆರಡು ಸಲ ಜನ್ಮದಿನದ ಖುಷಿ ಅನುಭವಿಸುತ್ತಾರೆ. ಕೆಲವೊಂದು ವಿಶೇಷ ವರ್ಷಗಳಲ್ಲಿ ಎರಡೂ ಒಂದೇ ದಿನ ಬರುವುದಿರುತ್ತದೆ.
ಅಂಥದ್ದೇ ಒಂದು ಕಾಕತಾಳೀಯ ಈ ಸಲದ ಸ್ವಾತಂತ್ರ್ಯೋತ್ಸವದ ವಿಷಯದಲ್ಲಿಯೂ ನಡೆದಿದೆ. 1947ರ ಆಗಸ್ಟ್ 15ರಂದು ಯಾವ ತಿಥಿ-ನಕ್ಷತ್ರ ಇತ್ತೋ 77ನೇ ಸ್ವಾತಂತ್ರ್ಯೋತ್ಸವದ ದಿನವಾದ ಇವತ್ತೂ ಅದೇ ತಿಥಿ-ನಕ್ಷತ್ರವಿದೆ. ಹೀಗಾಗಿ ಕೆಲವರು ಈ ಸ್ವಾತಂತ್ರ್ಯೋತ್ಸವವನ್ನು ವಿಶೇಷ ಎಂಬಂತೆ ಸಂಭ್ರಮಿಸುತ್ತಿದ್ದಾರೆ.
ಪಂಚಾಂಗವೊಂದರ ಮಾಹಿತಿ ಪ್ರಕಾರ 1947ರ ಆಗಸ್ಟ್ 15ರಂದು ಕೃಷ್ಣಪಕ್ಷವಾಗಿದ್ದು, ತಿಥಿ ಚತುರ್ದಶಿ, ಪುಷ್ಯ ನಕ್ಷತ್ರವಾಗಿತ್ತು. ಮಾತ್ರವಲ್ಲ, ಅದು ಅಧಿಕ ಶ್ರಾವಣ ಕೂಡ ಆಗಿತ್ತು. ಅಚ್ಚರಿ ಎಂಬಂತೆ ಈ ಸಲವೂ ಅಧಿಕ ಶ್ರಾವಣವಾಗಿದ್ದು, ತಿಥಿ ಚತುರ್ದಶಿಯಾಗಿದ್ದು, ನಕ್ಷತ್ರ ಪುಷ್ಯವಾಗಿದೆ.