

ಬೆಂಗಳೂರು: ಸಿಬಿಐ ಸಮನ್ಸ್ ನೀಡಿದ್ದ ಹಿನ್ನೆಲೆಯಲ್ಲಿ ವಿಚಾರಣೆ ಎದುರಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬುಧವಾರ ಸಿಬಿಐ ಕಚೇರಿಗೆ ಆಗಮಿಸಿದರು.
ಮಗಳು ಐಶ್ವರ್ಯಾ ಹಾಗೂ ಕೆಫೆ ಕಾಫಿ ಡೇ ಮಾಲೀಕರಾಗಿದ್ದ ಸಿದ್ಧಾರ್ಥ್ ಹೆಗ್ಡೆ ಪುತ್ರ ಅಮರ್ತ್ಯ ಅವರ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮ ನಡೆದ ದಿನವೇ (ನ.19) ಡಿಕೆಶಿ ಕಚೇರಿಗೆ ಸಿಬಿಐ ಸಮನ್ಸ್ ಜಾರಿ ಮಾಡಿತ್ತು. ನ.23ರಂದು ವಿಚಾರಣೆಗೆ ಹಾಜರ್ ಆಗುವಂತೆ ಸೂಚಿಸಿತ್ತು. ನ.23, 24ರಂದು ಡಿಕೆಶಿ ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಿದ್ದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗೆ ಕರೆ ಮಾಡಿ 2 ದಿನ ಟೈಂ ಕೇಳಿದ್ದರು. ನ.25ರ ಸಂಜೆ 4 ಗಂಟೆಗೆ ಸಿಬಿಐ ಕಚೇರಿಗೆ ಹಾಜರಾಗುವುದಾಗಿ ಹೇಳಿದ್ದರು.
ಅಕ್ಟೋಬರ್ 5ರಂದು ಡಿ.ಕೆ. ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಿದ್ದ ಸಿಬಿಐ ಅಧಿಕಾರಿಗಳು, ಕೆಲ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದರು. 2013ರ ಏಪ್ರಿಲ್ನಿಂದ 2018ರ ಏಪ್ರಿಲ್ ವರೆಗಿನ ಆರ್ಥಿಕ ವ್ಯವಹಾರದ ಬಗ್ಗೆ ತನಿಖೆ ನಡೆಯುತ್ತಿದ್ದು, 74.93 ಕೋಟಿ ರೂ. ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪ ಡಿಕೆಶಿ ಮೇಲಿದೆ. ಈ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿದ್ದ ಸಿಬಿಐ, ಡಿಕೆ ಸಹೋದರರ ಮನೆ ಸೇರಿ ಒಟ್ಟು 14 ಕಡೆ ದಾಳಿ ಮಾಡಿತ್ತು. ದಾಳಿ ವೇಳೆ 57 ಲಕ್ಷ ರೂಪಾಯಿ ನಗದು ಹಾಗೂ ದಾಖಲೆಗಳನ್ನು ವಶ ಪಡಿಸಿಕೊಂಡಿತ್ತು. ದಾಖಲೆಗಳ ಪರಿಶೀಲನೆ ನಂತರ ವಿಚಾರಣೆಗೆ ಹಾಜರಾಗಲು ಸಿಬಿಐ ನೋಟಿಸ್ ನೀಡಿತ್ತು.
ವಕೀಲರ ಜತೆ ಚರ್ಚಿಸಿ ವಿಚಾರಣೆ ಎದುರಿಸಲು ಡಿಕೆಶಿ ತಯಾರಾಗಿಯೇ ಸಿಬಿಐ ಕಚೇರಿಗೆ ಬಂದಿದ್ದಾರೆ. ಬುಧವಾರ ಮಧ್ಯಾಹ್ನ ಸುಮಾರು 3.55ಕ್ಕೆ ಸಹೋದರ ಡಿ.ಕೆ. ಸುರೇಶ್ ಜತೆ ಡಿಕೆಶಿ ಗಂಗಾನಗರದ ಸಿಬಿಐ ಕಚೇರಿಗೆ ಆಗಮಿಸಿದರು.