

ನಾಗಮಂಗಲ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸ್ತ್ರೀ ಶಕ್ತಿ ಸಾಲಮನ್ನಾ ಮಾಡುತ್ತೇನೆಂದು ಉಲ್ಟಾ ಹೊಡೆದಿದ್ದಾರೆ. ಕುಮಾರಣ್ಣ ಸಾಲ ಮನ್ನಾ ಮಾಡದೆ ಇದ್ರೂ ಪರವಾಗಿಲ್ಲ ಸುಳ್ಳು ಹೇಳಬೇಡ ಕಣಣ್ಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ವ್ಯಂಗ್ಯವಾಡಿದ್ದಾರೆ.
ನಾಗಮಂಗಲದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, 200 ಯೂನಿಟ್ ಕರೆಂಟ್, 200 ದುಡ್ಡು, 10ಕೆಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದ್ದೇವೆ, ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ. ನಿಮ್ಮ ಪಾರ್ಟಿ ಅಧಿಕಾರಕ್ಕೆ ಬರಲ್ಲ. ದಯವಿಟ್ಟು ಜನತದಾಳದ ಕಾರ್ಯಕರ್ತರು ಅರ್ಥ ಮಾಡಿಕೊಳ್ಳ ಬೇಕು. ಜೆಡಿಎಸ್ ಕಾರ್ಯಕರ್ತರಲ್ಲಿ ಮನವಿ ನಮಗೆ ಒಂದು ಅವಕಾಶ ಮಾಡಿಕೊಡಿ ಎಂದಿದ್ದಾರೆ.
ಚೆಲುವರಾಯಸ್ವಾಮಿ ಧೀಮಂತ ನಾಯಕ, ಏನಾದರೂ ತಪ್ಪು ಮಾಡಿದ್ದರೆ ಹೊಟ್ಟೆಗೆ ಹಾಕಿಕೊಳ್ಳ ಬೇಕು. ಜನತಾದಳ ಸಾಕು ಎಂದು ಘಟಾನುಘಟಿ ನಾಯಕರು ಕಾಂಗ್ರೆಸ್ ಸೇರುತ್ತಿದ್ದಾರೆ. ಅವರು ಯಾರು ದಡ್ಡರಲ್ಲ, ಜೆಡಿಎಸ್ ಸಹವಾಸ ಸಾಕು ಎಂದು ಬರುತ್ತಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರಿಗೆ ಭಾಷಣ ಮಾಡಲು ನಾನು ಬಂದಿಲ್ಲ. ಜನತಾದಳದ ಕಾರ್ಯಕರ್ತರು ನನ್ನ ಭಾಷಣ ಕೇಳಬೇಕು.ಮರಕ್ಕೆ ಬೇರು ಎಷ್ಟು ಮುಖ್ಯವೋ ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯವಾಗಿರುತ್ತದೆ. ಬೇರಿಲ್ಲ ಅಂದ್ರೆ ಮರ ಉಳಿಯಲ್ಲ, ನಂಬಿಕೆ ಇಲ್ಲ ಅಂದ್ರೆ ಸಂಬಂಧ ಉಳಿಯಲ್ಲ. ಮಾತು ಕೊಡುವುದು ಮುಖ್ಯ ಅಲ್ಲ, ಉಳಿಸಿಕೊಳ್ಳಬೇಕು ಎಂದಿದ್ದಾರೆ.
ನಾವು ಕುಮಾರಸ್ವಾಮಿ ಜೊತೆ ಶಕ್ತಿಯಾಗಿ ನಿಂತುಕೊಂಡು ಸಹಾಯ ಮಾಡಿದ್ದೇವೆ. ಭಗವಂತ ನಿಮಗೆ ವರ ಶಾಪ ಕೊಡಲ್ಲ, ಅವಕಾಶ ಕೊಡುತ್ತಾನೆ. ನಮಗೆ ಸಿಕ್ಕ ಅವಕಾಶದಲ್ಲಿ ಕುಮಾರಸ್ವಾಮಿ ಸಿಎಂ ಮಾಡಿದೆವು. ಹೆಚ್ಡಿಕೆ ಜೊತೆಯಲ್ಲಿದ್ದ ವೇಳೆ ಅವರಿಗೆ ಕೆಡಕು ಬಯಸಿದ್ರೆ ದೇವರು ನಮಗೆ ಶಿಕ್ಷೆ ಕೊಡಲಿ. ಅಧಿಕಾರದಲ್ಲಿದ್ದಾಗ ಮಂಡ್ಯ ಜನತೆಗೆ ಏನಾದರೂ ಅಭಿವೃದ್ಧಿ ಮಾಡಿದ್ದಾರ.? ಸಕ್ಕರೆ ಕಾರ್ಖಾನೆ, ನೀರಾವರಿ, ಸರ್ವತೋಮುಖ ಅಭಿವೃದ್ಧಿಗೆ ಏನು ಮಾಡಿದ್ದಾರೆಂದು ಪ್ರಶ್ನೆ ಮಾಡಿದ್ದಾರೆ.
ಜನರ ಕಷ್ಟ ಸುಖ ಕೇಳಲು ಈ ಪ್ರಜಾಧ್ವನಿ ಯಾತ್ರೆಯಾಗಿದೆ. ಕುಮಾರಸ್ವಾಮಿ ಅವರು ಸಿಕ್ಕ ಅವಕಾಶ ಉಪಯೋಗಿಸಿಕೊಳ್ಳದೆ ಡಬಲ್ ಎಂಜಿನ್ ಸರ್ಕಾರ ಬಂತು. ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೊಗೆಯಬೇಕು.ನಿನ್ನೆ ಪ್ರಧಾನಿ ಮೋದಿ ಬಂದು ಜೆಡಿಎಸ್ ವಿಚಾರ ಒಂದೇ ಒಂದು ಮಾತು ಆಡಲಿಲ್ಲ. ಕೇವಲ ಕಾಂಗ್ರೆಸ್ ಬೈದು ಹೋಗಿದ್ದಾರೆ. ಬಿಜೆಪಿ ಜೆಡಿಎಸ್ ವೈರಿಯಲ್ಲ ಕಾಂಗ್ರೆಸ್ ಮಾತ್ರ ವೈರಿ ಅನ್ನೋದನ್ನ ಸಾಬೀತು ಮಾಡಿದ್ದಾರೆ.ಬಿಜೆಪಿ ಎದುರಾಳಿ ಕಾಂಗ್ರೆಸ್ ಅನ್ನೋದನ್ನ ಹೇಳಿದ್ದಾರೆ. ಬಿಜೆಪಿ ವಿರುದ್ಧ ಬಲಿಷ್ಠವಾಗಿರುವ ಶಕ್ತಿ ಇರೋದು ಕಾಂಗ್ರೆಸ್ ಮಾತ್ರ ಜೆಡಿಎಸ್‌ಗೆ ಅಲ್ಲ ಎಂದು ಕಿಡಿಕಾರಿದ್ದಾರೆ.