ಜನಪರ ಕಾಯ್ದೆಗಳ ಮೂಲಕ ದೇಶದ ಭವಿಷ್ಯ ಬದಲಾಯಿಸಿದವರು ಮನಮೋಹನ್ ಸಿಂಗ್: ಡಿಸಿಎಂ  | Manmohan Singh

Manmohan Singh
Published on

ನವದೆಹಲಿ: "ಜನಪರ ಕಾಯ್ದೆಗಳ ಮೂಲಕ ಭಾರತದ ಭವಿಷ್ಯವನ್ನು ಬದಲಾಯಿಸಿದವರು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್" ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.

ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ದೆಹಲಿಯಲ್ಲಿ ಶನಿವಾರ (ಡಿ.28) ಪುಷ್ಪಗುಚ್ಛ ಇರಿಸಿ, ಅಂತಿಮ ನಮನ ಸಲ್ಲಿಸಿದ ಅವರು,  "ಅರಣ್ಯ ಭೂಮಿ ಹಕ್ಕು ಕಾಯ್ದೆ, ಆಹಾರ ಭದ್ರತಾ ಕಾಯ್ದೆ, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ, ಶಿಕ್ಷಣದ ಹಕ್ಕು ಕಾಯ್ದೆಗಳು ಗ್ರಾಮೀಣ ಭಾಗದ ಜನರ ಏಳಿಗೆಗೆ ಕಾರಣವಾಯಿತು. ಮಾಹಿತಿ ಹಕ್ಕು ಸೇರಿದಂತೆ ಹಲವಾರು ಯೋಜನೆಗಳು ಆಡಳಿತದಲ್ಲಿ ಪಾರದರ್ಶಕತೆ ತಂದವು. ಆರೋಗ್ಯ ಕ್ಷೇತ್ರದಲ್ಲಿ ಆಶಾ ಕಾರ್ಯಕರ್ತರ ಯೋಜನೆ ಜಾರಿಗೆ ತಂದರು. ತಾವು ಜಾರಿಗೊಳಿಸಿದ ಅನೇಕ ಕಾಯ್ದೆಗಳ ಮೂಲಕ ಮನಮೋಹನ್ ಸಿಂಗ್ ಅವರು ಜನ ಸಾಮಾನ್ಯರ ನಡುವೆ ಇಂದಿಗೂ ಜೀವಂತವಾಗಿದ್ದಾರೆ. ಸಿಂಗ್ ಅವರು ಜನಸಾಮಾನ್ಯರ ಬದುಕಿನಲ್ಲಿ ಬದಲಾವಣೆ ತಂದವರು" ಎಂದು ಹೇಳಿದರು.

"ಭೂಸ್ವಾಧೀನವಾದ ನಂತರ ಅನೇಕ ರೈತರಿಗೆ ತಕ್ಕನಾದ ಪರಿಹಾರ ಸಿಗುತ್ತಿರಲಿಲ್ಲ. ರೈತರ ಭೂಮಿಗೆ ನ್ಯಾಯಯುತವಾದ ಪರಿಹಾರ ನೀಡಿದರು. ಸಮಾಜದ ಎಲ್ಲಾ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಆಡಳಿತ ನಡೆಸಿದರು. ಮಾಧ್ಯಮಗಳು ಹಾಗೂ ವಿರೋಧ ಪಕ್ಷಗಳು ಮನಮೋಹನ್ ಸಿಂಗ್ ಅವರ ಕೆಲಸಗಳನ್ನು ಈಗ ನೆನಪಿಸಿಕೊಳ್ಳುತ್ತಿವೆ. ಸಂವಿಧಾನ ಹಾಗೂ ನಮ್ಮ ನೆಲದ ಕಾನೂನುಗಳನ್ನು ರಕ್ಷಣೆ ಮಾಡಿದವರು ಮನಮೋಹನ್ ಸಿಂಗ್. ಆರ್ಥಿಕ ಸಚಿವರಾಗಿದ್ದ ಕಾಲದಿಂದ ಇಲ್ಲಿಯತನಕ ಈ ದೇಶದ ಆರ್ಥಿಕತೆಯನ್ನು ಸುಭದ್ರವಾಗಿ ಇಡಲು ಶ್ರಮಿಸಿದರು. ಇದನ್ನು ವಿರೋಧ ಪಕ್ಷದವರು ಕೂಡ ಒಪ್ಪಿದ್ದಾರೆ" ಎಂದರು.

"ಸೋನಿಯಾ ಗಾಂಧಿ ಅವರು ತಮಗೆ ದೊರೆತ ಪ್ರಧಾನಿಯಾಗುವ ಅವಕಾಶವನ್ನು ನಿರಾಕರಿಸಿ, ಈ ದೇಶಕ್ಕೆ ಉತ್ತಮ ಆರ್ಥಿಕ ತಜ್ಞನ ಅವಶ್ಯಕತೆಯಿದೆ ಎಂದು ಅಧಿಕಾರ ತ್ಯಾಗ ಮಾಡಿದರು. ನೆಹರು-ಗಾಂಧಿ ಕುಟುಂಬದ ತ್ಯಾಗವನ್ನು ಈ ದೇಶದ ಇತಿಹಾಸ ಮರೆಯುವುದಿಲ್ಲ" ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net