

ಬೆಂಗಳೂರು: ಕಾಂಗ್ರೆಸ್ ಪಕ್ಷ, ಕರ್ನಾಟಕದಲ್ಲಿ ಪೂರ್ಣ ಬಹುಮತ ಪಡೆದು ಸರ್ಕಾರ ರಚನೆಗೆ ಮುಂದಾಗಿದೆ. ಈಗಾಗಲೇ ಡಿಕೆಶಿ ಹಾಗೂ ಸಿದ್ದರಾಮಯ್ಯ ನಡುವೆ ಸಿಎಂ ಗಾದಿಗಾಗಿ ಜಟಾಪಟಿ ನಡೆದಿದ್ದು ಕುರುಬರ ನಾಯಕ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುವ ಅವಕಾಶ ಪಡೆದಿದ್ದಾರೆ.
ಇಂದು ಸಿದ್ದು ಡಿಕೆಶಿ ಸೇರಿದಂತೆ ಇತರ ಎಂಟು ಜನ ಶಾಸಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ದೇಶಾದ್ಯಂತ ಸೊರಗಿರುವ ಕಾಂಗ್ರೆಸ್ಗೆ ಕರ್ನಾಟಕದ ಚುನಾವಣೆ ಬಲ ನೀಡಿದ್ದು ಸಿದ್ದು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ದೆಹಲಿಯಿಂದ ಬೆಂಗಳೂರಿಗೆ ಬಂದಿಳಿದಿದ್ದಾರೆ.
ದೆಹಲಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಹುಲ್-ಪ್ರಿಯಾಂಕಾ ಗಾಂಧಿ ಆಗಮಿಸಿದ್ದು, ವಿಸ್ತಾರ ವಿಮಾನದಲ್ಲಿ ಪ್ರಯಾಣಿಸಿದ್ದರು. ಟರ್ಮಿನಲ್ 2ಗೆ ಆಗಮಿಸಿದ ರಾಹುಲ್ ಪ್ರಿಯಾಂಕ ಗಾಂಧಿಯನ್ನು ನಿಯೋಜಿತ ಡಿಸಿಎಂ ಡಿಕೆ ಶಿವಕುಮಾರ್ ಬರಮಾಡಿಕೊಂಡರು.
ಏರ್ಪೊಟ್ ನಿಂದ ಬೆಂಗಳೂರು ಕಡೆಗೆ ಹೊರಟ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಇಬ್ಬರಿಗೂ ಡಿಕೆ ಶಿವಕುಮಾರ್ ಸಾಥ್ ನೀಡಿದ್ದಾರೆ.