ದೆಹಲಿ ಕೋರ್ಟ್​ ಆವರಣದಲ್ಲೇ ವಕೀಲರ ಹೊಯ್-ಕೈ! ವಿಡಿಯೋ ವೈರಲ್

dehli court
Published on

ನವದೆಹಲಿ: ದೆಹಲಿಯ ರೋಹಿಣಿ ನ್ಯಾಯಾಲಯದ ಒಳಗೆ ಪುರುಷ ಮತ್ತು ಮಹಿಳಾ ವಕೀಲರ ನಡುವೆ ನಡೆದ ಆಘಾತಕಾರಿ ಕಾದಾಟ ಕ್ಯಾಮರಾದಲ್ಲಿ ಸೆರೆಯಾಗಿದೆ.

ದೆಹಲಿಯ ರೋಹಿಣಿ ಕೋರ್ಟ್ ಆವರಣದಿಂದ ಮಹಿಳೆ ಮತ್ತು ಪುರುಷ ವಕೀಲರ ನಡುವಿನ ಜಗಳದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ವೀಡಿಯೋದಲ್ಲಿ ಇಬ್ಬರು ವಕೀಲರು ಹೊಡೆದಾಟ ತೊಡಗಿದ್ದು, ವಿಡಿಯೋದಲ್ಲಿ ಅವರಿಬ್ಬರೂ ಗುದ್ದಿಕೊಂಡು ಕಪಾಳಮೋಕ್ಷ ಮಾಡುವುದನ್ನು ನಾವು ಕಾಣಬಹುದು. ಈ ಹೋರಾಟ ನಡೆಯುತ್ತಿರುವ ಕಾರಿಡಾರ್‌ನಲ್ಲಿ ಇತರ ಜನರೂ ನಿಂತು ನೋಡುತ್ತಿದ್ದು, ಯಾರೂ ಮಧ್ಯಪ್ರವೇಶಿಸಿ ಜಗಳ ನಿಲ್ಲಿಸಲು ಧೈರ್ಯ ಮಾಡಿಲ್ಲ.

ಪುರುಷ ವಕೀಲರ ವಿರುದ್ಧ ಮಹಿಳಾ ವಕೀಲರ ದೂರು

ನೇಹಾ ಗುಪ್ತಾ ಎಂದು ಗುರುತಿಸಲಾಗಿರುವ ಮಹಿಳಾ ವಕೀಲರು ಪುರುಷ ವಕೀಲರ ವಿರುದ್ಧ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಅವರಿಗೆ ದೂರು ನೀಡಿದ್ದಾರೆ. ಗುಪ್ತಾ ಅವರು ತಮ್ಮ ಸಹೋದ್ಯೋಗಿಯ ವಿರುದ್ಧ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ವಿಷ್ಣು ಕುಮಾರ್ ಶರ್ಮಾ ಎಂದು ಗುರುತಿಸಲಾದ ಪುರುಷ ವಕೀಲರ ವಿರುದ್ಧ ಹೊರಿಸಲಾದ ಆರೋಪಗಳಲ್ಲಿ ಕಿರುಕುಳ, ಮೌಖಿಕ ಹಲ್ಲೆ, ದೈಹಿಕ ಹಿಂಸೆ ಮತ್ತು ಬೆದರಿಕೆ ಆರೋಪಗಳೂ ಸೇರಿವೆ.

ಮೇ 18ರಂದು ರೋಹಿಣಿ ಕೋರ್ಟ್‌ನ ಕೋರ್ಟ್ ಎನ್ 0-113 ರ ಮುಂದೆ ನಿಂತಿದ್ದಾಗ ಮತ್ತೊಬ್ಬ ವಕೀಲ ಶರ್ಮಾ ಬಂದು ತನ್ನ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದರು ಎಂದು ಗುಪ್ತಾ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

"ಅವನ ಹಿಡಿತದಿಂದ ನನ್ನನ್ನು ಮುಕ್ತಗೊಳಿಸಲು ನಾನು ಪದೇ ಪದೇ ಪ್ರಯತ್ನಿಸಿದರೂ, ಶರ್ಮಾ ನನ್ನನ್ನು ಪಟ್ಟುಬಿಡದೆ ಹೊಡೆಯುವುದನ್ನು ಮುಂದುವರೆಸಿದರು, ಇದರ ಪರಿಣಾಮವಾಗಿ ನನ್ನ ಮುಖ ಮತ್ತು ನನ್ನ ದೇಹದ ಇತರ ಭಾಗಗಳಿಗೆ ಹಲವಾರು ಗಾಯಗಳಾಗಿವೆ" ಎಂದು ಅವರು ಹೇಳಿದರು.

ದೂರನ್ನು ಸ್ವೀಕರಿಸಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net