

ಮಂಡ್ಯ: ಬಿಜೆಪಿ ನಾಯಕ ಸಿ.ಟಿ ರವಿ ಅವರ ಹೇಳಿಕೆ ಇಡೀ ಹೆಣ್ಣು ಕುಲಕ್ಕೆ ಮಾಡಲಾದ ದೊಡ್ಡ ಅಪಮಾನ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಆಕ್ರೋಶ ಹೊರಹಾಕಿದ್ದಾರೆ.
ಮಂಡ್ಯದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಡಿ.ಕೆ. ಶಿವಕುಮಾರ್, ಈ ವ್ಯಕ್ತಿಯಿಂದ ಇಂತಹ ಪ್ರವೃತ್ತಿ ಇದೇ ಮೊದಲಲ್ಲ. ಸಿದ್ದರಾಮಯ್ಯ ಅವರು, ಜಯಮಾಲ, ಸೇರಿದಂತೆ ನಮ್ಮ ನಾಯಕರ ಬಗ್ಗೆ ಈ ಹಿಂದೆ ಅನೇಕ ಬಾರಿ ಹೀನವಾಗಿ ಮಾತನಾಡಿದ್ದಾರೆ. ಸಿ.ಟಿ. ರವಿ ಅವರ ಹೇಳಿಕೆ ಹಾಗೂ ನಡತೆ ಸರಿಯೋ ತಪ್ಪೋ ಎಂದು ಬಿಜೆಪಿಯ ಎಲ್ಲಾ ನಾಯಕರು ಹೇಳಲಿ. ಪೊಲೀಸರ ವಿಚಾರಣೆ ನಂತರ ಮಾತನಾಡೋಣ. ಅದನ್ನು ಬಿಟ್ಟು ಪೊಲೀಸರ ಮೇಲೆ ದೂರು ನೀಡುವುದಲ್ಲ. ಪೊಲೀಸರು ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳೋಣ ಎಂದು ಹೇಳಿದ್ದಾರೆ.
ಚಿಕ್ಕಮಗಳೂರು ಬಂದ್ ಕರೆ ನೀಡಿರುವ ಬಗ್ಗೆ ಪ್ರಶ್ನಿಸಿದಾಗ, ಚಿಕ್ಕಮಗಳೂರು ಮಾತ್ರವಲ್ಲ, ದೇಶವನ್ನೇ ಬಂದ್ ಮಾಡಲಿ. ಆತ ಮಾಡಿರುವುದು ಘನಕಾರ್ಯವೇ? ಘನಕಾರ್ಯ ಮಾಡಿ ಧೀರಾದಿ ಧೀರನಂತೆ ಬಂದ್ ಮಾಡುತ್ತಾರಾ ಮಾಡಿಕೊಳ್ಳಲಿ ಎಂದು ಪ್ರತಿಕ್ರಿಯಿಸಿದ್ದಾರೆ.
ಜೀವ ಬೆದರಿಕೆ ಹಾಕಿರುವ ಕುರಿತು ಪ್ರತಿಕ್ರಿಯಿಸಿ, ನಾನು ಆ ಜಾಗದಲ್ಲೇ ಇರಲಿಲ್ಲ. ಪರಿಷತ್ ನಲ್ಲಿ 10 ಪ್ರಶ್ನೆಗೆ ಉತ್ತರ ನೀಡಿ, ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ನಾನು ವಿಧಾನಸಭೆ ಕಲಾಪಕ್ಕೆ ಹೋದೆ. ನಂತರ ಈ ಘಟನೆ ನಡೆದಿದೆ. ನಂತರ ನಾನು ಮತ್ತೆ ಪರಿಷತ್ತಿಗೆ ಹೋದೆ. ಜೀವ ಬೆದರಿಕೆ ಒಡ್ಡಿದ್ದರೆ ತನಿಖೆ ಮಾಡಲಿ. ಎಲ್ಲಾ ವಿಡಿಯೋ ದಾಖಲೆ ಇದೆಯಲ್ಲ. ಜೀವ ಬೆದರಿಕೆ ಹಾಕಿದ್ದರೆ ಕ್ರಮ ಕೈಗೊಳ್ಳಲಿ. ನಾನು ಏನು ದೊಡ್ಡವನಲ್ಲ. ನಾನು ತಪ್ಪು ಮಾಡಿದ್ದರೆ ಕಾನೂನು ಶಿಕ್ಷೆ ನೀಡಲಿದೆ.
ನಾನು ಫಸ್ಟ್ರೇಷನ್ ಎಂದು ಹೇಳಿದ್ದೇನೆ ಹೊರತು ಬೇರೆ ಪದ ಬಳಸಿಲ್ಲ ಎಂಬ ಸಿ.ಟಿ ರವಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಎಲ್ಲಾ ಮಾಧ್ಯಮಗಳಲ್ಲೂ ಪ್ರಸಾರವಾಗಿದೆ. ಆತ ರಾಹುಲ್ ಗಾಂಧಿ ಅವರನ್ನು ಡ್ರಗ್ ಅಡಿಕ್ಟ್ ಎಂದು ಕರೆದಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ಇದು ಪ್ರಕಟವಾಗಿವೆ. ಅವರು ಒಂದು ಸುಳ್ಳು ಮುಚ್ಚಿಹಾಕಲು ನೂರು ಸುಳ್ಳು ಹೇಳಬೇಕಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.