

ಬೆಂಗಳೂರು: ಉಪಮುಖ್ಯಮಂತ್ರಿ "ಡಿ.ಕೆ. ಶಿವಕುಮಾರ್ ಬೆಂಗಳೂರಿನ ಅಭಿವೃದ್ಧಿ ಸಚಿವರಲ್ಲ ಬದಲಿಗೆ ನಿರ್ನಾಮ ಸಚಿವರು" ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ್ ಈ ಹಿಂದೆ ನೇರ ವಾಗ್ದಾಳಿ ನಡೆಸಿದ್ದರು. ಇದೀಗ ಈ ಹೇಳಿಕೆಗೆ ತಿರುಗೇಟು ನೀಡಿರುವ ಡಿಸಿಎಂ, "ಅಶ್ವಥ್ ನಾರಾಯಣ್ ಅಲ್ಲ ನವರಂಗಿ ನಾರಾಯಣ" ಎಂದು ಹೇಳಿದ್ದಾರೆ.
ಗುತ್ತಿಗೆದಾರರ ಸಂಘದ ಸದಸ್ಯರು ಮಾಡಿದ ಆರೋಪವನ್ನು ಮುಂದಿಟ್ಟು ಮಾತನಾಡಿದ್ದ ಅಶ್ವಥ್ ನಾರಾಯಣ್, ಡಿಕೆಶಿ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದರು. ಮಾಜಿ ಸಚಿವರ ಆರೋಪಕ್ಕೆ ಕೆಂಡಮಂಡಲಗೊಂಡ ಡಿ.ಕೆ. ಶಿವಕುಮಾರ್, "ಅವರು ಅಶ್ವಥ ನಾರಾಯಣ ಅಲ್ಲ ನವರಂಗಿ ನಾರಾಯಣ. ರಾಮನಗರಕ್ಕೆ ಬಂದು ಕ್ಲೀನ್ ಮಾಡುತ್ತೀವಿ ಎಂದು ಹೇಳಿ, ಅವರ ಪಾರ್ಟಿ ಕ್ಲೀನ್ ಮಾಡಿ ಹೋದರು. ಅವರ ಇಲಾಖೆಯಲ್ಲಿ, ಬೆಂಗಳೂರು ನಗರದಲ್ಲಿ ಏನು ಮಾಡಿದ್ದಾರೆ ಎಂಬುದನ್ನು ನಾವು ಇನ್ನೂ ತಿಳಿಸಿಲ್ಲ" ಎಂದು ಹೇಳಿದರು.
"ಯಾರು ಏನೇನು ಆಟವಾಡುತ್ತಿದ್ದಾರೆ, ಯಾರನ್ನು ಎತ್ತಿ ಕಟ್ಟುತ್ತಿದ್ದಾರೆ, ಎಲ್ಲವೂ ನನಗೆ ತಿಳಿದಿದೆ. ಸ್ವಾತಂತ್ರ್ಯ ದಿನಾಚರಣೆ ಮುಗಿದ ನಂತರ ನಾನು ಇದಕ್ಕೆಲ್ಲಾ ಉತ್ತರಿಸುವೆ. ಸಿ.ಟಿ. ರವಿ ಆರೋಪಿಸಿರುವ ವಿಚಾರವು ನನ್ನ ಗಮನಕ್ಕೆ ಬಂದಿದೆ. ಸಿ.ಟಿ.ರವಿಗೂ ಟ್ರೀಟ್ಮೆಂಟ್ ಅಗತ್ಯವಿದೆ, ಕೊಡೋಣ" ಎಂದು ಹೇಳುವ ಮುಖೇನ ಅಶ್ವಥ್ ನಾರಾಯಣ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.