

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಇತ್ತೀಚಿನ ದಿನಗಳಲ್ಲಿ ಮಾಟ ಮಂತ್ರ ಹಾಗೂ ವಾಮಾಚಾರದ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದು, ಇದಕ್ಕೆ ಪೂರಕವೆಂಬಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ (ಮೇ 30) ತಮ್ಮ ವಿರುದ್ಧ ಕೇರಳದ ರಾಜಾರಾಜೇಶ್ವರಿ ದೇಗುಲದಲ್ಲಿ ಅಘೋರಿಗಳ ಮೂಲಕ ಶತ್ರು ಸಂಹಾರ ಯಾಗ ಮಾಡಲಾಗುತ್ತಿದೆ ಎಂದು ಆರೋಪಿಸುವ ಮೂಲಕ ಹೊಸ ಬಾಂಬ್ ಒಂದನ್ನು ಸಿಡಿಸುವ ಮೂಲಕ ಸುದ್ದಿಯಾಗಿದ್ದರು.
ಇದೀಗ ಈ ಕುರಿತು ಸ್ಪಷ್ಟನೆ ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಯಾಗ ನಡೆದಿರುವ ಸ್ಥಳದ ಬಗ್ಗೆ ಮಾಹಿತಿ ನೀಡಲಷ್ಟೇ ನಾನು ದೇಗುಲದ ಹೆಸರನ್ನು ಉಲ್ಲೇಖಿಸಿದ್ದೆ ಎಂದು ಹೇಳುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿರುವ ಅವರು, ನಾನು ದೇವಿ ರಾಜರಾಜೇಶ್ವರಿಯ ಭಕ್ತನಾಗಿದ್ದು, ಈ ದೇವಸ್ಥಾನದಲ್ಲಿ ಶತ್ರು ಸಂಹಾರ ಪೂಜೆ ಮಾಡುವುದಿಲ್ಲ ಎನ್ನುವ ಅರಿವಿದೆ. ನನ್ನ ಹೇಳಿಕೆಯನ್ನು ಕೆಲವರು ತಪ್ಪಾಗಿ ಗ್ರಹಿಸಿದ್ದು, ದೇವಸ್ಥಾನದಿಂದ 15 ಕಿ.ಮೀ. ದೂರದಲ್ಲಿರುವ ಖಾಸಗಿ ಸ್ಥಳದಲ್ಲಿ ಯಾಗ ನಡೆದಿದೆ ಎಂದು ಸ್ಪಷ್ಟಪಡಿಸುತ್ತೇನೆ.
ಯಾಗ ನಡೆದಿರುವ ಸ್ಥಳದ ಬಗ್ಗೆ ಮಾಹಿತಿ ನೀಡಲಷ್ಟೇ ನಾನು ದೇಗುಲದ ಹೆಸರನ್ನು ಉಲ್ಲೇಖಿಸಿದ್ದೆ. ಕೆಲವು ದಿನಗಳ ಹಿಂದೆ ತಾಯಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದಿದ್ದೆ. ವಿಷಯಗಳನ್ನು ಸಂದರ್ಭದಿಂದ ಹೊರಗಿಟ್ಟು ಅವುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ ಎಂದು ಸ್ಪಷ್ಟಪಡಿಸಿದ್ದಾರೆ.
ಶತ್ರು ಸಂಹಾರ ಪೂಜೆಯಲ್ಲಿ 21 ಕುರಿ, 3 ಎಮ್ಮೆ, 3 ಹಂದಿ, ಕೋಳಿಗಳನ್ನ ಬಲಿ ಕೊಡಲಾಗ್ತಾ ಇದೆ. ಇದನ್ನ ಯಾರು ಮಾಡಿಸ್ತಾ ಇದಾರೆ ಎಂಬುದು ನನಗೆ ಗೊತ್ತಿದೆ. ನಮ್ಮನ್ನ ತುಳಿಯಲು ಪ್ರಯತ್ನ ಮಾಡ್ತಿದ್ದಾರೆ. ನಾವು ನಂಬಿದ ದೇವರು ನಮ್ಮನ್ನ ಕಾಪಾಡುತ್ತಾನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಗುರುವಾರ (ಮೇ 30) ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿದ್ದರು.