

ಚೆನ್ನೈ: ಕರ್ನಾಟಕ ರಾಜಕೀಯದಲ್ಲಿ ಭಾರೀ ಸುದ್ದಿಯಲ್ಲಿದ್ದ ಸಿಡಿ ಕೇಸ್ನಲ್ಲಿ ಮಹತ್ತರ ತಿರುವು ಸಿಕ್ಕಿದೆ. ಸಂತ್ರಸ್ತೆ ಎನ್ನಲಾದ ಯುವತಿಯ ಪೋಷಕರು ಮಾಧ್ಯಮದ ಮುಂದೆ ಬಂದು, ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರೇ ತಮ್ಮ ಮಗಳನ್ನು ಒತ್ತಾಯಾಳಾಗಿಟ್ಟುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಸದ್ಯ ಈ ಆರೋಪವನ್ನು ಕೇಳಲು ಡಿಕೆಶಿ ಕರ್ನಾಟಕದಲ್ಲಿಲ್ಲ. ಡಿಕೆಶಿ ಮತ್ತು ಸಿದ್ದರಾಮಯ್ಯ ಅವರ ಜೋಡಿ, ನೆರೆಯ ತಮಿಳುನಾಡಿನಲ್ಲಿ ಸಿಪಿಐ ಪರ ಪ್ರಚಾರದಲ್ಲಿ ಬಿಜಿಯಾಗಿದೆ.
ಹೌದು. ಇಂದು ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ತಮಿಳುನಾಡಿನ ಥಳಿ ಕ್ಷೇತ್ರಕ್ಕೆ ತೆರಳಿದ್ದಾರೆ. ಅಲ್ಲಿ ಸಿಪಿಐ ಪರವಾಗಿ ಚುನಾವಣೆಗೆ ನಿಂತಿರುವ ಕಾಂಗ್ರೆಸ್ ಬೆಂಬಲಿತ ಸಿಪಿಐ ಅಭ್ಯರ್ಥಿ ರಾಮಚಂದ್ರನ್ ಪರ ಪ್ರಚಾರ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ಡೆಂಕಣಿಕೋಟೆ ನಗರದಲ್ಲಿ ಮೆರವಣಿಗೆ ನಡೆದಿದೆ.
ಮೆರವಣಿಗೆಯಲ್ಲಿ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿಯಾಗಬೇಕೆಂದರೆ ನೀವು ಸಿಪಿಐ ಅನ್ನು ಬೆಂಬಲಿಸಲೇಬೇಕು. ಇಲ್ಲಿನ ಬಡವರು ಉದ್ಧಾರ ಆಗಬೇಕೆನ್ನುವುದಾದರೆ ಅಭ್ಯರ್ಥಿ ಟಿ.ರಾಮಚಂದ್ರನ್ ಅನ್ನು ಗೆಲ್ಲಿಸಿ ಎಂದು ಹೇಳಿದ್ದಾರೆ. ಈ ರೋಡ್ ಶೋನಲ್ಲಿ ಸಂಸದ ಚೆಲ್ಲಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಮಾಜಿ ಸಚಿವರಾದ ಎಚ್.ಎಂ ರೇವಣ್ಣ, ಜಮೀರ್ ಅಹಮದ್ ಸೇರಿ ಅನೇಕರು ಭಾಗವಹಿಸಿದ್ದರು.
ತಮ್ಮ ಬಗ್ಗೆ ಬಂದಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಡಿಕೆಶಿ, ಆ ಹುಡುಗಿಗೂ ನನಗೂ ಯಾವುದೇ ಪರಿಚಯ ಇಲ್ಲ. ಇದು ಅವರ ವೈಯಕ್ತಿಕ ಸಮಸ್ಯೆ, ಅವರೇ ಬಗೆಹರಿಸಿಕೊಳ್ಳಲಿ.. ನನಗೆ ಇಂತಹ ಹೊಲಸು ರಾಜಕೀಯದ ಅವಶ್ಯಕತೆ ಇಲ್ಲ. ಕಾನೂನಿದೆ, ಸರ್ಕಾರವಿದೆ.. ತನಿಖೆ ನಡೆಯಲಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್)