ಜಿಲ್ಲೆಗೆ ರೂ. 47.48 ಕೋಟಿ ಮಂಜೂರು

gruha tammayya
ಗೃಹಲಕ್ಷ್ಮೀ ಯೋಜನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಫಲಾನುಭವಿಗೆ ಶಾಸಕ ಎಚ್.ಡಿ.ತಮ್ಮಯ್ಯ ಚೆಕ್ ವಿತರಿಸಿದರು. ಮೀನಾ ನಾಗರಾಜ್, ವಿಕ್ರಮ ಅಮಟೆ, ರಾಜಾ ನಾಯಕ್ ಇತರರಿದ್ದರು.
Published on

ಚಿಕ್ಕಮಗಳೂರು: ಬಡವರಿಗೆ ಬದುಕು ಕಟ್ಟಿಕೊಡುವ ಉದ್ದೇಶ ಹಾಗೂ ಮಹಿಳೆಯರ ಬದುಕಿಗೆ ನೆರವಾಗಲು ಗೃಹಲಕ್ಷ್ಮೀ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯಿಂದ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಬುಧವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಗೃಹಲಕ್ಷ್ಮೀ ಯೋಜನೆ ಅನುಷ್ಠಾನ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಈ ಯೋಜನೆ ಪೂರಕವಾಗಿದೆ. ಪ್ರತಿ ತಿಂಗಳು ಪ್ರತಿ ಕುಟುಂಬದ ಯಜಮಾನಿಗೆ ಎರಡು ಸಾವಿರ ರೂ. ಸಂದಾಯವಾಗುತ್ತದೆ. ಜಿಲ್ಲೆಯಲ್ಲಿ 2,37,414 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಅವರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಆಗಲಿದ್ದು, ಜಿಲ್ಲೆಗೆ 47.48 ಕೋಟಿ ರೂ. ಮಂಜೂರಾಗಿದೆ. ನೋಂದಣಿಯಲ್ಲಿ 6ನೇ ಸ್ಥಾನದಲ್ಲಿದ್ದು ಶೇ 87.18ರಷ್ಟು ಸಾಧನೆಯಾಗಿದೆ ಎಂದರು.
ಯೋಜನೆಯ ಫಲಾನುಭವಿ ಉಂಡೆದಾಸರಹಳ್ಳಿಯ ಭಾನು ಮಾತನಾಡಿ, ರಾಜ್ಯ ಸರ್ಕಾರದ ಯೋಜನೆಗಳಾದ ಅನ್ನಭಾಗ್ಯ, ಗೃಹಜ್ಯೋತಿ, ಶಕ್ತಿ ಮತ್ತು ಗೃಹಲಕ್ಷ್ಮೀ ಯೋಜನೆಗಳು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಗಿವೆ. ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಈ ಯೋಜನೆಗಳು ನೆರವಾಗಲಿವೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಮೀನಾ ನಾಗರಾಜ್, ಎಸ್ಪಿ ಡಾ. ವಿಕ್ರಮ ಅಮಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾ ನಾಯಕ್, ಚಿಕ್ಕಮಗಳೂರು ತಾಲೂಕು ಸಿಡಿಪಿಒ ಚರಣ್‌ರಾಜ್, ನಗರಸಭೆ ಪೌರಾಯುಕ್ತ ಬಸವರಾಜು, ನಗರಸಭೆ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net