

| ರಮೇಶ ದೊಡ್ಡಪುರ ಬೆಂಗಳೂರು
ರಾಜ್ಯ ಸರ್ಕಾರದ ವತಿಯಿಂದ ನ.1ರ ಕನ್ನಡ ರಾಜ್ಯೋತ್ಸವ ದಿನದಂದು ನೀಡುವ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಯ ಹೆಸರಿನಲ್ಲಿ ಹತ್ತಾರು ಪ್ರಶಸ್ತಿಗಳು ಇನ್ನೂ ನೀಡಲ್ಪಡುತ್ತಿದ್ದು, ನ್ಯಾಯಾಲಯದ ಆದೇಶದ ಮೂಲಕ ಅಸ್ತಿತ್ವದಲ್ಲಿರುವ ಮಾರ್ಗಸೂಚಿಯ ಸ್ಪಷ್ಟ ಉಲ್ಲಂಘನೆ ನಡೆಯುತ್ತಿದೆ. ರಾಜ್ಯ ಮಟ್ಟದಲ್ಲಿ ಮಾತ್ರವೇ ರಾಜ್ಯೋತ್ಸವ ಪ್ರಶಸ್ತಿ ಇರಬೇಕು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದರೂ ಅನೇಕ ಜಿಲ್ಲೆಗಳು ಪ್ರತಿವರ್ಷ ‘ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ’ ಘೋಷಣೆ ಮಾಡುತ್ತಿದ್ದು, ನಿಯಮ ಪಾಲಿಸಬೇಕಾದ ಸಚಿವರು, ಜಿಲ್ಲಾಧಿಕಾರಿಗಳೇ ಈ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಿದ್ದಾರೆ.
ರಾಜ್ಯಕ್ಕೊಂದೇ ರಾಜ್ಯೋತ್ಸವ ಪ್ರಶಸ್ತಿ!: ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದ್ದ ರಾಜ್ಯೋತ್ಸವ ಪ್ರಶಸ್ತಿಗೆ ತಮ್ಮನ್ನು ಪರಿಗಣಿಸುತ್ತಿಲ್ಲ ಎಂದು ಬೆಂಗಳೂರಿನ ಸತ್ಯನಾರಾಯಣ ಎಂಬ ಸಾಹಿತಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಪ್ರಶಸ್ತಿ ಆಯ್ಕೆಗೆ ಯಾವ ಮಾನದಂಡ ಎಂದು ಪ್ರಶ್ನಿಸಿದಾಗ ಸರ್ಕಾರದ ಬಳಿ ಉತ್ತರ ಇರಲಿಲ್ಲ. ನ್ಯಾಯಾಲಯದ ಸೂಚನೆ ಮೇರೆಗೆ ತಜ್ಞರ ಸಮಿತಿಯೊಂದನ್ನು ರಚಿಸಿ, ಮಾರ್ಗಸೂಚಿಗಳನ್ನು ರೂಪಿಸಲಾಯಿತು. ನ್ಯಾಯಾಲಯ ಒಪ್ಪಿದ ನಂತರ ಆದೇಶ ಹೊರಡಿಸಲಾಯಿತು. ಮಾರ್ಗಸೂಚಿಯ ಮೂರನೇ ಅಂಶದಲ್ಲಿ, ‘ವಿವಿಧ ಇಲಾಖೆಗಳು ಹಾಗೂ ಜಿಲ್ಲಾಡಳಿತಗಳು ನವೆಂಬರ್ ಒಂದರಂದು ನೀಡುತ್ತಿರುವ ಪ್ರಶಸ್ತಿಗಳನ್ನು ರಾಜ್ಯೋತ್ಸವ ಪ್ರಶಸ್ತಿ ಎಂದು ಗುರುತಿಸುತ್ತಿರುವುದು ಗೊಂದಲ ಉಂಟುಮಾಡಿದೆ. ಆದ್ದರಿಂದ ಆ ರೀತಿಯ ಪ್ರಶಸ್ತಿಗಳನ್ನು ವಿತರಿಸುವಾಗ ರಾಜ್ಯೋತ್ಸವ ಪ್ರಶಸ್ತಿ ಎಂಬ ಹೆಸರಿನಿಂದ ಗುರುತಿಸತಕ್ಕದ್ದಲ್ಲ’ ಎಂದು ಅತ್ಯಂತ ಸ್ಪುಟವಾಗಿ ತಿಳಿಸಲಾಗಿದೆ. ಆದರೂ ಅನೇಕ ಜಿಲ್ಲೆಗಳು ಹಿಂದಿನ ಸಂಪ್ರದಾಯವನ್ನೇ ಮುಂದುವರಿಸಿವೆ.
ನ್ಯಾಯಾಲಯದ ಸೂಚನೆ ಮೇರೆಗೆ ರಚಿಸಿದ್ದ ಮಾರ್ಗಸೂಚಿ ಸದಸ್ಯರಾಗಿದ್ದ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಾ. ಎಂ. ಎಸ್. ಮೂರ್ತಿ ಪ್ರತಿಕ್ರಿಯಿಸಿ, ಒಬ್ಬ ಸಾಹಿತಿ ನ್ಯಾಯಾಲಯಕ್ಕೆ ಹೋಗಿದ್ದರಿಂದ ಈ ಮಾರ್ಗಸೂಚಿ ರಚನೆಯಾಗಿದೆ. ರಾಜ್ಯೋತ್ಸವದ ಗೌರವ ಹೆಚ್ಚಿಸಬೇಕು ಎಂದು ಅನೇಕ ಸಭೆಗಳಲ್ಲಿ ವಿಸõತ ಚರ್ಚೆ ನಡೆಸಿದ ನಂತರ ಅಂಶಗಳನ್ನು ಸೇರಿಸಲಾಗಿದೆ. ವಯೋಮಿತಿ ಸಡಿಲಿಕೆ, ಜಿಲ್ಲಾ ಮಟ್ಟದಲ್ಲಿ ರಾಜ್ಯೋತ್ಸವ ಆಚರಣೆ ಸೇರಿ ಯಾವುದೇ ಅಂಶಗಳ ಪಾಲನೆಯಲ್ಲಿ ಲೋಪ ಆಗದಂತೆ ಸರ್ಕಾರಗಳು ನೋಡಿಕೊಳ್ಳಬೇಕು. ಈ ಹೆಜ್ಜೆ ನ್ಯಾಯಾಲಯದ ಆದೇಶದ ಉಲ್ಲಂಘನೆಯೂ ಆಗುವುದರಿಂದ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚರ ವಹಿಸಬೇಕು ಎಂದಿದ್ದಾರೆ.
ಕೆಲ ಜಿಲ್ಲೆಗಳಲ್ಲಿ ಇಲ್ಲ: ಕೆಲ ಜಿಲ್ಲೆಗಳು ‘ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ’ ಎಂದು ನೀಡುತ್ತಿವೆ. ಆದರೆ ಮತ್ತೆ ಕೆಲ ಜಿಲ್ಲೆಗಳಲ್ಲಿ, ‘ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ರಾಜ್ಯೋತ್ಸವ ಸಂದರ್ಭದಲ್ಲಿ ಸನ್ಮಾನ’ ಮಾಡುತ್ತಿವೆ. ಸನ್ಮಾನ ಮಾಡಲು ಅವಕಾಶವಿದೆ. ಉಳಿದ ಜಿಲ್ಲೆಗಳೂ ಇದೇ ಮಾದರಿಯನ್ನು ಅನುರಿಸುವುದು, ಗೊಂದಲಕ್ಕೆ ತೆರೆ ಬೀಳಲಿದೆ ಹಾಗೂ ಮಾರ್ಗಸೂಚಿಯ ಪಾಲನೆಯೂ ಆಗಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ: ರಾಜ್ಯಮಟ್ಟದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಎನ್ನುವುದು ಪ್ರತಿಷ್ಠಿತವಾಗಿದೆ. ಇದರ ಜತೆಗೇ, ಅನೇಕ ವರ್ಷಗಳಿಂದ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗಳನ್ನೂ ಅನೇಕ ಜಿಲ್ಲೆಗಳಲ್ಲಿ ನೀಡಲಾಗುತ್ತಿದೆ. ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ 10-50ರವರೆಗೆ ಸಾಧಕರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ. ಈ ವರ್ಷವೂ ಈ ಸಂಪ್ರದಾಯ ಮುಂದುವರಿದಿದೆ. ಹಾವೇರಿ ಜಿಲ್ಲೆಯಲ್ಲಿ 15 ಜನರಿಗೆ ‘ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಗಿದೆ. ದಕ್ಷಿಣ ಕನ್ನಡದಲ್ಲಿ(57) ಸಚಿವ ಅಂಗಾರ, ದಾವಣಗೆರೆಯಲ್ಲಿ(51) ಸಚಿವ ಭೈರತಿ ಬಸವರಾಜ, ಕೋಲಾರದಲ್ಲಿ(14) ಸಚಿವ ಮುನಿರತ್ನ, ರಾಯಚೂರಿನಲ್ಲಿ(13) ಜಿಲ್ಲಾಧಿಕಾರಿ ಡಾ. ಅವಿನಾಶ ಮೆನನ್, ಚಿಕ್ಕಬಳ್ಳಾಪುರದಲ್ಲಿ(10) ಸಚಿವ ಡಾ. ಕೆ. ಸುಧಾಕರ್, ವಿಜಯಪುರದಲ್ಲಿ(20) ಮುಜರಾಯಿ ಸಚಿವೆ, ಮಂಡ್ಯದಲ್ಲಿ(14) ಸಚಿವ ಕೆ.ಸಿ. ನಾರಾಯಣಗೌಡ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ 30 ಜನರಿಗೆ ‘ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ’ಯನ್ನು ಸ್ವತಃ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಅವರೇ ಪ್ರದಾನ ಮಾಡಿದ್ದಾರೆ.