ಜನರ ಕಷ್ಟಕ್ಕೆ ಮಿಡಿದ ಜಿಲ್ಲಾ ಜನತಾದರ್ಶನ; ಅಹವಾಲು ಸಲ್ಲಿಕೆಗೆ ಮುಗಿಬಿದ್ದ ನಾಗರಿಕರು

Janatha Darshana (1)
ಮೈಸೂರು ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಜನತಾದರ್ಶನದಲ್ಲಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
Published on

ಬೆಂಗಳೂರು: ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸುವ ಜಿಲ್ಲಾಮಟ್ಟದ ಜನತಾ ದರ್ಶನಕ್ಕೆ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ಮೊಟ್ಟ ಮೊದಲ ಬಾರಿಗೆ ರಾಜ್ಯಾದ್ಯಂತ ಏಕಕಾಲಕ್ಕೆ ಎಲ್ಲ ಜಿಲ್ಲೆಗಳಲ್ಲಿ ನಡೆದ ಜನತಾ ದರ್ಶನದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಎರಡು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲೂ ಕಾರ್ಯಕ್ರಮ ನಡೆದಿದೆ.

ಉಸ್ತುವಾರಿ ಸಚಿವರು, ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿ ಗಳು, ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಎಸ್ಪಿಗಳ ಸಮ್ಮುಖದಲ್ಲಿ ಜನತಾದರ್ಶನ ನಡೆಯಿತು. ಖುದ್ದು ಮುಖ್ಯಮಂತ್ರಿಗಳನ್ನು ಕಾಣಲು ರಾಜಧಾನಿಗೆ ಬರುತ್ತಿದ್ದವರಿಗೆ ಜಿಲ್ಲಾ ಮಟ್ಟದಲ್ಲೇ ಪರಿಹಾರ ಒದಗಿಸುವ ಅವಕಾಶ ಇದಾಗಿತ್ತು. ಮೊದಲೆಲ್ಲ ರಾಜ್ಯಮಟ್ಟದಲ್ಲಿ ಸಿಎಂ ಜನತಾ ದರ್ಶನ ನಡೆಸುತ್ತಿದ್ದರು. ಕೆಲ ಉಸ್ತುವಾರಿ ಸಚಿವರು ಜಿಲ್ಲಾಮಟ್ಟದಲ್ಲಿ, ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಜನತಾ ದರ್ಶನ ನಡೆಸುತ್ತಿದ್ದರು. ಆದರೆ, ರಾಜ್ಯಾದ್ಯಂತ ಏಕಕಾಲಕ್ಕೆ ಜಿಲ್ಲಾಮಟ್ಟದಲ್ಲಿ ಈ ಕಾರ್ಯಕ್ರಮ ಆಯೋಜನೆ ಇದೇ ಮೊದಲು.

ರಾಜ್ಯಾದ್ಯಂತ 6,684 ಅಹವಾಲು ಮತ್ತು ಮನವಿಗಳು ಸ್ವೀಕೃತಗೊಂಡು 21ಕ್ಕೆ ಸ್ಥಳದಲ್ಲೇ ಪರಿಹಾರ ಒದಗಿಸಲಾಗಿದೆ. ಉಳಿದಂತೆ 6,663 ಅರ್ಜಿ, ಅಹವಾಲುಗಳು ದಾಖಲಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ರವಾನೆಯಾಗಿವೆ. ಆದರೆ, ಇದರಲ್ಲಿ ಮೌಖಿಕ ದೂರುಗಳು ಮತ್ತು ಪರಿಹಾರಗಳು ದಾಖಲಾಗಿಲ್ಲ.

ಹಾವೇರಿಯಲ್ಲಿ ಅತಿ ಹೆಚ್ಚು: 774 ಅಹವಾಲುಗಳ ಮೂಲಕ ಹಾವೇರಿ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, 432 ಅಹವಾಲು ಸಲ್ಲಿಕೆಯಾಗಿರುವ ಹಾಸನ ಎರಡನೇ ಸ್ಥಾನದಲ್ಲಿ, 423 ಅಹವಾಲುಗಳ ಮೂಲಕ ಕೋಲಾರ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ಒಟ್ಟು ಅರ್ಜಿ ರೂಪದಲ್ಲಿ ಬಂದ ಅಹವಾಲುಗಳನ್ನು ದಾಖಲಿಸಿಕೊಳ್ಳುವ ಮತ್ತು ಸ್ಥಳದಲ್ಲೇ ಪರಿಹಾರಕ್ಕೆ ಪ್ರಯತ್ನಿಸುವ ಪ್ರಕ್ರಿಯೆ ಒಂದು ಕಡೆ ನಡೆದಿದೆ. ಮತ್ತೊಂದು ಕಡೆ ಅರ್ಜಿ ಇಲ್ಲದೆ ಮೌಖಿಕವಾಗಿ ಬಂದ ಅಹವಾಲುಗಳನ್ನೂ ದಾಖಲಿಸಿಕೊಳ್ಳುವ ಜತೆಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ಕಾರ್ಯವೂ ನಡೆದಿದೆ.

ಮೌಖಿಕ ದೂರುಗಳಿಗೆ ಲಿಖಿತ ರೂಪ: ಮೌಖಿಕವಾಗಿ ದೂರು ಕೊಡಲು ಬಂದವರನ್ನು ಕುಳ್ಳಿರಿಸಿ ಅಧಿಕಾರಿ ಮತ್ತು ಸಿಬ್ಬಂದಿಯೇ ಅಹವಾಲುಗಳನ್ನು ಬರೆದು, ಬಳಿಕ ಅದನ್ನು ಓದಿ ಹೇಳಿ ಅರ್ಜಿದಾರರಿಂದ ಸಹಿ ಪಡೆದು ದಾಖಲಿಸಿಕೊಳ್ಳುವ ಪ್ರಯತ್ನಗಳೂ ನಡೆದಿವೆ.

ಇನ್ನಷ್ಟು ಸುಧಾರಣೆ: ರಾಜ್ಯಾದ್ಯಂತ ಏಕಕಾಲಕ್ಕೆ ನಡೆಸಿದ ಜನತಾದರ್ಶನ ನಮಗೂ ಮೊದಲ ಅನುಭವ. ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಪ್ರತಿಕ್ರಿಯೆ ಸಾರ್ವಜನಿಕರಿಂದ ಸಿಕ್ಕಿದೆ. ಅಧಿಕಾರಿಗಳ ಸ್ಪಂದನೆ ಕೂಡ ಸಮಾಧಾನಕರವಾಗಿದೆ. ಇವತ್ತಿನ ಅನುಭವದ ಹಿನ್ನೆಲೆಯಲ್ಲಿ ಮುಂದಿನ ಜನತಾದರ್ಶನದ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸುವ ಪ್ರಯತ್ನ ಮಾಡುತ್ತೇವೆ ಎನ್ನುವ ಅಭಿಪ್ರಾಯಗಳು ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳಿಂದ ವ್ಯಕ್ತವಾಗಿದೆ.

ತೊಂದರೆಗಳು

  • ಅನಿವಾರ್ಯ ಕಾರಣಗಳಿಂದ ಗದಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಸೋಮವಾರ ಜನತಾದರ್ಶನ ನಡೆಯಲಿಲ್ಲ. ಬೆಳಗಾವಿಯಲ್ಲಿ ಮಂಗಳವಾರ ನಡೆಯಲಿದೆ.
  • ಮೈಸೂರು ಜಿಲ್ಲೆಯ ಜನತಾದರ್ಶನದಲ್ಲಿನ ಕುಂದುಕೊರತೆ ಮನವಿಗಳನ್ನು ಐಪಿಜಿಆರ್​ಎಸ್​ನಲ್ಲಿ ಅಪ್​ಲೋಡ್ ಮಾಡುವಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಎಲ್ಲ ಅರ್ಜಿಗಳನ್ನು ಮ್ಯಾನುವಲ್ ಆಗಿ ಸ್ವೀಕರಿಸಲಾಗಿದ್ದು ಬಳಿಕ ಅಪ್​ಲೋಡ್ ಮಾಡಲಾಗಿದೆ.
  • ಹಾವೇರಿ ಜಿಲ್ಲೆಯಲ್ಲಿ ಬೆಳೆ ಹಾನಿ ಪರಿಹಾರದ ಸಂಬಂಧ ಸಾವಿರಾರು ಅರ್ಜಿಗಳು ಬಂದಿವೆ. ಸ್ವೀಕರಿಸುವ ವೇಳೆ ಕೆಲವು ಅನನುಕೂಲಗಳು ಉಂಟಾಗಿದ್ದರಿಂದ ಅವುಗಳನ್ನು ಅಪ್​ಲೋಡ್ ಮಾಡಲು ಸಾಧ್ಯವಾಗಿಲ್ಲ.

ಕಂದಾಯ ಇಲಾಖೆ ಸಮಸ್ಯೆಗಳೇ ಹೆಚ್ಚು: ಸ್ವೀಕರಿಸಲಾಗಿರುವ ಅಹವಾಲುಗಳಲ್ಲಿ ಕಂದಾಯ ಇಲಾಖೆಯದ್ದೇ ಸಿಂಹಪಾಲು. 2,100ಕ್ಕೂ ಹೆಚ್ಚು ಅಹವಾಲುಗಳು ಸಲ್ಲಿಕೆಯಾಗಿವೆ. ಗ್ರಾಮೀಣಾಭಿವೃದ್ಧಿ ಇಲಾ ಖೆಗೆ ಸಂಬಂಧಿಸಿದ ಸಾವಿರಕ್ಕೂ ಅಧಿಕ. ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಯ ನೂರಾರು ಅಹವಾಲು ಸಲ್ಲಿಕೆ ಗೊಂಡವು. ಜಿಲ್ಲಾಧಿಕಾರಿಗಳಿಗಿಂತ ಜಿಪಂ ಮುಖ್ಯಕಾರ್ಯನಿರ್ವಹಣಾ ಅಧಿಕಾರಿಗೆ ಹೆಚ್ಚು ಅಹವಾಲುಗಳು ಸಲ್ಲಿಕೆಯಾಗಿವೆ. ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ಕೆಲ ಜಿಲ್ಲೆಗಳನ್ನು ಹೊರತುಪಡಿಸಿದರೆ ಹೆಚ್ಚಿನ ಕಡೆ ಅತಿಕಡಿಮೆ ಅಹವಾಲುಸಲ್ಲಿಕೆ ಆಗಿರುವುದು ಅಚ್ಚರಿಯ ಸಂಗತಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net