

ಚಿಕ್ಕಮಗಳೂರು: ಜನರ ಆರೋಗ್ಯ ರಕ್ಷಣೆಗೆ ಮುಂದಾಗಬೇಕಾದ ಆಂಬುಲೆನ್ಸ್‌ಗಳ ಹಾವಳಿ ನಗರದ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಮಿತಿಮೀರಿದೆ. ಆಸ್ಪತ್ರೆಯ ಆವರಣವನ್ನೇ ನಿಲ್ದಾಣವನ್ನಾಗಿ ಮಾಡಿಕೊಂಡಿದ್ದಾರೆ. ರೋಗಿಗಳನ್ನು, ಶವಗಳನ್ನು ಸಾಗಿಸಲುಲು ಮನಬಂದಂತೆ ಹಣ ಕೇಳುತ್ತಾರೆ ಎಂಬ ಆರೋಪ ಕೇಳಿಬಂದಿದೆ.
ಚಿಕ್ಕಮಗಳೂರು: ಜನರ ಆರೋಗ್ಯ ರಕ್ಷಣೆಗೆ ಮುಂದಾಗಬೇಕಾದ ಆಂಬುಲೆನ್ಸ್‌ಗಳ ಹಾವಳಿ ನಗರದ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಮಿತಿಮೀರಿದೆ. ಆಸ್ಪತ್ರೆಯ ಆವರಣವನ್ನೇ ನಿಲ್ದಾಣವನ್ನಾಗಿ ಮಾಡಿಕೊಂಡಿದ್ದಾರೆ. ರೋಗಿಗಳನ್ನು, ಶವಗಳನ್ನು ಸಾಗಿಸಲುಲು ಮನಬಂದಂತೆ ಹಣ ಕೇಳುತ್ತಾರೆ ಎಂಬ ಆರೋಪ ಕೇಳಿಬಂದಿದೆ.
ಎರಡು ವರ್ಷಗಳ ಹಿಂದೆ ವ್ಯಾಪಕವಾಗಿ ಹರಡಿದ್ದ ಕರೊನಾ ಸಂದರ್ಭ ಬಹುತೇಕ ಖಾಸಗಿ ವಾಹನ ಮಾಲೀಕರು ತಮ್ಮ ವಾಹನಗಳನ್ನು ಆಂಬುಲೆನ್ಸ್‌ಗಳಾಗಿ ಬದಲಾಯಿಸಿದರು. ಅಲ್ಲಿಂದ ಇಲ್ಲಿನವರೆಗೂ ಇದರಿಂದಲೇ ಹಣ ಮಾಡುವ ದಂಧೆಯನ್ನಾಗಿ ಕೆಲವರು ಮಾಡಿಕೊಂಡಿದ್ದಾರೆ.
ಸರ್ಕಾರಿ ಜಿಲ್ಲಾ, ತಾಲೂಕು ಆಸ್ಪತ್ರೆಗಳ ಆವರಣದಲ್ಲಿ ಸರ್ಕಾರಿ ಆಂಬುಲೆನ್ಸ್‌ಗಳ ಮತ್ತು ಆಸ್ಪತ್ರೆಗೆ ಬಂದು ಹೋಗುವವರ ವಾಹನಗಳಿಗೆ, ವೈದ್ಯರು ಹಾಗೂ ಸಿಬ್ಬಂದಿಗೆ ವಾಹನಗಳ ನಿಲುಗಡೆಗೆ ಅವಕಾಶವಿದೆ. ಆದರೆ ಖಾಸಗಿ ಆಂಬುಲೆನ್ಸ್‌ಗಳ ಚಾಲಕರು ಆಸ್ಪತ್ರೆಯ ಆವರಣವನ್ನೇ ನಿಲ್ದಾಣವನ್ನಾಗಿ ಪರಿವರ್ತನೆ ಮಾಡಿಕೊಂಡಿದ್ದಾರೆ.
ಆಸ್ಪತ್ರೆಗೆ ಪ್ರತಿದಿನ ಬರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕಣ್ಣು, ತುರ್ತು ವಿಭಾಗ, ಇಎನ್‌ಟಿ, ಶಸ್ತ್ರ ಚಿಕಿತ್ಸೆ, ಸಿಟಿ ಸ್ಕಾೃನ್ ಘಟಕ, ಡಯಾಲಿಸಿಸ್ ಘಟಕ, ಮರಣೋತ್ತರ ಪರೀಕ್ಷಾ ಕೇಂದ್ರ, ಪ್ರಯೋಗಾಲಯ, ಔಷಧ ಮಳಿಗೆಯಿದೆ. ಜನತೆಗೆ ಪ್ರಮಾಣಿಕವಾಗಿ ಸೇವೆ ಕಲ್ಪಿಸಬೇಕಾದ ಆಂಬುಲೆನ್ಸ್‌ಗಳು ಬಡವರಿಂದ ಹಣ ಸುಲಿಗೆ ಮಾಡುತ್ತಿವೆ.
ಅನಾರೋಗ್ಯದಿಂದ ಬಳಲುವ ಸಾವಿರಾರು ಜನರು ನಿತ್ಯ ಜಿಲ್ಲಾಸ್ಪತ್ರೆಗೆ ಆಗಮಿಸುತ್ತಾರೆ. ಈ ವೇಳೆ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಉನ್ನತ ಮಟ್ಟದ ಚಿಕಿತ್ಸಾ ಕೇಂದ್ರಕ್ಕೆ ಶಿಫಾರಸು ಮಾಡುತ್ತಾರೆ. ಸರ್ಕಾರಿ ಆಸ್ಪತ್ರೆಯಿಂದ ಶಿವಮೊಗ್ಗ, ಮಂಗಳೂರು, ತುಮಕೂರಿನಲ್ಲಿರುವ ಪ್ರಮುಖ ಆಸ್ಪತ್ರೆಗಳಿಗೆ ಹೋಗಲು ಮುಂದಾಗುತ್ತಾರೆ. ಈ ವೇಳೆ ಆಂಬುಲೆನ್ಸ್ ಸೇವೆ ಅಗತ್ಯ. ಇನ್ನು ಕೆಲವರು ಪ್ರಕರಣಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟವರ ಶವ ಸಾಗಿಸಲು ಸಹ ಆಂಬುಲೆನ್ಸ್‌ಗಳು ಬೇಕೇಬೇಕು. ಪರಿಸ್ಥಿತಿಯ ಲಾಭ ಪಡೆಯುವ ಚಾಲಕರು ರೋಗಿಗಳು ಹಾಗೂ ಮೃತರ ಸಂಬಂಧಿಕರಿಂದ ಸಾವಿರಾರು ರೂ. ಪಡೆಯುತ್ತಿದ್ದಾರೆ. ಕರೊನಾ ಕಾಲದಲ್ಲಿ ಆರಂಭವಾದ ಈ ದಂಧೆ ನಿರಂತರವಾಗಿ ನಡೆದುಕೊಂಡು ಬಂದಿದೆ.
ಹೇರಬೇಕು ನಿಯಂತ್ರಣ:
ಕರೊನಾ ಸಂದರ್ಭ ಬಾಡಿಗೆ ವಾಹನಗಳನ್ನು ಆಂಬುಲೆನ್ಸ್‌ಗಳಾಗಿ ಬದಲಾಯಿಸಿಕೊಂಡಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ಎಂದು ವಿಂಗಡಿಸಲಾಗಿದೆ. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಹಾಗೂ ಖಾಸಗಿ ಆಂಬುಲೆನ್ಸ್‌ಗಳನ್ನು ನಿಯಂತ್ರಿಸುವವರು ಯಾರೂ ಇಲ್ಲದಂತಾಗಿದೆ. ಜನರನ್ನು ಸುಲಿಗೆ ಮಾಡುವಂತಹ ಆಂಬುಲೆನ್ಸ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ರಾಜ್ಯ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆಯಡಿ ಅವಕಾಶವಿದೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಅಧಿಕಾರವಿದೆ. ಪ್ರತ್ಯೇಕವಾಗಿ ನೋಂದಣಿ ಆಗಿರುವ ಖಾಸಗಿ ಆಂಬುಲೆನ್ಸ್‌ಗಳು ಕಾಯ್ದೆಯಡಿಗೆ ಬರುವುದಿಲ್ಲ. ಅವರು ಸಾರಿಗೆ ಇಲಾಖೆಯ ವ್ಯಾಪ್ತಿಗೆ ಬರುತ್ತಾರೆ. ಅವರ ವಿರುದ್ಧ ಸಾರಿಗೆ ಇಲಾಖೆ ಅಥವಾ ಜಿಲ್ಲಾಡಳಿತ ಕ್ರಮ ಕೈಗೊಳ್ಳಬಹುದು. ತೀವ್ರ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಮೃತಪಟ್ಟವರ ಶವವನ್ನು ಊರುಗಳಿಗೆ ಸಾಗಿಸುವ ಕಾರ್ಯವನ್ನು ಶ್ರದ್ಧಾಂಜಲಿ ವಾಹನ ಮಾಡುತ್ತದೆ. ಈ ವಾಹನ ಸೇವೆಯು ಉಚಿತ. ಅಂತಹ ಸಂದರ್ಭದಲ್ಲಿ ಮೃತರ ಸಂಬಂಧಿಕರು ಈ ವಾಹನ ಸೇವೆ ಪಡೆಯಲು ಮುಂದಾಗಬೇಕು. ಆದರೆ ಖಾಸಗಿಯವರು ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಒಪ್ಪಂದ ಮಾಡಿಕೊಂಡು ಖಾಸಗಿ ಆಂಬುಲೆನ್ಸ್‌ನ ವ್ಯವಸ್ಥೆ ಮಾಡಿಕೊಡುತ್ತಾರೆ.
ಅನ್ಯರ ವಾಹನಗಳೂ ಇಲ್ಲೇ ಪಾರ್ಕಿಂಗ್: ಜಿಲ್ಲಾಸ್ಪತ್ರೆಗೆ ಬರುವವರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಇದರಿಂದ ರೋಗಿಗಳನ್ನು ಕರೆದುಕೊಂಡು ಬರುವ ಸಂಬಂಧಿಕರ ವಾಹನಗಳ ಪಾರ್ಕಿಂಗ್‌ಗೆ ಪ್ರತ್ಯೇಕ ಜಾಗ ಗುರುತಿಸಿ ಟೆಂಡರ್ ಕರೆಯಲಾಗಿತ್ತು. ಆದರೆ ಯಾರೂ ಇದಕ್ಕೆ ಮುಂದೆ ಬಂದಿಲ್ಲ. ಆಸ್ಪತ್ರೆ ಆವರಣದಲ್ಲಿ ಖಾಸಗಿ ಆಂಬುಲೆನ್ಸ್‌ಗಳ ಜತೆಗೆ ಖಾಸಗಿ ವಾಹನಗಳ ಹಾವಳಿಯೂ ಹೆಚ್ಚಾಗಿರುವುದು ಕಂಡುಬಂದಿದೆ. ದೂರದ ಊರುಗಳಿಗೆ ಹೋಗುವವರು, ಕೆಲಸಗಳಿಗೆ ಹೋಗುವವರು ಆಸ್ಪತ್ರೆ ಆವರಣದಲ್ಲಿ ದ್ವಿಚಕ್ರ ವಾಹನ, ಕಾರುಗಳನ್ನು ನಿಲ್ಲಿಸಿ ಹೋಗುತ್ತಾರೆ. ಇದರಿಂದ ಆಸ್ಪತ್ರೆಗೆ ಬರುವವರ ವಾಹನಗಳನ್ನು ನಿಲ್ಲಿಸಲು ಜಾಗ ಇಲ್ಲದಂತಾಗಿದೆ.
ಆಸ್ಪತ್ರೆ ಆವರಣದಲ್ಲಿ ನಿಲ್ಲಿಸಲಾಗುತ್ತಿದ್ದ ಖಾಸಗಿ ಆಂಬುಲೆನ್ಸ್‌ಗಳನ್ನು ಹೊರಗೆ ಕಳುಹಿಸಲಾಗಿತ್ತು. ಅವರು ಮುಖ್ಯರಸ್ತೆಯಲ್ಲಿ ನಿಲ್ಲಿಸುತ್ತಿದ್ದರು. ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದನ್ನು ಗಮನಿಸಿದ ಪೊಲೀಸ್ ಇಲಾಖೆ ನಿರ್ದೇಶನದ ಮೇರೆಗೆ ಆಸ್ಪತ್ರೆ ಆವರಣದಲ್ಲೇ ನಿಲ್ಲಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ ಚಾಲಕರು ಎಲ್ಲೆಂದರಲ್ಲಿ ನಿಲ್ಲಿಸುತ್ತಿದ್ದು ಆವರಣದಲ್ಲಿ ಓಡಾಡುವವರಿಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದು, ಶೀಘ್ರದಲ್ಲೇ ಸಭೆ ನಡೆಸಿ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎನ್ನುತ್ತಾರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮೋಹನ್‌ಕುಮಾರ್.