

ಸಾಗರ: ತಾಲೂಕಿನ ಚನ್ನಶೆಟ್ಟಿಕೊಪ್ಪದಲ್ಲಿ ಮುಂದಿನ ವರ್ಷ ಮಾ.9ರಂದು ಜಿಲ್ಲಾ ಮಟ್ಟದ ಜಾನಪದ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ತಿಳಿಸಿದರು.
ಆನಂದಪುರದಲ್ಲಿ ಮಂಗಳವಾರ ಜಿಲ್ಲಾ ಜಾನಪದ ಪರಿಷತ್ ಸಾಗರ ತಾಲೂಕು ಮತ್ತು ಆನಂದಪುರ ಹೋಬಳಿ ಘಟಕದಿಂದ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಸಮ್ಮೇಳನ ನಡೆಸಲಾಗುತ್ತಿದೆ. ಚನ್ನಶೆಟ್ಟಿಕೊಪ್ಪದ ಚನ್ನಮ್ಮಾಜಿ ಯುವಕ ಸಂಘದ ಸಹಯೋಗದಲ್ಲಿ ಸಮ್ಮೇಳನ ನಡೆಯಲಿದೆ ಎಂದರು.ಜಿಲ್ಲೆಯ ಜಾನಪದ ಕಲಾತಂಡಗಳು, ಕಲಾವಿದರು ಒಂದೆಡೆ ಸೇರಿ ಜಾನಪದ ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಪ್ರತಿವರ್ಷ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಮೂಲಕ ಜಾನಪದ ಕಲೆಯನ್ನು ಉಳಿಸಿ, ಬೆಳೆಸುವ ಮತ್ತು ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ. ಜನಸಾಮಾನ್ಯರು ಜಾನಪದದತ್ತ ಆಕರ್ಷಿತರಾಗಲು ಇಂತಹ ಸಮ್ಮೇಳನದ ಅಗತ್ಯ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು.
ಸಮ್ಮೇಳನದ ಯಶಸ್ಸಿಗಾಗಿ ಎಂಟು ಉಪ ಸಮಿತಿಗಳನ್ನು ರಚಿಸಲಾಗಿದೆ. ಬೆಳಗ್ಗೆ 9ಕ್ಕೆ ಆರಂಭವಾಗುವ ಸಮ್ಮೇಳನ ಮಧ್ಯರಾತ್ರಿವರೆಗೆ ನಡೆಯಲಿದೆ. ರಾಜ್ಯದ ಬೇರೆಬೇರೆ ಭಾಗಗಳಿಂದ ಕಲಾತಂಡಗಳು ಪಾಲ್ಗೊಳ್ಳುತ್ತಿವೆ. ವಿಚಾರ ಸಂಕಿರಣದಲ್ಲಿ ಜಾನಪದ ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನದ ಅಧ್ಯಕ್ಷರನ್ನು ಶೀಘ್ರವೇ ಆಯ್ಕೆ ಮಾಡಲಾಗುತ್ತದೆ. ರಾಜ್ಯ ಸಮಿತಿ ಕಲಾವಿದರ ಮಾಹಿತಿ ಕುರಿತ ಪುಸ್ತಕ ಹೊರತರುವ ಚಿಂತನೆ ನಡೆಸಿದ್ದು, ಹಾಗಾಗಿ ಈ ಸಮ್ಮೇಳನದಲ್ಲಿ ಕಲಾವಿದರ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು. ಬಿ.ಟಾಕಪ್ಪ, ಗುಡ್ಡಪ್ಪ ಜೋಗಿ, ವಿ.ಟಿ.ಸ್ವಾಮಿ, ಸತ್ಯನಾರಾಯಣ ಸಿರಿವಂತೆ, ಬಿ.ಡಿ.ರವಿಕುಮಾರ್, ಡಾ. ವೆಂಕಟೇಶ್ ಜೋಯಿಸ್, ವೆಂಕಟೇಶ್ ಚಂದಳ್ಳಿ, ಸ್ವಾಮಿರಾವ್, ಗಣಪತಿ, ಜಯಪ್ಪ, ನಾಗರಾಜ ಜೋಗಿ ಇತರರಿದ್ದರು.