

ಸಾಗರ: ಅಡಕೆ ಬೆಳೆಗಾರರು ಸಾಕಷ್ಟು ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಿದ್ದಾರೆ. ಮಲೆನಾಡಿನ ಜನರ ಆದಾಯದ ಮೂಲವೇ ಅಡಕೆ ಬೆಳೆ. ಬೆಳೆಗಾರರ ಸಮಸ್ಯೆಗಳ ಬಗ್ಗೆ ಚಿಂತನ-ಮಂಥನ ನಡೆಸಿ ನಿರ್ಣಯ ಕೈಗೊಳ್ಳಲು ಜ.18ರಂದು ಸಮಾವೇಶ ನಡೆಸಲಾಗುತ್ತಿದೆ. ಕನಿಷ್ಠ 25 ಸಾವಿರ ಬೆಳೆಗಾರರು ಪಾಲ್ಗೊಳ್ಳುವಂತೆ ಮಾಡುವ ಹೊಣೆ ನಮ್ಮೆಲ್ಲರದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಹೇಳಿದರು.
ಜ.18ರಂದು ಸಾಗರದಲ್ಲಿ ಆಯೋಜಿಸಿರುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಷೋ ಕಾರ್ಡ್ ಬಿಡುಗಡೆ ಮಾಡಿ ಮಾತನಾಡಿದರು.
ಬೆಳೆಗಾರರು, ಬೆಳೆ ಅವಲಂಬಿತರು, ಕೂಲಿ ಕಾರ್ಮಿಕರು ಎಲ್ಲರೂ ಪಾಲ್ಗೊಳ್ಳುವಂತೆ ಮಾಡಬೇಕಿದೆ. ಬೆಳೆಗಾರರ ಮನೆ ಮನೆಗೆ ಆಡಿಯೋ, ವಿಡಿಯೋ, ಕರಪತ್ರ, ಷೋ ಕಾರ್ಡ್ ಸೇರಿ ಸಮಾವೇಶದ ಪ್ರತಿ ಮಾಹಿತಿಯನ್ನೂ ತಲುಪಿಸಬೇಕು. ಪಕ್ಷಾತೀತ, ಜಾತ್ಯಾತೀತವಾಗಿ ಸಮಾವೇಶ ಆಯೋಜನೆ ಮಾಡಲಾಗಿದೆ. ಎಲ್ಲ ರಾಜಕೀಯ ಪಕ್ಷಗಳ ಪ್ರಮುಖರು ಸಮಾವೇಶದ ಯಶಸ್ಸಿಗೆ ಕೈಜೋಡಿಸಬೇಕು ಎಂದರು.
ಆಪ್ಕೋಸ್ ಅಧ್ಯಕ್ಷ ಬಿ.ಎ.ಇಂದೂಧರ ಬೇಸೂರು ಮಾತನಾಡಿ, ಸಮಾವೇಶ ಯಶಸ್ಸಿಗೆ ಅಡಕೆ ಬೆಳೆಯನ್ನು ಪ್ರತಿನಿಧಿಸುವ ಎಲ್ಲ ಸಹಕಾರ ಸಂಘಗಳು ಕೈಜೋಡಿಸಲಿವೆ. ಅಡಕೆ ಮೇಲೆ ತೂಗುತ್ತಿರುವ ತೂಗುಗತ್ತಿಯನ್ನು ತೊಡೆದುಹಾಕಲು ಸಮಾವೇಶದಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಪ್ರಮುಖವಾಗಿರುತ್ತದೆ. ಅಡಕೆ ಬೆಳೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ಅಗತ್ಯವಿದೆ. ಸಮಾವೇಶ ಇದಕ್ಕೆ ದಿಕ್ಸೂಚಿಯಾಗಲಿದೆ ಎಂದು ತಿಳಿಸಿದರು.
ತಾಪಂ ಮಾಜಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಅಡಕೆ ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟವನ್ನು ಸಂಸದರ ಮೂಲಕ ನಿಯೋಗದಲ್ಲಿ ತೆರಳಿ ಕೇಂದ್ರ ಕೃಷಿ ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಸಚಿವರು ಪೂರಕವಾಗಿ ಸ್ಪಂದಿಸಿದ್ದು, ಬೆಳೆಗಾರರ ಪರವಾಗಿ ಸಹಮತ ಹೊಂದಿದ್ದಾರೆ. ಜನಶಕ್ತಿಯ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಕೆಲಸವನ್ನು ಬೆಳೆಗಾರರು ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸಮಾವೇಶ ಪ್ರಮುಖ ವೇದಿಕೆಯಾಗಲಿದೆ ಎಂದರು.
ತೋಟಗಾರ್ಸ್ ಅಧ್ಯಕ್ಷ ಕೆ.ಸಿ.ದೇವಪ್ಪ ಷೋ ಕಾರ್ಡ್ ಬಿಡುಗಡೆ ಮಾಡಿದರು. ಆರ್.ಎಸ್.ಗಿರಿ, ಅನಿಲ್ ಒಡೆಯರ್, ಬಿ.ಎಚ್.ರಾಘವೇಂದ್ರ, ಚೇತನರಾಜ್ ಕಣ್ಣೂರು, ರಾಜೇಂದ್ರ ಖಂಡಿಕಾ, ಶ್ರೀಕರ, ಶ್ರೀಧರ್, ನಾರಾಯಣಮೂರ್ತಿ ಇತರರಿದ್ದರು.