

ತಿ.ನರಸೀಪುರ: ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಶಿಸ್ತು, ಬದ್ಧತೆ, ಸಂಯಮ ಹಾಗೂ ತಾಳ್ಮೆಯನ್ನು ಇಂದಿನ ಯುವ ಕ್ರಿಕೆಟಿಗರು ಅಳವಡಿಸಿಕೊಳ್ಳಬೇಕು ಎಂದು ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ವೈದ್ಯಕೀಯ ವಿಭಾಗದ ಅಧ್ಯಕ್ಷ ಡಾ.ಬಿ.ಪ್ರದೀಪ್ ಹೇಳಿದರು.
ತಾಲೂಕಿನ ಚಿದರವಳ್ಳಿ ಪ್ರೌಢಶಾಲೆಯಲ್ಲಿ ರಾಹುಲ್ ದ್ರಾವಿಡ್ ಅವರ 50 ವರ್ಷದ ಹುಟ್ಟುಹಬ್ಬದ ಅಂಗವಾಗಿ ಮಕ್ಕಳಿಗೆ ಉಚಿತವಾಗಿ ನೋಟ್‌ಬುಕ್ ಹಾಗೂ ಲೇಖನ ಪರಿಕರಗಳನ್ನು ವಿತರಿಸಿ ಮಾತನಾಡಿದರು.ರಾಹುಲ್ ದ್ರಾವಿಡ್ ಅವರು ಭಾರತೀಯ ಕ್ರಿಕೆಟ್‌ನಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸುವಂತಾಗಬೇಕು. ಮುಂದಿನ ಬಾರಿ ನಡೆಯಲಿರುವ ಮೈಸೂರಿನ ನಾಡಹಬ್ಬ ದಸರಾ ಉದ್ಘಾಟನೆಯನ್ನು ಅವರಿಂದಲೇ ನೆರವೇರಿಸುವಂತಾಗಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು. ಇದರಿಂದ ನೀವು ಕೂಡ ರಾಹುಲ್ ದ್ರಾವಿಡ್ ಅವರಂತೆ ಖ್ಯಾತಿ ಪಡೆಯಬಹುದೆಂದರು. ಮುಖ್ಯ ಶಿಕ್ಷಕಿ ಗ್ರೇಸ್ ಪ್ರೇಮ್ ಕುಮಾರಿ, ಜಿಲ್ಲಾ ಕಾಂಗ್ರೆಸ್ ಗ್ರಾಮಾಂತರ ಕಾರ್ಯದರ್ಶಿ ನಟರಾಜು, ಕಿರುಗಸೂರು ಗ್ರಾಪಂ ಸದಸ್ಯ ನಿಂಗರಾಜು ಮತ್ತಿತರರು ಹಾಜರಿದ್ದರು.